ಎಸ್.ಬಿ.ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿದರೆ, ಉತ್ತಮ ಜ್ಞಾನ ಹಾಗೂ ಆರೋಗ್ಯ ಹೊಂದಬಹುದು ಎಂದು ಜ್ಞಾನಯೋಗಾಶ್ರಮದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಎಸ್.ಬಿ.ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿದರು. ವಿದ್ಯಾರ್ಥಿ ಜೀವನ ಅತ್ಯಂತ ಅಪರೂಪದ ವಯಸ್ಸು. ದೇವರು ಕೆಲವರಿಗೆ ಅಂಗ ವೈಕಲ್ಯದಿಂದ ಕಣ್ಣು, ಕಿವಿ ಕೊಟ್ಟಿರುವುದಿಲ್ಲ ಆದರೆ ನಮಗೆ ಎಲ್ಲವನ್ನು ಕೊಟ್ಟಾಗ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕು. ಇವತ್ತು ನೀವು ನೆರಳಲ್ಲಿ ಕುಳಿತು ಪಾಠ ಕೇಳುತ್ತಿದ್ದಿರಿ ಆದರೆ ನಿಮ್ಮ ತಂದೆ-ತಾಯಿಗಳು ಬಿಸಿಲಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ನೀವು ಸಾಧನೆ ಮಾಡಿ ಉನ್ನತ ಹುದ್ದೆ ಅಲಂಕರಿಸಿದಾಗ ಅವರ ಶ್ರಮಕ್ಕೆ ನಿಜವಾದ ಸಾರ್ಥಕತೆ ಬರುತ್ತದೆ ಎಂದರು.
ಕ್ರೀಡೆ ಇಲ್ಲದ ಜೀವನ ಕೀಟತಿಂದ ಹಣ್ಣಿನಂತೆ ಅದಕ್ಕೆ ಬೆಲೆ ಇರುವುದಿಲ್ಲ. ಹಾಗಾಗಿ ಸದಾ ಚಟುವಟಿಕೆಯಿಂದ ಇದ್ದರೆ, ನಮ್ಮಲ್ಲಿ ಜ್ಞಾನ ಹಾಗೂ ಶರೀರಿಕ ಬೆಳವಣಿಗೆಗಳುಂಟಾಗುತ್ತವೆ ಹಾಗಾಗಿ ಎಲ್ಲರೂ ಈ ವಯಸ್ಸಿನಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಜಮಖಂಡಿ ಬಿಎಲ್ ಡಿ ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ.ಎಸ್.ಎಚ್.ಲಗಳಿ ಮಾತನಾಡಿ, ಈ ಮಹಾವಿದ್ಯಾಲಯಕ್ಕೆ 8 ದಶಕಗಳನ್ನು ಪೂರೈಸಿದೆ. ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಈ ಕಾಲೇಜಿನ ವಿದ್ಯಾರ್ಥಿ, ನಾನು ಇಲ್ಲಿಯೇ ಕಲಿತು ಇದೆ ಕಾಲೇಜಿನ ಆಡಳಿತ ಅಧಿಕಾರಿಯಾಗಿದ್ದೇನೆ. ಇಲ್ಲಿ ಕಲಿತವರೆಲ್ಲರೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ನಾವೆಲ್ಲ ಅದೃಷ್ಟವಂತರು ಎಂದರು.
ಬಂಥನಾಳ ಶ್ರೀಗಳು ನಮ್ಮ ಎಸ್.ಬಿ.ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ 2 ನೇ ಮಹಾಯುದ್ಧದ ವಿಜಯದ ನಂತರ ವಿಜಯಾ ಕಾಲೇಜು ಸ್ಥಾಪನೆ ಮಾಡಿದರು. ನಮ್ಮ ಸಂಸ್ಥೆ ದೇಶದ ನಂ.1 ಇನ್ಪ್ರಾಸ್ಟಕ್ಚರ್ ಹೊಂದಿದೆ. ಸುಮಾರು 1 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ, ಮಕ್ಕಳಿಗೆ ಈಜುಕೊಳ, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಉನ್ನತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಲ್ಲ ವಿದ್ಯಾರ್ಥಿಗಳು ಅದರ ಸದುಪಯೋಗ ಮಾಡಿಕೊಂಡು ಕ್ರೀಡಾ ಸಾಧಕರಾಗಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳಬೇಕಾದರೆ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು, ಮಕ್ಕಳು ಶಿಕ್ಷಣದೊಂದಿಗೆ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆ ಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಅವರ ಬದುಕನ್ನು ಉಜ್ವಲಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ, ಉಪ ಪ್ರಾಚಾರ್ಯ ಡಾ.ಅನಿಲ ನಾಯಕ, ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ.ಪಾಟೀಲ, ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್. ಪಾಟೀಲ, ನ್ಯಾಕ್ ಸಂಯೋಜಕ ಡಾ.ಮಹೇಶಕುಮಾರ. ಕೆ, ಕ್ರೀಡಾ ವಿಭಾಗದ ನಿರ್ದೇಶಕ ಎಸ್.ಕೆ.ಪಾಟೀಲ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ. ಶ್ರೀನಿವಾಸ ದೊಡಮನಿ ಮತ್ತಿತರರು ಉಪಸ್ಥಿತರಿದ್ದರು.

