ಉದ್ಯಾನ ನಗರಿಯಲ್ಲಿ ರಾಜ್ಯ ಮಟ್ಟದ ಖೋಖೋ ನಿನಾದ | ಪಂದ್ಯಾವಳಿಗೆ ಅದ್ದೂರಿ ಚಾಲನೆ | ಕ್ರೀಡಾಪ್ರಿಯರು ಮಿಂಚಿನ ಆಟಕ್ಕೆ ಫಿದಾ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇದೊಂದು ಶರೀರದ ಪ್ರತಿಯೊಂದು ಅಂಗಗಳು ಮಿಂಚಿನ ವೇಗದಲ್ಲಿ ಉನ್ಮಾದದಿಂದ ಚಲಿಸಿ ರೋಮರೋಮಗಳಲ್ಲಿ ರೋಚಕತೆಯ ಹುಮ್ಮಸ್ಸು ಹೆಚ್ಚಿಸುವ ಆಟ! ನೋಡುಗರ ಮನದಲ್ಲಿ ಕ್ಷಣಕ್ಷಣವೂ ಉತ್ಸುಕತೆಯ ರಮ್ಯತೆ ಮೇಳೈಸುವ ಆಟ. ಹೃದಯ ಬಡಿತದ ಏರಿಳಿತದೊಂದಿಗೆ ಕಣ್ಣುರೆಪ್ಪೆ ತೆರೆದು ಮುಚ್ಚುವಷ್ಟರಲ್ಲಿಯೇ ಆಟದ ಗತ ವೈಭವ ಬದಲಾಯಿಸುವಂಥ ವಿರೋಚಿತ ನೋಟ ಈ ಖೋಖೋ ಆಟೋಟದಲ್ಲಿ ಗೋಚರಿಸಲು ಸಾಧ್ಯ! ಇಂಥದೊಂದು ಕೌತಕ,ರಸದೌತಣದ ಸವಿ ಉಣಬಡಿಸುವ ವಿಭಾಗ,ರಾಜ್ಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಹಂತದ ಖೋಖೋ ಕ್ರೀಡಾ ಸ್ಪರ್ಧೆಯೊಂದು ಜಂಗಮರ ತಾಣ ಖ್ಯಾತಿಯ ಆಲಮಟ್ಟಿಯಲ್ಲಿ ಸಂಭ್ರಮ, ಸಡಗರದ ವೈಭವ ಕಂಡಿದೆ.
ಭೂಲೋಕದ ಹಸಿರು ಸ್ವರ್ಗಗೊಂದಿಗೆ ಹಸಿರೀಕರಣದ ನಯನ ವಯ್ಯಾರದದಿಂದ ಮೀರಿ ಮೀರಿ ಮಿನುಗಿ ವಿಶೇಷ ನಾಮಾಂಕಿತ ಹೊಂದಿರುವ ಆಲಮಟ್ಟಿ ಬಸವನಾಡಿನ ನೆಲದಲ್ಲಿಂದು ಹಚ್ಚು ಹಸಿರಾಗಿ ಮಿನುಗಿದೆ, ಕರುನಾಡು ಗಾಂಧಿ ಮಂಜಪ್ಪ ಹಡೇ೯ಕರ ಕಾಯಕ ಕೈಂಕರ್ಯ ಗೈದ ಪರಮ ಪವಿತ್ರ ಆಲಮಟ್ಟಿ ನೆಲದಲ್ಲಿ ನವಿರೋತ್ಸಹದಿಂದ ಖೋಖೋ ಆಟದ ರಂಗು ನಲಿದಿದೆ !
ಆಲಮಟ್ಟಿಯ ಶಾಲಾ ಮೈದಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಬುಧವಾರ ಸಂಜೆ ಅದ್ಧೂರಿ ಚಾಲನೆಯ ಸ್ಪರ್ಶ ದೊರೆತಿದೆ.
