ತೊರವಿಯಲ್ಲಿ ನಮ್ಮ ಶೌಚಾಲಯ-ನಮ್ಮ ಗೌರವ ಧ್ಯೇಯವಾಕ್ಯದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ-೨೦೨೪
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ನಮ್ಮ ಶೌಚಾಲಯ-ನಮ್ಮ ಗೌರವ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಮತ್ತು ಶಾಲಾ ಮಕ್ಕಳನ್ನು ಒಳಗೊಂಡಂತೆ “ವಿಶ್ವ ಶೌಚಾಲಯ ದಿನಾಚರಣೆ”ಯ ಮಹತ್ವ ಸಾರುವ ಅಭಿಯಾನವನ್ನು ನ.೧೯ ರಿಂದ ಡಿ.೧೨ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆ ಮನೆಯಲ್ಲಿಯೂ ಶೌಚಾಲಯ ಕಟ್ಟಿಸಿಕೊಂಡು ಪ್ರತಿಯೊಬ್ಬರು ಶೌಚಾಲಯವನ್ನು ಬಳಸಬೇಕು, ಸ್ವಚ್ಛತೆಯಿಂದ ನಿರ್ವಹಣೆ ಮಾಡಬೇಕು. ಈ ಮೂಲಕ ಬಯಲು ಬರ್ಹಿದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಹೇಳಿದರು.
ಪ್ರತಿಯೊಬ್ಬರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಬಯಲು ಶೌಚಾಲಯ ತ್ಯಜಿಸಿ, ಉತ್ತಮ ಹಾಗೂ ಸ್ಚಚ್ಚವಾದ ಶೌಚಾಲಯಗಳನ್ನು ಬಳಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಶೌಚಾಲಯ ಹೊಂದಿಲ್ಲದವರು “ಸಿಟಿಜನ್ ಪೋರ್ಟಲ್” ಮೂಲಕ ಅರ್ಜಿಗಳನ್ನು ಸಲ್ಲಿಸಿ ಹೊಸದಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲಾ ಮಕ್ಕಳು ಉದ್ದೇಶಿಸಿ ಮಾತನಾಡಿದ ಅವರು, ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಊಟ ಮಾಡುವುದಕ್ಕಿಂತ ಪೂರ್ವ ಕೈಗಳನ್ನು ಸಾಬೂನಿನಿಂದ ಸ್ಚಚ್ಚವಾಗಿ ತೊಳೆದುಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ತೊರವಿ ಗ್ರಾಮ ಪಂಚಾಯತಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು “ವಿಶ್ವ ಶೌಚಾಲಯ ದಿನಾಚರಣೆಯ” ಪ್ರಯುಕ್ತ ಶೌಚಾಲಯ ಬಳಕೆ ಬಗ್ಗೆ ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡಿ ಸಿಇಓ ರವರ ಪ್ರಶಂಶೆಗೆ ಪಾತ್ರರಾದರು. ಶಾಲಾ ಮಕ್ಕಳು ಆವರಣಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಕುರಿತು ಅಕ್ಷರಗಳನ್ನು ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು(ಡಿ.ಆರ್.ಡಿ.ಎ ಕೋಶ) ಬಿ. ಎಸ್. ರಾಠೋಡ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪದ್ಮಾಬಾಯಿ ರೆವಣ್ಣಸಿದ್ಧ ನಡಗಡ್ಡಿ, ತಿಕೋಟಾ ತಾಲೂಕು ಪಂಚಾಯತಿಯ ತಾಲೂಕು ಯೋಜನಾಧಿಕಾರಿಗಳಾದ ಆಯೇಷಾ ಸಾಲೋಟಗಿ, ತೊರವಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ತುಂಗಳ, ಸರ್ಕಾರಿ ಶಾಲಾ ಮುಖ್ಯ ಗುರುಗಳಾದ ಆನಂದ ಜಾಧವ, ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು, ಸರ್ವ ಸದ್ಯಸರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು, ಸರ್ಕಾರಿ ಶಾಲೆಯ ಶಿಕ್ಷಕರು ಇತರರು ಉಪಸ್ಥಿತರಿದ್ದರು.

