ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಅದರಲ್ಲಿ ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸಶ್ರೇಷ್ಠ ಎಂದೆನಿಸಿಕೊಂಡವರು ಎಂದು ಶಾಲೆಯ ಸಹ ಶಿಕ್ಷಕ ಬಿ ಡಿ ಜತ್ತಿ ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿದ್ಯಾಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ 537ನೇ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗುತ್ತಾರೆ ಎಂದು ವ್ಹಿ ಎನ್ ಪೂಜಾರಿ ಹೇಳಿದರು.
ಮುಖ್ಯ ಗುರುಗಳಾದ ಎನ್ ವಿ ಕೋಟಿ ಸಹ ಶಿಕ್ಷಕ ಎಸ್ ಎ ಮಾಲಗಾರ, ಶ್ರೀಮತಿ ಎಂ ಎಲ್ ಭೋಸ್ಲೆ, ಶ್ರೀಮತಿ ಎಸ್ ಎ ಮಲ್ಲಾಡ್, ಶ್ರೀಮತಿ ಎಂ ಎಂ ಮಠಪತಿ, ಶ್ರೀಮತಿ ಡಿ ಆರ್ ದಶವಂತ್, ಕುಮಾರಿ ವಿ ಬಿ ಗಸ್ತಿ, ಎಸ್ ವಿ ಸಾವಂತ್ ಹಾಗೂ
ಶಾಲೆಯ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

