ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಅಂದದ ಶೌಚಾಲಯ-ಆನಂದದ ಜೀವನ ಎಂಬ ಘೋಷವಾಕ್ಯದೊಂದಿಗೆ ನ.೧೯ರಿಂದ ಡಿ.೧೨ರವರೆಗೆ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳುವ ಕುರಿತು ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಜರುಗಿತು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ದಿನಾಂಕ: ೧೯.೧೧.೨೦೨೪ ರಿಂದ ದಿನಾಂಕ:೧೦.೧೨.೨೦೨೪ ರವರೆಗೆ ನಿರಂತರವಾಗಿ “ನಮ್ಮ ಶೌಚಾಲಯ -ನಮ್ಮ ಗೌರವ” ಎಂಬ ಶಿರ್ಷಿಕೆ ಹಾಗೂ “ಅಂದದ ಶೌಚಾಲಯ-ಆನಂದದ ಜೀವನ” ಎಂಬ ಘೋಷವಾಕ್ಯದೊಂದಿಗೆ ವಿಶೇಷ ಆಂದೋಲನವನ್ನು ಆಯೋಜನೆ ಮಾಡಲು ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾತ್ರ ಬಹುಮುಖ್ಯವಾಗಿದ್ದು, ಅಂಗನವಾಡಿಗಳಲ್ಲಿ ಶೌಚಾಲಯದ ಪ್ರಸ್ತುತ ವ್ಯವಸ್ಥೆ ಹಾಗೂ ಪರಿಸರ ಸ್ನೇಹಿ ಶೌಚಾಲಯಗಳ ನಿರ್ಮಾಣ, ಅಂಗನವಾಡಿ, ಶಾಲಾ-ಕಾಲೇಜುಗಳ ಸುತ್ತಮುತ್ತಲೂ ೫ ಮೀಟರ್ ದೂರದವರೆಗೆ ಸ್ವಚ್ಛತೆಯನ್ನು ಕಾಪಾಡುವುದು, ಸೇರಿದಂತೆ ಎಲ್ಲ ಕಛೇರಿಗಳಲ್ಲಿಯೂ ಪ್ರತಿದಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಯಿತು.
ಶೌಚಾಲಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಶೌಚಾಲಯವಿಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ಸಹಾಯಧನದಿಂದ ಶೌಚಾಲಯ ಕಟ್ಟಿಸಿ. ನಿಮ್ಮ ಮನೆಯ ಸುತ್ತ-ಮುತ್ತ ನೈರ್ಮಲ್ಯ ಇಟ್ಟುಕೊಳ್ಳಬೇಕು. ಮಲೇರಿಯಾ, ಡೆಂಗ್ಯೂ ಹಾಗೂ ಇತರೆ ಆರೋಗ್ಯದ ಸಮಸ್ಯೆ ಆಗದಂತೆ ಎಚ್ಚರವಹಿಸಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಾಲೆ–ಕಾಲೇಜುಗಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು, ಹೊಸದಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕಾದಲ್ಲಿ ಅನುಮೋದನೆಗಾಗಿ ಕ್ರಿಯಾಯೋಜನೆಯನ್ನು ಸಲ್ಲಿಸಿ ಕೂಡಲೇ ಹೊಸ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಯ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರಸ್ತುತ ಸ್ಥತಿಯಲ್ಲಿರುವ ಶೌಚಾಲಯಗಳ ಕುರಿತು ಮಾಹಿತಿ ಪಡೆದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವ್ಯಯಕ್ತಿಕ ಶೌಚಾಲಯ, ಸಮುದಾಯ ಶೌಚಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಶೌಚಾಲಯಗಳಿಗೆ ನೀರಿನ ವ್ಯವಸ್ಥೆಯ ಕುರಿತು ಗಮನ ಹರಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ೨೨ ದಿನಗಳ ಕಾಲ ನಿರಂತರವಾಗಿ ಶೌಚಾಲಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ ಕೋಶ) ಬಿ. ಎಸ್. ರಾಠೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಕೆ. ಚವ್ಹಾಣ, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸಂಪತ್ ಗುಣಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಬಸವರಾಜ ಕುಂಬಾರ, ಸಣ್ಣ ನೀರಾವರಿ ಇಲಾಖೆಯ ಕಿರಿಯ ಅಭಿಯಂತರ ಎಸ್.ಎಮ್. ದೇಸಾಯಿ, ಜಿಲ್ಲಾ ಪಂಚಾಯತಿಯ ಎಸ್‌ಬಿಎಂ ಸಮಾಲೋಚಕರು ಉಪಸ್ಥಿತರಿದ್ದರು.

