ಓತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕಿನಲ್ಲಿ ನಡೆದ ಘಟನೆ | ಆಡಳಿತ ಮಂಡಳಿ ಅವ್ಯವಹಾರ ತನಿಖೆಗೆ ಆಗ್ರಹ | ಶಿವಾಜಿ ಮೆಟಗಾರ ಆರೋಪ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕಿನಲ್ಲಿ ೨೦೨೪ರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿ ಸಂಗಮ್ಮ ಕೊರಬು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸದರಿ ಸಂಘದ ಅಧ್ಯಕ್ಷರನ್ನು ಒಳಗೊಂಡು ನಿರ್ದೇಶಕರು ಸಂಘದ ಸಭೆಯಲ್ಲಿ ದುರಾಡಳಿತದಿಂದ ೧೫.೧೧.೨೦೨೪ರ ತುರ್ತು ಸಭೆಯಲ್ಲಿ ಹಣ ದುರುಪಯೋಗ ಮಾಡಿಕೊಂಡಿದಲ್ಲದೆ ವಜಾಗೊಂಡಿದ್ದ ಕಾರ್ಯದರ್ಶಿ ಅಂಬಣ್ಣ ಹೂಗಾರ ಅವರನ್ನು ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿಕೊಳ್ಳಲು ಸಭೆಯ ನಕಲಿ ಠರಾವು ಪಾಸ್ ಮಾಡಿದ್ದಾರೆ ಎಂದು ತಳವಾರ ಸಮಾಜದ ರಾಜ್ಯ ಮಹಾಸಭಾ ಅಧ್ಯಕ್ಷ ಶಿವಾಜಿ ಮೆಟಗಾರ ಆರೋಪಿಸಿದರು.
ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕಿನಲ್ಲಿ ನಡೆಯುತ್ತಿರುವ ಆಡಳಿತ ಮಂಡಳಿಯ ಅವ್ಯವಹಾರವನ್ನು ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ತಳವಾರ ಸಮಾಜದ ರಾಜ್ಯ ಮಹಾಸಭಾದಿಂದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಾನೂನಾತ್ಮಕವಾಗಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಂಗಮ್ಮ ಕೊರಬು ಅವರ ಹೆಸರನ್ನು ಕೈಬಿಟ್ಟು ಕೋರಂ ಭರ್ತಿಗಾಗಿ ವೃತ್ತಿಪರ ನಿರ್ದೇಶಕರಾಗಿ ನಿಂಗನಗೌಡ ಬಿರಾದಾರ ಅವರನ್ನು ಕಾನೂನು ಬಾಹಿರವಾಗಿ ಠರಾವಿನಲ್ಲಿ ನಿರ್ದೇಶಕರಾಗಿ ಸೇರ್ಪಡೆ ಮಾಡಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಶರಣಪ್ಪ ಗಿಡದಮನಿಯವರು ತಳವಾರ ಸಮಾಜದ ಮತ್ತು ಕಾನೂನಾತ್ಮಕವಾಗಿ ಆಯ್ಕೆಯಾದ ಸಂಗಮ್ಮ ಕೊರಬು ಅವರಿಗೆ ಅನ್ಯಾಯ ಮಾಡಿದ್ದಲ್ಲದೇ ತಳವಾರ ಸಮಾಜಕ್ಕೆ ಅಗೌರವ ನೀಡಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಧ್ಯಕ್ಷರನ್ನ ವಜಾಗೊಳಿಸಿ ತಳವಾರ ಸಮಾಜಕ್ಕೆ ನ್ಯಾಯ ಕೊಡಬೇಕು. ಒಂದು ವೇಳೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಒತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕ ಮತ್ತು ಇಂಡಿ ಉಪವಿಭಾಗದ ಸಹಕಾರಿ ಸಂಘದ ಸಹಾಯಕ ನಿಬಂಧಕರ ಕಚೇರಿಗೆ ಬೀಗ ಜಡೆದು ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ತಳವಾರ್ ಸಮಾಜದ ಮುಖಂಡ ಪುರಸಭೆ ಸದಸ್ಯ ಹಣಮಂತ ಸುಣಗಾರ, ಬಾಬು ನಾಟಿಕಾರ, ಈರಣ್ಣ ಕುರಿ, ಯಲ್ಲಪ್ಪ ಬಳುಂಡಗಿ, ಪೀರು ಕೆರೂರ್, ಕಂಟೆಪ್ಪ ಡಪಿನ್, ಜಟ್ಟೆಪ್ಪ ಹರನಾಳ, ಸಂಗಮೇಶ್ ಬಿರಾದಾರ್, ಸಿಕಿಂದರ್ ಕೊರಬು, ಹವಳಪ್ಪ ನಾಟೀಕಾರ, ಯಲ್ಲಪ್ಪ ಗುಡ್ಡಳ್ಳಿ, ಸಾಯಬಣ್ಣ ಗೋಲಗೇರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

