ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ೧೮ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ ೨೦೨೪-೨೦೨೫ ಕ್ರೀಡಾಕೂಟ ಇದೇ ನವೆಂಬರ್ ೨೦ ರಿಂದ ೨೨ ರವರೆಗೆ ಮೂರು ದಿನಗಳ ಕಾಲ ವಿವಿಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೪೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ೧೯ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಇದೇ ಬುಧವಾರ ಆರಂಭವಾಗಲಿರುವ ೧೮ನೇ ಅಥ್ಲೇಟಿಕ್ ಕ್ರೀಡಾಕೂಟದ ಪೂರ್ವ ತಯಾರಿ ಭರದಿಂದ ಸಾಗಿದ್ದು, ಈ ಕ್ರೀಡಾಕೂಟದಲ್ಲಿ ವಿಜಯಪುರ, ಧಾರವಾಡ, ಬಾಗಲಕೋಟ, ಬೀದರ್, ಹೊಸಪೇಟೆ, ಕಲಬುರಗಿ, ಕೊಪ್ಪಳ, ಮಂಡ್ಯ ಹೀಗೆ ಬೇರೆ-ಬೇರೆ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.
ಕಳೆದ ವರ್ಷ ೧೭ನೇ ಅಥ್ಲೇಟಿಕ್ ಕ್ರೀಡಾಕೂಟವನ್ನು ಸಹ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದದ್ಯಾನಿಲಯದಲ್ಲಿಯೇ ಸಂಘಟಿಸಿದ್ದು, ಇದರಲ್ಲಿ ಕ್ರೀಡಾಪಟುಗಳು ೨ ಹೊಸ ದಾಖಲೆಗಳನ್ನು ಬರೆದಿದ್ದರು. ಈ ಬಾರಿಯು ಇನ್ನಷ್ಟು ದಾಖಲೆಗಳನ್ನು ಕ್ರೀಡಾಪಟುಗಳು ಮಾಡುವ ಆಶಯವಿದೆ ಎಂದು ಕ್ರೀಡಾ ನಿರ್ದೇಶಕ ಪ್ರೊ.ಸಕ್ಪಾಲ್ ಹೂವಣ್ಣ ತಿಳಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ಮತ್ತು ಬ್ಲೇಜರ್ ನೀಡಲಾಗುವುದು. ಅದರಂತೆ ಪ್ರಥಮ ಸ್ಥಾನಕ್ಕೆ ೨೫,೦೦೦/- ರೂ ನಗದು ಹಾಗೂ ದ್ವಿತಿಯ ಸ್ಥಾನಕ್ಕೆ ರೂ.೧೫.೦೦೦/- ನಗದು ಹಾಗೂ ತೃತೀಯ ಸ್ಥಾನಕ್ಕೆ ರೂ.೧೦,೦೦೦/- ನಗದು ಹಾಗೂ ಟ್ರೋಫಿ ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಇನ್ನೊಂದು ವಿಶೇಷವೆಂದರೆ ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಈ ಹಿಂದೆ ಇರುವ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದವರಿಗೆ ೫೦೦೦ ವಿಶೇಷ ನಗದು ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲದೆ ಇಲ್ಲಿ ಗೆದ್ದಂತಹ ಕ್ರೀಡಾಪಟುಗಳನ್ನು ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಕಳುಹಿಸಲಾಗುತ್ತದೆ. ಈ ಅಖಿಲ ಭಾರತ ಮಟ್ಟದಲ್ಲಿ ಗೆದ್ದವರಿಗೆ ನಮ್ಮ ವಿಶ್ವವಿದ್ಯಾನಿಲಯ ಮತ್ತು ಕ್ರೀಡಾ ನಿರ್ದೇಶನಾಲಯದಿಂದ ನಗದು ಬಹುಮಾನ ಕೂಡಾ ವಿತರಿಸಲಾಗುವುದು. ಹಾಗೂ ಇದೇ ಸಂದರ್ಭದಲ್ಲಿ ೨೦೨೩ರಲ್ಲಿ ಅಖಿಲ ಭಾರತದಲ್ಲಿ ಗೆದ್ದ ಕ್ರೀಡಾಪಟುಗೆ ಈ ಬಾರಿ ೧೦,೦೦೦ ನಗದು ಮತ್ತು ಬ್ಲೇಜರ್ ನೀಡಿ ಸನ್ಮಾನಿಸಲಾಗುತ್ತದೆ. ಆಟಗಾರರಿಗೆ ಹಾಗೂ ತೀರ್ಪುಗಾರರಿಗೆ ಊಟ ಹಾಗೂ ವಸತಿಯ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆಯ ವೇಳೆ ಮನರಂಜನೆ ಕಾರ್ಯಕ್ರಮಗಳು ಕೂಡ ಏರ್ಪಡಿಸಲಾಗಿದೆ ಎಂದು ಪ್ರೊ.ಸಕ್ಪಾಲ್ ಅವರು ವಿವರಿಸಿದ್ದಾರೆ.
ಉದ್ಘಾಟನೆ: ಇದೇ ೨೦ ರಂದು ಬೆಳಿಗ್ಗೆ ೧೧.೩೦ಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ಕ್ರೀಡಾಪಟು ಬಿಂದು ರಾಣಿ.ಜಿ ಕ್ರೀಡಾಕೂಟ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಮುಖ್ಯಸ್ಥ ಸಂಜಯ ಸತೀಜಾ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ವಹಿಸಲಿದ್ದು, ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ ಚಂದ್ರಶೇಖರ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಮಾರೋಪ
ಇದೇ ೨೨ರಂದು ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ನಗರದ ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಖ್ಯಾತ ಉದ್ಯಮಿ ಶರಣಬಸಪ್ಪ ಅರಕೇರಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ ಚಂದ್ರಶೇಖರ ಉಪಸ್ಥಿತರಿರಲಿದ್ದಾರೆ ಎಂದು ಕ್ರೀಡಾ ನಿರ್ದೇಶಕ ಪ್ರೊ.ಸಕ್ಪಾಲ ಹೂವಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