ಯಲಗೂರು ಶಾಲೆಯ ಕ್ರೀಡಾಪಟುಗಳು, ಮೈದಾನದ ಮುಖ್ಯದ್ವಾರದಿಂದ, ಡ್ರಮಸೆಟ್ ವಾದನದ ಮೂಲಕ ತಂದ ಕ್ರೀಡಾ ಧ್ವಜದ ಅಚ್ಚುಕಟ್ಟುತನ ಮೈರೋಮಾಂಚನಗೊಳಿಸಿತು.
ಧೋತರ, ನೆಹರು ಶರ್ಟ್ ಧರಿಸಿದ್ದ ಬಾಲಕರು ಛತ್ರ ಛಾಮರಗಳನ್ನು ಹಿಡಿದು ಅತಿಥಿಗಳನ್ನು ಕರೆದು ತಂದಾಗ ಲಂಬಾಣಿ ಧರಿಸು ಹಾಗೂ ಇಲಕಲ್ಲ ಸೀರೆ ತೊಟ್ಟಿದ್ದ ಬಾಲಕಿಯರು ಪುಷ್ಪಾರ್ಚನೆ ಮಾಡಿದ್ದು ಮೈಪುಳಕಗೊಂಡಿತು.
ಎಂಟು ಜನ ಎಂಟು ಬುಲೆಟ್ ನ ಭದ್ರತೆಯಲ್ಲಿ, ರಾಷ್ಟ್ರ ಮಟ್ಟದ ಖೋಖೋ ಕ್ರೀಡಾಪಟು ಬೇನಾಳದ ಸುಮಂಗಲಾ ಮಂಗಳಗುಡ್ಡ ಕ್ರೀಡಾಜ್ಯೋತಿ ಮೈದಾನಕ್ಕೆ ತಂದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಮುಖ್ಯ ಅತಿಥಿ ಸತ್ಯಜೀತಗೌಡ ಪಾಟೀಲ ಕ್ರೀಡಾ ಜ್ಯೋತಿ ಸ್ವೀಕರಿಸಿ, ನಂತರ ಅದನ್ನು ಒಯ್ದು ಕ್ರೀಡಾಂಗಣದ ಮುಖ್ಯದ್ವಾರದಲ್ಲಿ ಸ್ಥಾಪಿಸಿದ್ದ ಕ್ರೀಡಾ ಜ್ಯೋತಿ ಇಡುವ ಸ್ಥಳಕ್ಕೆ ತಂದಾಗ ಬೃಹತ್ ಸ್ಥಿರ ಕ್ರೀಡಾ ಜ್ಯೋತಿ ಪ್ರಜ್ವಲನಗೊಂಡಿತು.
ವಿವಿಧ ಶಾಲಾ ಮಕ್ಕಳು ಬೆಳಗಾವಿ, ಮೈಸೂರು, ಬೆಂಗಳೂರು, ಕಲಬುರಗಿ ವಿಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಮುಂಭಾಗದಲ್ಲಿ ಅಚ್ಚುಕಟ್ಟುತನದಿಂದ ಪಥಸಂಚಲನ ನಡೆಸಿದರು.
ಕ್ರೀಡಾ ಜ್ಯೋತಿ ಪ್ರಜ್ವಲಿಸಿದಾಗ ವಿವಿಧ ರೀತಿಯ ಪಟಾಕಿಗಳ ಸುರಿಮಳೆ ಹಾಗೂ ವಿದ್ಯುತ್ ಕ್ರ್ಯಾಕರ್ಸ್ ನ ಬೆಳಕಿನ ರಂಗಿನಾಟ ಕೆಲಕ್ಷಣ ಸೇರಿದ್ದ ಸಹಸ್ರಾರು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.
