ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮನುಷ್ಯರನ್ನು ಗೌರವಿಸುವಂತಹ ಬಹುದೊಡ್ಡ ಪ್ರೇರಕ ಶಕ್ತಿ ಕನಕದಾಸರು. ಇಡೀ ಜೀವನ ಮನುಕುಲಕ್ಕೆ ಆದರ್ಶಮಯ ವಿಚಾರಗಳನ್ನು, ಸಮಾಜಮುಖಿ ಚಿಂತನೆಗಳನ್ನು ತತ್ವಾದರ್ಶಗಳನ್ನ ನೀಡಿದ ಸಂತ ಶ್ರೇಷ್ಠ ಕನಕದಾಸರ ಆದರ್ಶ-ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸೋಮವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತ, ಸತ್ಪುರುಷರು ಈ ಮನುಕುಲದ ಉದ್ದಾರಕರು ಹಾಗೂ ಸುಧಾರಕರು ಕತ್ತಲೆಯನ್ನು ಕಳೆದು ಅಂತರಂಗದ ತಿಳುವಿನ ಒಳಗಣ್ಣನ್ನು ತೆರೆಸಿದ ಶ್ರೇಷ್ಠ ಸತ್ಪುರುಷರು. ವಿವಿಧ ಸಂತರಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ವಿವಿಧ ಸಂತರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಮಾಜಮುಖಿ ಚಿಂತನೆಗಳನ್ನು ನೀಡಿದ ಕನಕದಾಸ, ಬುದ್ಧ, ಬಸವ ಅಂಬೇಡ್ಕರ್ ಅವರ ಆದರ್ಶಮಯ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ಸುಮಾರು ೩೦೦ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧಾನ್ಯಚರಿತೆ, ನಳಚರಿತೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದರು.
ಪ್ರೊ.ಎ.ಎಚ್ ಕೊಳಮಲಿ ಉಪನ್ಯಾಸ ನೀಡಿದರು.
ಮುಖಂಡ ಮಲ್ಲಣ್ಣ ಶಿರಸ್ಯಾಡ ಕನಕದಾಸರ ಕುರಿತು ಮಾತನಾಡಿದರು.
ಸಿದ್ದರಾಮ ಬಿರಾದಾರ, ರಾಮಸ್ವಾಮಿ ಕೊಳಮಲಿ, ಎಸ್.ಸಿ.ಕುರ್ಲೆ ಅವರು ಕಾವ್ಯ ವಾಚನ ಮಾಡಿದರು. ಮಹೇಶ ಪೂಜಾರಿ ಹಾಗೂ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಜೃತಿ ಇಲಾಖೆ ಸಹಾಯ ನಿರ್ದೇಶಕರಾದ ಸಂತೋಷ ಭೋವಿ ಸ್ವಾಗತಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಅಶೋಕ ನ್ಯಾಮಗೊಂಡ, ರಾಹುಲ್ ಜಾಧವ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಹೆಸ್ಕಾಂ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ರವಿ ಕಿತ್ತೂರ, ಸುಜಾತ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ಅಡಿವೆಪ್ಪ ಸಾಲಗಲ್, ಭಿಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಶಾಲಾ ಮಕ್ಕಳು ಭಾಗವಹಿಸಿದ್ದರು.

ಮೆರವಣಿಗೆಗೆ ಚಾಲನೆ
ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಂತ ಶ್ರೇಷ್ಠ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಚಾಲನೆ ನೀಡಿದರು.
ಭವ್ಯ ಮೆರವಣಿಗೆಯು ನಗರದಲ್ಲಿ ಸಂಚರಿಸಿ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

“ಕನಕದಾಸರು ಸಮಾಜದ ಒಳಿತಿಗಾಗಿ ನೀಡಿರುವ ಸಂದೇಶ ಪಾಲಿಸೋಣ, ಇವರು ಓರ್ವ ಹರಿದಾಸ ಸಂತರು, ತತ್ವಜ್ಞಾನಿ, ವ್ಯಾಸ ತೀರ್ಥರ ಶಿಷ್ಯರಾಗಿದ್ದರು. ೧೬ನೇ ಶತಮಾನದಲ್ಲಿ ಭಕ್ತಿ ಪಂಥದಲ್ಲಿನ ದಾಸವರೇಣ್ಯರು ಸಮಾಜದ ಸಮಾನತೆಗಾಗಿ ತಮ್ಮ ಕೀರ್ತನೆಗಳ ಮೂಲಕ ಮೂಲಕ ಜನಸಾಮಾನ್ಯ ರಾಡುವ ಭಾಷೆಯಲ್ಲಿಯೇ ತಿಳಿಹೇಳಿ ಸಮಾಜದ ಸುಧಾರಕರಾಗಿದ್ದಾರೆ. ಈ ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು, ಭೇದಭಾವ ಇರಬಾರದು. ಎಲ್ಲರೂ ಸಮಾನರು ಎಂಬ ಸಂದೇಶ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿದ್ದಾರೆ. ಅವರ ಆದರ್ಶ ವಿಚಾರಗಳನ್ನು ತತ್ವಗಳನ್ನ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ.”
– ರಿಷಿ ಆನಂದ
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿಜಯಪುರ

“ಕನಕದಾಸರ ತತ್ವ ಚಿಂತನೆಗಳನ್ನ ಅವರ ಆದರ್ಶಮಯ ವಿಚಾರಗಳನ್ನ ಮಕ್ಕಳ ಮನೋಭೂಮಿಕೆಯಲ್ಲಿ ಮೂಡಿಸಲು ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಹಂತದಲ್ಲಿ ಕನಕದಾಸರ ವಿಚಾರಧಾರೆಗಳನ್ನು ತಲುಪಿಸುವ ಅವರ ಬಗೆಗೆ ಅನೇಕ ಸ್ಪರ್ಧೆಗಳನ್ನು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸುವ ಮೂಲಕ ಬಾಲ ವಿಕಾಸ ಅಕಾಡೆಮಿ ಮುಂಬರುವ ದಿನಗಳಲ್ಲಿ ಯೋಜನೆ ಸಿದ್ಧಪಡಿಸಿಕೊಂಡು ಕಾರ್ಯನಿರ್ವಹಿಸಲಾಗುವುದು.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ

