ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಜಾತಿಗಳ ಶ್ರೇಣೀಕೃತ ವ್ಯವಸ್ಥೆಯನ್ನು ಅಳಿಸಿ ಮಾನವ ಕುಲವೊಂದೇ ಎಂದು ಎಷ್ಟೇ ಪ್ರತಿಪಾದಿಸುತ್ತಾ ಬಂದಿದ್ದರೂ ಶ್ರೇಣೀಕೃತ ವ್ಯವಸ್ಥೆ ಅಳಿಯುತ್ತಿಲ್ಲ ಎಂದು ಎಸ್.ಆರ್.ವಿಭೂತಿ ಹೇಳಿದರು.
ಸೋಮವಾರ ಇಲ್ಲಿನ ಹನುಮಾನ್ ದೇವಾಲಯದ ಆವರಣದಲ್ಲಿ ಶ್ರೀ ರೇವಣಸಿದ್ದೇಶ್ವರ ಹಾಲುಮತ ಕ್ಷೇಮಾಭಿವೃದ್ಧಿ ಸಂಸ್ಥೆಯವತಿಯಿಂದ ನಡೆದ ಸಂತಶ್ರೇಷ್ಠ ಕನಕದಾಸ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಾತಿ ವ್ಯವಸ್ಥೆ ತೊಲಗಿಸಲು ಬಸವಣ್ಣನವರು ಇವನಾರವ ಇವನಾರವ ಎನ್ನದಿರಿ ಇವ ನಮ್ಮವ ಎನ್ನಿರಿ ಎಂದು ಹೇಳಿದ್ದರೆ ಸಂತಶ್ರೇಷ್ಠ ಕನಕದಾಸ ಅವರು ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಹೇಳಿದ್ದಾರೆ. ಅಂಥ ಮಹಾನ್ ಚೇತನಗಳ ಆಶಯದಂತೆ ಆಲಮಟ್ಟಿಯ ರೇವಣಸಿದ್ದೇಶ್ವರ ಸಂಸ್ಥೆಯವರೂ ಕೂಡ ಇಲ್ಲಿರುವ ಎಲ್ಲಾ ಜಾತಿ ಜನಾಂಗದವರನ್ನು ಕರೆದು ಎಲ್ಲಾ ಧರ್ಮದವರಿಗೆ ಸಂತಶ್ರೇಷ್ಠ ಕನಕದಾಸ ಅವರ ವ್ಯಕ್ತಿತ್ವದ ಪರಿಚಯ ಮಾಡುವದರೊಂದಿಗೆ ಸವರ್ಣೀಯ, ದಲಿತ, ಹಿಂದು-ಮುಸ್ಲಿಂ ಕ್ರೈಸ್ತ ಎನ್ನದೇ ಎಲ್ಲರಿಗೂ ಸಮಾನ ವೇದಿಕೆ ಕಲ್ಪಿಸಿರುವುದು ಸಂತಸದಾಯಕಯವಾಗಿದೆ ಎಂದು ಬಣ್ಣಿಸಿದರು.
ವಿಶ್ರಾಂತ ಸಹಾಯಕ ಅಭಿಯಂತರ ಎ.ಎ.ಬಿಲ್ವಾಡ್ ಹಾಗೂ ಗ್ರಾಪಂ. ಮಾಜಿಸದಸ್ಯ ಎಚ್.ಎಫ್.ಕಟ್ಟಿಮನಿ ಮಾತನಾಡಿ, ದೇವರು ಹೊರಗೆಲ್ಲಿಯೂ ಇಲ್ಲ ಅವ ನಮ್ಮೊಳಗೆ ಇದ್ದಾನೆ. ಸುಳಿದ ಸೂಸುವ ಗಾಳಿ, ಜುಳುಜುಳು ಎಂದು ಹರಿಯುವ ನೀರು, ಬೆಂಕಿ, ಸೂರ್ಯ-ಚಂದ್ರ ಹಾಗೂ ಭೂಮಿ ಎಂದಾದರೂ ಹೆಣ್ಣು-ಗಂಡು, ಸವರ್ಣೀಯ-ದಲಿತ, ಹಿಂದು-ಮುಸ್ಲಿಮ್-ಕ್ರೈಸ್ತರಿಗೆ ಎಂದಾದರೂ ಭೇದ ಎಣಿಸಿವೆಯಾ? ಪಂಚಭೂತಗಳು ಎಲ್ಲರನ್ನೂ ಸಮಾನವಾಗಿ ಕಂಡಿದ್ದರೂ ಕೂಡ ಮಾನವ ಅದರಲ್ಲೂ ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಕೂಡ ಸಮಸಮಾಜ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಹೇಳಿದರು.
ಗ್ರಾಪಂ. ಮಾಜಿಉಪಾಧ್ಯಕ್ಷ ಎನ್.ಎ.ಪಾಟೀಲ್ ಮಾತನಾಡಿ, ಸಂತರು, ದಾರ್ಶನಿಕರನ್ನು ಜಾತಿ ವ್ಯವಸ್ಥೆಯಲ್ಲಿ ಯಾರೂ ನೋಡದೇ ಮಹಾನ್ ಚೇತನಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಶಂಕರ ಜಲ್ಲಿ ಅಧ್ಯಕ್ಷತೆವಹಿಸಿದ್ದರು.
ಸಾನಿಧ್ಯವನ್ನು ಚಂದ್ರಾದೇವಿ ಧರ್ಮರ ಮಠದ ಧರ್ಮಾಧಿಕಾರಿ ಚಂದ್ರಶೇಖರ ಧರ್ಮರ ವಹಿಸಿದ್ದರು.
ಗ್ರಾಪಂ. ಸದಸ್ಯೆ ಶಕುಂತಲಾ ಗೌಡರ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ. ಅಧ್ಯಕ್ಷೆ ಕವಿತಾ ಬಡಿಗೇರ, ಉಪಾಧ್ಯಕ್ಷೆ ಸಿದ್ದಮ್ಮ ವಾಲಿಕಾರ, ಚಂದ್ರಸೇನ ದೇಸಾಯಿ, ಗೈಬುಸಾಬ ಯಂಡಿಗೇರಿ, ರಮೇಶ ಆಲಮಟ್ಟಿ, ಬಸವರಾಜ ಸಾತಿಹಾಳ, ಮಹಾಂತೇಶ ಒಡೆಯರ, ಭೀಮಾಶಂಕರ ಉದಂಡಿ, ವೆಂಕಟೇಶ ವಡ್ಡರ, ಲಾಲಪ್ಪ ಲಮಾಣಿ, ಎಂ.ಡಿ.ಬಾಗಲಕೋಟ, ಯಲಗೂರದಪ್ಪ ಟುಬಾಕಿ, ಶಾಂತಪ್ಪ ಹೆರಕಲ್ಲ, ಚಂದ್ರವ್ವ ಧರ್ಮರ, ಮಂಜುನಾಥ ಚವ್ಹಾಣ, ಮಹೇಶ ಧರ್ಮರ ಮೊದಲಾದವರಿದ್ದರು. ನಾಗಪ್ಪ ವಾಲಿಕಾರ ಸ್ವಾಗತಿಸಿದರು.
ಗ್ರಾಪಂ.ಸದಸ್ಯ ಮಾಸೂಬಾ ಕಟ್ಟಿಮನಿ ನಿರೂಪಿಸಿದರು. ಎನ್.ಎಚ್.ಗಣಿ ವಂದಿಸಿದರು.