ಪ್ರಾಸ್ತವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಘಟಕ ಚಂದ್ರಶೇಖರ ನುಗ್ಗಲಿ ಮಾತನಾಡಿ, ಭಾಗವಹಿಸಿದ ಪ್ರತಿ ಕ್ರೀಡಾಪಟುವನ್ನು ಕ್ರೀಡಾಂಗಣದಲ್ಲಿಯೇ ಸನ್ಮಾನಿಸಿದ್ದು ಇದೇ ಮೊದಲು ಎಂದರು. ಪಂದ್ಯಾವಳಿ ನಡೆಯಲು ಸಹಕರಿಸಿದ ಶಿಕ್ಷಕರಿಗೆ, ಅಧಿಕಾರಿಗಳಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮುಂದಿನ ಎರಡು ವರ್ಷಗಳಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ಆಯೋಜಿಸಲು ಉದ್ದೇಶಿಲಾಗಿದೆ ಎಂದರು.
ಸರ್ಕಾರಿ ಶಾಲೆಯ ಮಕ್ಕಳು, ಬಡ ಮಕ್ಕಳು ಕ್ರೀಡಾ ಸಾಧನೆ ಮಾಡಿದ್ದು ವಿಶೇಷ ಎಂದರು
ಯುವ ಮುಖಂಡ ಸತ್ಯಜೀತಗೌಡ ಪಾಟೀಲ ಮಾತನಾಡಿ, ಕೊಕ್ಕೊ ಸೇರಿದಂತೆ ನಾನಾ ಗ್ರಾಮೀಣ ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಕ್ರೀಡೆಗಳು ಸಾಮರಸ್ಯದ ಏಕೋಭಾವಕ್ಕೆ ಸಾಕ್ಷಿಯಾಗಿವೆ.ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿಂದು ತನ್ವದೇ ವಿಶೇಷ ಛಾಪು ಮೂಡಿಸುತ್ತಿದೆ ಎಂದರು.
ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ನಡೆಯಲು ಸಹಕರಿಸಿಪಗ್ರಾಮೀಣ ಸೊಗಡಿನ ಕೊಕ್ಕೊ ಕ್ರೀಡೆಗೆ ಯಾವುದೇ ದುಂದುವೆಚ್ಚವಾಗುವುದಿಲ್ಲ. ಈ ಆಟ ಆಡುವುದರಿಂದ ದೈಹಿಕವಾಗಿ ಸಶಕ್ತನಾಗಿರಲು ಸಾಧ್ಯ. ದುಂದುವೆಚ್ಚದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರ ಬದಲು ಈ ರೀತಿಯ ಕ್ರೀಡೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದರು.
ಡಿಡಿಪಿಐಗಳಾದ ವಿವೇಕಾನಂದ, ಟಿ.ಎಸ್. ಕೊಲಾರ, ಕೊಕ್ಕೊ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ , ನವದೆಹಲಿಯ ಖೋಖೋ ಫೆಡರೇಷನ್ ಉಪಾಧ್ಯಕ್ಷ ಲೋಕೇಶ್ವರ, ಬಿಇಓ ವಸಂತ ರಾಠೋಡ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ, ಎ.ಎಸ್. ಲಾಳಶೇರಿ, ಮಹೇಶ ಪಾಟೀಲ, ಸದಾಶಿವ ದಳವಾಯಿ, ವಿ.ಎಂ ಪಾಟೀಲ, ಸಂಗಮೇಶ ಪೂಜಾರಿ,ಎಂ.ಎಂ. ಮುಲ್ಲಾ, ಶಿವು ಗದಿಗೆಪ್ಪಗೋಳ, ಬಸವರಾಜ ಬಾದರದಿನ್ನಿ, ಮಹಾದೇವ ಹೂಗಾರ, ಎಸ್.ಎಚ್. ಬಿರಾದಾರ, ಯು.ವೈ. ಬಶೆಟ್ಟಿ, ಸುನಿಲ ನಾಯಕ, ಆರ್.ಎ. ನದಾಫ್ , ಉಮೇಶ ಕೌಲಗಿ ಮತ್ತಿತರರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

