ಲಿಂ.ಕಾಯಕಯೋಗಿ ಚೆನ್ನವೀರ ಮಹಾಸ್ವಾಮೀಜಿಯವರ ೧೩೧ನೇಯ ಜಯಂತೋತ್ಸವ | ಸಾರಂಗಶ್ರೀ ಕೃಷಿ ಪ್ರಶಸ್ತಿ ಪ್ರಧಾನ | ಸುನೀಲ ನಾರಾಯಣಕರ ಗೆ ಪ್ರಶಸ್ತಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಲಿಂ.ಚೆನ್ನವೀರ ಮಹಾಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ ಕೃಷಿಯ ಜೀವನವನ್ನು ಮೈಗೂಡಿಸಿಕೊಂಡವರು. ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯವನ್ನು ಮಾಡುವುದರ ಜೊತೆಗೆ ಕೃಷಿ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡುವ ಮೂಲಕ ಕಾಯಕಯೋಗಿ ಯಾದವರು ಎಂದು ಮರೆಗುದ್ದಿ ಅಡವಿ ಸಿದ್ದೇಶ್ವರ ಮಠದ ಡಾ.ನಿರುಪಾಧೀಶ್ವರ ಮಹಾಸ್ವಾಮಿಗಳು ಹೇಳದರು.
ಸಿಂದಗಿಯ ಸಾರಂಗಮಠದ ಪರಮಪೂಜ್ಯ ಲಿಂಗೈಕ್ಯ ಕಾಯಕಯೋಗಿ ಚೆನ್ನವೀರ ಮಹಾಸ್ವಾಮೀಜಿಯವರ ೧೩೧ನೇಯ ಜಯಂತೋತ್ಸವ ನಿಮಿತ್ಯವಾಗಿ ಲಿಂಗೈಕ್ಯ ಶ್ರೀಗಳ ಹೆಸರಿನ ಮೇಲೆ ಕೊಡಮಾಡುವ ಸಾರಂಗಶ್ರೀ ಕೃಷಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಗಳ ಬದುಕು ನಿಜವಾಗಲೂ ಒಂದು ಇತಿಹಾಸ. ಅವರ ವ್ಯಕ್ತಿತ್ವದ ಬಗ್ಗೆ ಅವರ ಕಾರ್ಯದ ಬಗ್ಗೆ ನಾವು ಸದಾ ಸ್ಮರಿಸಿಕೊಂಡು ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆಗೆ ಪಸರಿಸುವ ಕಾರ್ಯ ಶ್ರೀಮಠದಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಾರಂಗ ಶ್ರೀ ಕೃಷಿ ಪ್ರಶಸ್ತಿ ಪುರಸ್ಕೃತ ಸುನೀಲ ನಾರಾಯಣಕರ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಕೃಷಿ ಬಗ್ಗೆ ಬಹಳಷ್ಟು ಜನ ನಿರಾಸೆಯನ್ನು ಮೂಡಿಸುತ್ತಿದ್ದಾರೆ. ಇದು ನಮಗೆ ಮಾರಕ. ಮಣ್ಣಲ್ಲಿ ಮಣ್ಣಾಗಿ ದುಡಿದವರಿಗೆ ಯಾವ ರೋಗಗಳು ಬರುವುದಿಲ್ಲ. ಶಿಕ್ಷಣದಲ್ಲಿ ಕೃಷಿಯ ಬಗ್ಗೆ ಹೆಚ್ಚು ಅವಕಾಶ ನೀಡಬೇಕು. ಪಾಲಕರು ತಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಮತ್ತು ಬೆಳೆಗಳ ಬಗ್ಗೆ ವಿವರಣೆಗಳನ್ನು ನೀಡುತ್ತಿರಬೇಕು. ಕೃಷಿಯನ್ನು ಪ್ರೀತಿಸುವ ಗುಣ ನಮ್ಮಲ್ಲಿ ಮೂಡಬೇಕಾಗಿದೆ ಎಂದರು.
ಈ ವೇಳೆ ಜಮಖಂಡಿಯ ಕೊಣ್ಣೂರು ಹೊರಗಿನಮಠದ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಕಾಯಕಯೋಗಿ ಲಿಂ.ಚೆನ್ನವೀರ ಮಹಾಸ್ವಾಮಿಗಳು ಕೃಷಿ ಸಂತನಾಗಿ ಬದುಕನ್ನ ಮಾಡಿದಂತವರು. ಅವರ ಜಯಂತಿಯೆಂದು ಶ್ರೀಮಠ ಉತ್ತಮ ರೈತನಿಗೆ ಗುರುತಿಸಿ ಪ್ರತಿ ವರ್ಷ ಸಾರಂಗ ಶ್ರೀ ಕೃಷಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಲಿಂ.ಕಾಯಕಯೋಗಿ ಚನ್ನವೀರ ಮಹಾಸ್ವಾಮಿಗಳು ಮಾಡಿದ ಕಾರ್ಯ ಸ್ಮರಿಸಿ ಅವರೊಬ್ಬರು ಔದಾರ್ಯದ ಗುರುಗಳಾಗಿದ್ದರು ಎಂದರು.
ಈ ವೇಳೆ ಮಹಾ ತಪಸ್ವಿ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಕುರಿತಾಗಿ ಗೌರ್ ಗ್ರಾಮದ ಶಿವಲಿಂಗಯ್ಯ ಹಿರೇಮಠ ಪ್ರವಚನ ನೆರವೇರಿಸಿದರು.
ಡಾ.ರವಿ ಗೋಲಾ ಮತ್ತು ಪೂಜಾ ಹಿರೇಮಠ ನಿರೂಪಿಸಿದರು. ಡಾ.ಶರಣಬಸವ ಜೋಗೂರ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಪಡಶೆಟ್ಟಿ, ಅಶೋಕ ವಾರದ, ಚನ್ನಪ್ಪ ಕತ್ತಿ, ವಿರೇಶ ಜೋಗುರ, ಗವಿಸಿದ್ದಪ್ಪೊ ಆನೆಗುಂದಿ, ಎಂ.ಎಸ್.ಹೈಯಾಳಕರ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

