ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಿದ್ದೇಶ್ವರ ಶ್ರೀಗಳು ತಮ್ಮ ಆದ್ಯಾತ್ಮೀಕ ಪ್ರವಚನಗಳಿಂದ ಭಕ್ತರನ್ನು ಸನ್ಮಾರ್ಗಕ್ಕೆ ಕರೆದುಕೊಂಡು ಹೋಗಿ ಅವರ ಜೀವನವನ್ನು ಪಾವನಗೊಳಿಸುತ್ತಿದ್ದರು ಎಂದು ಬಸವನ ಬಾಗೇವಾಡಿಯ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಚಡಚಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಅಮೃತಾನಂದ ಶ್ರೀಗಳು ಆದ್ಯಾತ್ಮಿಕ ಪ್ರವಚನದ ಮುಕ್ತಾಯ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆದ ಮಹಾನ ಸಂತರಾಗಿದ್ದರು. ಎಲ್ಲರನ್ನು ಪ್ರೀತಿಸುವ ಅವರ ಭಾವ ಅವರನ್ನು ನಡೆದಾಡುವ ದೇವರನ್ನಾಗಿಸಿದೆ. ಸಿದ್ದೇಶ್ವರ ಶ್ರೀಗಳು ಚಡಚಣದಲ್ಲಿ ಶಿಕ್ಷಣ ಕಲಿತಿರುವದು ಈ ಭಾಗದ ಭಕ್ತರ ಪುಣ್ಯವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಸಿದ್ದೇಶ್ವರ ಶ್ರೀಗಳು ನಮ್ಮ ಭಾಗದ ಬಗ್ಗೆ ಪ್ರೀತಿ ಹೊಂದಿದ್ದರು ಎನ್ನುವದೆ ನಮಗೆ ಭಾಗ್ಯ ಎಂದು ಹೇಳಿದರು. ಪರಿಸರದ ಬಗ್ಗೆ ಕಾಳಜಿ, ಎಲ್ಲರನ್ನು ಪ್ರೀತಿಯಿಂದ ಕಾಣುವದು, ರೈತರ ಬಗ್ಗೆ ಗೌರವ ಹೊಂದುವದನ್ನು ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನಗಳಲ್ಲಿ ಹೇಳಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ ಮಹಾನ ಸಂತನಾಗಿದ್ದರು. ಅಮೃತಾನಂದ ಶ್ರೀಗಳು ಇಗ ತಮ್ಮ ಪ್ರವಚನಗಳ ಮೂಲಕ ಸಿದ್ದೇಶ್ವರ ಶ್ರೀಗಳ ಸಮಾಜ ಸುಧಾರಣೆಯ ಕೆಲಸವನ್ನು ಮುಂದು ವರಿಸಿರುವದು ಭಕ್ತರಲ್ಲಿ ಸಂತಸ ತಂದಿದೆ ಎಂದು ಹೇಳಿದರು.
ಕಾಂಗ್ರೆಸ ಮುಖಂಡ ಎಂ ಆರ್ ಪಾಟೀಲ ಮಾತನಾಡಿದರು.
ಬಿಜೆಪಿ ಮುಖಂಡ ಸಂಜೀವ ಐಹೊಳ್ಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಕಾತ್ರಾಳ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ, ಚಡಚಣದ ಗುರುದೇವ ಆಶ್ರಮದ ಯೋಗಾನಂದ ಶ್ರೀಗಳು, ಗೋರ ಚಿಂಚೊಳ್ಳಿಯ ಸಿದ್ದರಾಮೇಶ್ವರ ಪಟ್ಟದೇವರು, ಧಾರವಾಡದ ಡಾ.|| ಬಸವಾನಂದ ಶ್ರೀಗಳು, ಶಿವಾನಂದ ಶ್ರೀಗಳು ಆಶಿರ್ವಚನ ನೀಡಿದರು.
೧೫ ದಿವಸಗಳವರೆಗೆ ದಾಸೋಹ ಸೇವೆ ನೀಡಿದ ಮುತ್ತಿನ ಬಂಧುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚಡಚಣ ಆಧ್ಯಾತ್ಮೀಕ ಪ್ರವಚನ ಸೇವಾ ಸಮೀತಿಯ ಎಲ್ಲ ಪದಾಧಿಕಾರಿಗಳು, ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಪ್ರಾಚಾರ್ಯ ಮನೋಜ ಕಟಗೇರಿ ಸ್ವಾಗತಿಸಿದರು, ನಿವೃತ್ತ ಪ್ರಾಧ್ಯಾಪಕ ಆರ್.ಪಿ. ಬಗಲಿ ವಂದಿಸಿದರು, ನಿವೃತ್ತ ಪ್ರಾಚಾರ್ಯ ಎಸ್.ಕೆ.ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

