ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಡಿ. ೯ ರಿಂದ ೨೦೨೫ ರ ಮಾ.೨೩ ರವರೆಗೆ ನೀರು ಹರಿಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿಯ ಸಭೆಯ ಅಧ್ಯಕ್ಷ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಶನಿವಾರ ಆಲಮಟ್ಟಿಯ ಕೆಬಿಜೆಎಟಿಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಐಸಿಸಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಕಳೆದ ವರ್ಷ ಹಿಂಗಾರು ಹಂಗಾಮಿಗೆ ನೀರು ಹರಿಸಿರಲಿಲ್ಲ. ಆದರೆ ಈ ಬಾರಿ ನೀರಿನ ಲಭ್ಯತೆಯ ಕಾರಣ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಿಂಗಾರಿಗೆ ನೀರಬಂಧಿ ಪದ್ಧತಿಗೆ ಅನುಗುಣವಾಗಿ ನೀರು ಹರಿಸಲಾಗುತ್ತಿದೆ ಎಂದರು.
ಆಲಮಟ್ಟಿ ಜಲಾಶಯದಲ್ಲಿ ೧೦೪ ಹಾಗೂ ನಾರಾಯಣಪುರದಲ್ಲಿ ೧೧ ಸೇರಿ ೧೧೫ ಟಿಎಂಸಿ ನೀರು ಜಿವಜಲವಿದೆ. ಇದರಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ೪೨.೨೫ ಟಿಎಂಸಿ ನೀರು ಹೆಚ್ಚಿಗೆ ಲಭ್ಯವಿದೆ.
ಆಲಮಟ್ಟಿ ಜಲಾಶಯದ ಆಧೀನದ ಹಂತ-೧ ಹಂತ೨ ಕಾಲುವೆಗಳಿಗೆ ಹಾಗೂ ನಾರಾಯಣಪುರ ಎಡದಂಡೆ ಕಾಲುವೆಗೆ ನ.೨೦ ರವರೆಗೆ ನೀರು ಹರಿಸಲಾ ಗುತ್ತದೆ. ನ.೨೧ ರಿಂದ ಡಿ.೮ ರವರೆಗೆ ನೀರು ಹರಿಸುವುದನ್ನು ಈ ಕಾಲುವೆಗೆ ನಿಲ್ಲಿಸಲಾಗುತ್ತದೆ. ಆದರೆ ನಾರಾಯಣಪುರ ಬಲದಂಡೆ ಕಾಲುವೆಗೆ ಮಾತ್ರ ಅಲ್ಲಿನ ಬೆಳೆಗೆ ಅನುಕೂಲವಾಗಲು ನ.೧೭ ರಿಂದ ನ,೨೪ ರವರೆಗೆ ಕಾಲುವೆ ಬಂದ ಮಾಡಿ. ನ.೨೫ ರಿಂದ ನ.೩೦ ರವರೆಗೆ ನಿರಂತರ ನೀರು ಹರಿಸಲಾಗುತ್ತದೆ. ಮತ್ತೆ ಈ ಕಾಲುವೆಗೆ ಡಿ.೧ ರಿಂದ ಡಿ.೮ ರವರೆಗೆ ನೀರು ಹರಿಸುವುದನ್ನು ನಿಲ್ಲಸಲಾಗುತ್ತದೆ ಎಂದು ಸಚಿವರು ಹೇಳಿದರು.
ಡಿ.೧ ರಿಂದ ೨೦೨೫ ರ ಜೂನ್ ೩೦ ರವರೆಗೆ ಕುಡಿಯುವ ನೀರು, ಕೆರೆಗಳ ಭರ್ತಿ, ಕಾಲುವೆಗಳ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸವುದು, ಭಾಷ್ಕೀಪಕರಣ, ಉಷ್ಣ ವಿದ್ಯುತ್ ಸ್ಥಾವರಗಳಿಗೆ, ಕೈಗಾರಿಕೆಗಳಿಗೆ, ಬ್ಯಾರೇಜ್ ಗಳಲ್ಲಿ ನೀರು ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಸೇರಿದಂತೆ ಅಂದಾಜು ೪೪ ಟಿಎಂಸಿ ಅಡಿ ನೀರು ಕಾಯ್ದಿರಿಸಲಾಗುತ್ತದೆ.
ಕಾಲುವೆಗಳ ಜಾಲದಿಂದ ಪಂಪಸೆಟ್ ಮೂಲಕ ಅಕ್ರಮವಾಗಿ ನೀರು ಎತ್ತಿ ರೈತರು ಜಮೀನಿಗೆ ಒಯ್ಯುತ್ತಿದ್ದು ಗಮನಕ್ಕೆ ಬಂದಿದ್ದು ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದರು. ಕಾಲುವೆಗಳ ಜಾಲದ ಹೂಳು ತೆಗೆಯುವ ಕ್ಲೋಜರ್ ಕಾಮಗಾರಿಗೆ ೧೩೫ ಕೋಟಿ ಅನುದಾನ ನೀಡಲಾಗಿದೆ ಎಂದರು.
ಆಲಮಟ್ಟಿ ಹಾಗೂ ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಕಾಬಿಟ್ಟಿ ನೀರು ಬಳಕೆ ಹಾಗೂ ಕಬ್ಬು ಬೆಳೆ ಹೆಚ್ಚು ಬೆಳೆದಿದ್ದರಿಂದ ಸವುಳು-ಜವಳಿನ ಪ್ರಮಾಣ ಹೆಚ್ಚಾಗಿದೆ. ಅದರ ನಿಯಂತ್ರಣಕ್ಕಾಗಿರುವ ಕೃಷ್ಣಾ ಕಾಡಾಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಸ್ಕಿಂ ಎ ಅಡಿ ನಾನಾ ಜಿಲ್ಲೆಗಳಿಗೆ ಹಂಚಿಕೆಯಾಗಿರುವ ಕೃಷ್ಣಾ ನದಿಯ ನೀರನ್ನು ವ್ಮರು ಹಂಚಿಕೆ ಮಾಡಬೇಕು ಎಂಬ ರೈತರ ಬೇಡಿಕೆ ಬಗೆಗೆ ಪ್ರಸ್ತಾಪಿಸಿದ ಪತ್ರಕರ್ತರ ಪ್ರಶ್ನೆಗೆ ಶಾಸಕ ಜೆ.ಟಿ. ಪಾಟೀಲ ಧ್ವನಿಗೂಡಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ತಿಮ್ಮಾಪುರ ಭರವಸೆ ನೀಡಿದರು.
ಸಚಿವರಾದ ಶಿವಾನಂದ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಚ್.ವೈ. ಮೇಟಿ, ಸಿ.ಎಸ್. ನಾಡಗೌಡ, ವಿಠ್ಠಲ ಕಟಕದೋಂಡ, ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜೆ.ಟಿ.ಪಾಟೀಲ, ಅಶೋಕ ಮನಗೂಳಿ, ರಾಜಾ ವೇಣುಗೋಪಾಲ ನಾಯಕ, ಸಂಸದ ರಮೇಶ ಜಿಗಜಿಣಗಿ, ಕೆಬಿಜೆಎಟಿÉಲ್ ಎಂಡಿ ಕೆ.ಪಿ.ಮೋಹನರಾಜ್, ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ, ಐಸಿಸಿ ಸದಸ್ಯ ಕಾರ್ಯದರ್ಶಿ ಪ್ರೆಮಸಿಂಗ್, ಆರ್.ಮಂಜುನಾಥ ಮತ್ತೀತರರು ಇದ್ದರು.

