ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಅಂತರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿರುವ ಹಾನಗಲ್ ಸದಾಶಿವ ಸ್ವಾಮೀಜಿಯವರ ದೇವಸ್ಥಾನದಲ್ಲಿ ಸೋಮವಾರ ಹಾನಗಲ್ ಸದಾಶಿವ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೆಯನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬೆಳಗ್ಗೆ ದೇವಸ್ಥಾನದಲ್ಲಿ ಹಾನಗಲ್ ಸದಾಶಿವ ಸ್ವಾಮೀಜಿಯವರ ಕರ್ತೃ ಗದ್ದುಗೆಗೆ ಹಾಗೂ ಅವರ ಪಾದುಕೆಗಳಿಗೆ ಬಸವೇಶ್ವರ ದೇವಸ್ಥಾನದ ಅರ್ಚಕ ಗೌರಿಶಂಕರ ಚರಂತಿಮಠ ಅವರು ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಿದರು. ಭಕ್ತರು ಕಾಯಿ-ಕರ್ಪೂರ ಅರ್ಪಿಸಿ ಸ್ವಾಮೀಜಿಯವರ ಕರ್ತೃ ಗದ್ದುಗೆ ಹಾಗೂ ಸ್ವಾಮೀಜಿಯವರ ಪಾದುಕೆಗಳ ದರ್ಶನ ಪಡೆದುಕೊಂಡರು.
ಪೂಜೆ ನೆರವೇರಿದ ನಂತರ ಹಾನಗಲ್ ಸದಾಶಿವ ಸ್ವಾಮೀಜಿಯವರ ಹಾಗೂ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಎತ್ತಿನ ಬಂಡಿಯಲ್ಲಿ ಡೊಳ್ಳಿನ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಟ್ಟಣದಲ್ಲಿ ೧೯೮೩ ರ ನ. ೧೮ ರಂದು ಆರು ತಿಂಗಳಿಂದ ಸ್ಥಳೀಯ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿಯವರು ನಡೆಸಿಕೊಂಡು ಬಂದಿದ್ದ ಬಸವ ಪುರಾಣ ಮಂಗಲ ಹಾಗೂ ೬೩ ಪುರಾತನ ಶರಣರ ಮಂಟಪ ಮಹಾಪೂಜೆಗೆ ಹಾನಗಲ್ ಸದಾಶಿವ ಸ್ವಾಮೀಜಿಯವರು ಬಸವ ನೆಲ ಬಸವನಬಾಗೇವಾಡಿಗೆ ಆಗಮಿಸಿದ್ದರು. ಈ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜೆ, ಪ್ರಸಾದಕ್ಕೆ ಚಾಲನೆ ನೀಡಿ ಮಾತನಾಡುವ ಸಂದರ್ಭದಲ್ಲಿ ಅವರು ನಿಮಗೆಲ್ಲ ಆನಂದ ನಮಗೆ ಕೈಲಾಸ ಎನ್ನುತ್ರಾ ಇದೇ ಸ್ಥಳದಲ್ಲಿ ಲಿಂಗೈಕ್ಯರಾದರು. ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಅವರ ಶರೀರವನ್ನು ಅಲ್ಲಿನ ಭಕ್ತರು ಹಾನಗಲ್ಗೆ ತೆಗೆದುಕೊಂಡು ಹೋಗಿ ಅಂತಿಮ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಲ್ಲಿಯೇ ಸ್ವಾಮೀಜಿಯವರ ಕರ್ತೃಗದ್ದುಗೆ ನಿರ್ಮಿಸಿದ್ದಾರೆ. ಇಲ್ಲಿನ ಭಕ್ತರು ಸ್ವಾಮೀಜಿಯವರು ಇಲ್ಲಿಯೇ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ದೇವಸ್ಥಾನ ಕಟ್ಟಿಸಿ ಪ್ರತಿ ವರ್ಷ ಅವರ ಪುಣ್ಯಸ್ಮರಣೆ ಮಾಡಿಕೊಂಡು ಬರುತ್ತಿದ್ದೇವೆ ಎಂದು ಬಸನಗೌಡ ಪಾಟೀಲ, ಮಲ್ಲು ಇವಣಗಿ ಹೇಳಿದರು.
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸುಭಾಸ ಗಬ್ಬೂರ, ಮಲ್ಲು ಬಿದರಿ, ಚಂದಪ್ಪ ಹಡಪದ, ಮುರುಗೇಶಿ ನಾಯ್ಕೋಡಿ, ರವಿ ಚಟ್ಟೇರ, ಈರಪ್ಪ ಅಡಗಿಮನಿ, ಅನಿಲ ಅಗರವಾಲ, ಸದು ಮಿಣಜಗಿ, ಶ್ರೀಶೈಲ ಮಿಣಜಗಿ, ಮುತ್ತು ಮಿಣಜಗಿ ಇತರರು ಭಾಗವಹಿಸಿದ್ದರು.

