ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಸ್ಥಾನ ಉದ್ಘಾಟಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾಯಕ ಮತ್ತು ಭಕ್ತಿಗೆ ಹೆಸರಾಗಿರುವ ಬಂಜಾರಾ ಸಮಾಜ ತಮ್ಮ ಕಲೆ, ಸಂಸ್ಕೃತಿ, ಉಡುಪಿನ ಇತಿಹಾಸವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಕ್ಷೇತ್ರದ ಹಂಚಿನಾಳ ಎಲ್.ಟಿ- 3 ರಲ್ಲಿ ಶ್ರೀ ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಂಜಾರಾ ಸಮುದಾಯದ ಜನ ಶ್ರಮಜೀವಿಗಳಾಗಿದ್ದು, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳಡಿ ಜೀವನ ಸಾಗಿಸುತ್ತಿದ್ದಾರೆ. ಶ್ರಮಪಟ್ಟು ದುಡಿದು ಅದರಿಂದ ಬರುವ ಹಣವನ್ನು ಶ್ರದ್ಧಾಭಕ್ತಿಯಿಂದ ದುರ್ಗಾದೇವಿ, ಸೇವಾಲಲ, ಹಾಮುಲಾಲ ಸೇರಿದಂತೆ ನಾನಾ ದೇವಸ್ಥಾನಗಳ ಜಾತ್ರೆಗಳಲ್ಲಿ ಪಾಲ್ಗೋಂಡು ದಾಸೋಹದಲ್ಲಿ ಪಾಲ್ಗೋಳ್ಳುತ್ತಾರೆ. ಜೊತೆಗೆ ತಮ್ಮ ಇತಿಹಾಸ, ಸಂಸ್ಕೃತಿ, ಕಲೆ ಉಡುಪನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದು ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ವಿಶಿಷ್ಠವಾಗಿರುವ ಬಂಜಾರಾ ಕಲೆ, ಸಂಸ್ಕೃತಿ, ಕಸೂತಿ ಕಲೆಯನ್ನು ಜೀವನಂತವಾಗಿ ಇಟ್ಟು ದೇಶ, ವಿದೇಶಗಳಲ್ಲಿ ಪರಿಚಯಿಸಿ ಜನಪ್ರೀಯಗೊಳಿಸುವ ಮೂಲಕ ಉತ್ತೇಜನ ನೀಡಲಾಗುತ್ತಿದೆ. ಈ ಸಮುದಾ ನಮ್ಮ ತಂದೆಯ ಕಾಲದಿಂದಲೂ ನಮ್ಮ ಮೇಲೆ ವಿಶ್ವಾಸವಿಟ್ಟುಕೊಂಡು ಬಂದಿದೆ. ಇಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳಿಂದಾಗಿ ತಾಂಡಾಗಳ ಜನತೆ ಮಹಾರಾಷ್ಟ್ರ ಮತ್ತು ಗೋವಾಗಳಿಗೆ ಗುಳೆ ಹೋಗುವುದು ಶೇ. 75 ರಷ್ಟು ತಪ್ಪಿದ್ದು, ಮಹಾರಾಷ್ಟ್ರದ ಜನ ಕಬ್ಬು ಕಟಾವಿಗೆ ಇಲ್ಲಿಗೆ ಗುಳೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದ ಜನ ಕಬ್ಬು ಕಟಾವಿಗೆ ವಿಜಯಪುರ ಜಿಲ್ಲೆಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು.
ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಕನಿಷ್ಠ ಎರಡು ದೇವಸ್ಥಾನ ಮತ್ತು ಸಮುದಾಯ ಭವನಗಳನ್ನು ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದೇನೆ. ಹಾಮುಲಾಲ ದೇವಸ್ಥಾನ, ಸೇವಾಲಾಲರ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ. ಈಗ ಇಲ್ಲಿ ನಿರ್ಮಿಸಲಾಗಿರುವ ಈ ಎರಡೂ ದೇವಸ್ಥಾನಗಳ ಅಭಿವೃದ್ಧಿಗೆ ರೂ. 20 ಲಕ್ಷ ಅನುದಾನ ನೀಡಿದ್ದೇನೆ. ಈಗಾಗಲೇ ಹಂಚನಾಳ ತಾಂಡಾ ರಸ್ತೆ ಅಭಿವೃದ್ಧಿಗೆ ರೂ. 1.50 ಕೋ. ಟೆಂಡರ್ ಕರೆಯಲಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ನೀರು ಒದಗಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಸೂರ ವಿಜಯಮಹಾಂತೇಶ ಶಾಖಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕೆಸರಹಟ್ಟಿ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಕೆಸರಾಳ ಧನಸಿಂಗ್ ಮಹಾರಾಜ, ತೊರವಿ ಗೋಪಾಲ ಮಹಾರಾಜ, ಹಂಚಿನಾಳ ಎಲ್.ಟಿ 2 ಗುಲಾಬ ಮಹಾರಾಜ ಮತ್ತು ವಸಂತ ಮಹಾರಾಜ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡರು ಡಿ. ಎಲ್. ಚವ್ಹಾಣ, ಅರ್ಜುಣ ರಾಠೋಡ, ರಾಜು ಚವ್ಹಾಣ, ಪದ್ದು ಹೀರು ಚವ್ಹಾಣ, ಶೈಲಾ ಸೋಮು ಚವ್ಹಾಣ, ಕವಿತಾ ಪಿಂಟು ಚವ್ಹಾಣ, ಸದಾಶಿವ ಪೂಜಾರಿ, ಗುರುಪಾದಗೌಡ ದಾಶ್ಯಾಳ, ಪಿಂಟು ಚವ್ಹಾಣ, ಅಶೋಕ ಎಂ. ಪಾಟೀಲ, ಪ್ರಕಾಶ ರೇವು ರಾಠೋಡ, ಅರವಿಂದ ಪದ್ದು ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

