ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐದುನೂರು ವರ್ಷಗಳ ಹಿಂದೆಯೇ ‘ಕುಲ ಕುಲ ಎಂದು ಹೊಡೆದಾಡದಿರಿ’ ಎನ್ನುವ ಮೂಲಕ ಕನಕದಾಸರು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿದ್ದರು. ಜಾತಿ ಪದ್ದತಿಯನ್ನು ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ಇಂದು ನೆನೆಯೋಣ. ಅವರ ತೊರಿದ ದಾರಿಯಲ್ಲಿ ಸಾಗೋಣ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕನಕದಾಸರ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ಮಹಿಸಿ ಮಾತನಾಡಿದ ಅವರು. ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ಕನಕದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ, ಅವರ ನೀಡಿದ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದರು.
ಈ ವೇಳೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಎಲ್.ಚವ್ಹಾಣ್‌ರವರು ಮಾತನಾಡುತ್ತ. ಕನಕದಾಸರು ಕೇವಲ ಕುರುಬ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಬದಲಿಗೆ ಎಲ್ಲಾ ಜಾತಿಗೆ ಸೇರಿದ ದಾಸರಾದರು. ಅಲ್ಲದೇ ಭಕ್ತಿಪಂಥವನ್ನು ಮುಂದುವರೆಸುವ ಮೂಲಕ ಸಮಾಜದಲ್ಲಿನ ಮೌಢ್ಯ ನಿವಾರಣೆಗೆ ಶ್ರಮಿಸಿದರು. ದಾಸ ಪರಂಪರೆಯಲ್ಲಿ ತಮ್ಮ ಹಾಡುಗಳ ಮೂಲಕ ಜನಸಾಮಾನ್ಯರಲ್ಲಿ ಉಳಿದವರಲ್ಲಿ ಕನಕದಾಸರು ಪ್ರಮುಖರು. ತಮ್ಮ ಕೀರ್ತನೆಗಳ ಮೂಲಕ ಜನರ ಹೃದಯದಲ್ಲಿ ಅಧ್ಯಾತ್ಮಿಕ ಜಾಗೃತಿಯನ್ನು ತುಂಬಿದ ಕನಕದಾಸರು ಭಕ್ತಿ, ನಂಬಿಕೆ ಮತ್ತು ಪ್ರೀತಿಯಿಂದ ಹಲವಾರು ಭಕ್ತಿಗೀತೆಗಳನ್ನು ರಚಿಸಿದ್ದಾರೆ ಎಂದರು.
ಈ ವೇಳೆಯಲ್ಲಿ ಶಿಕ್ಷಕರುಗಳಾದ ಆರ್.ವಿ.ಭುಜಂಗನವರ, ಎ.ಎಂ.ನಾಗೊಂಡ, .ಎನ್.ಬಕಾಟೆ, ಎಸ್.ಎಲ್.ದೊಡಮನಿ, ಎಂ.ಬಿ.ಪೂಜಾರಿ, ಪಿ.ಎಂ.ಕೌಲಗಿ, ಎಚ್.ಎಂ.ಬೋರಾವತರವರುಗಳು ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

