ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಅಹಿಂದ ಮುಖಂಡ ಎಸ್. ಎಂ. ಪಾಟೀಲ ಗಣಿಯಾರ ಅವರು ಮಠಾಧೀಶರ ಬಗ್ಗೆ ಆಡಿದ ಮಾತುಗಳು ಹಿಂದು ಸಮಾಜಕ್ಕೆ ನೋವನ್ನುಂಟು ಮಾಡಿದೆ. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸಾವಿತ್ರಿ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ಹೇರಿ ಮಠದ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಹಿಂದು ಸಮಾಜಕ್ಕೆ ಅವಮಾನವಾಗುವಂತೆ ಮಾಡಿದ್ದಾರೆ. ಹೋರಾಟದಲ್ಲಿ ಕನ್ಹೇರಿ ಮಠದ ಶ್ರೀಗಳು, ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ಹಲವಾರು ಮಠಾಧೀಶರು ಭಾಗವಹಿಸಿದ್ದರು ಎನ್ನುವ ಸತ್ಯ ನಿಮಗೆ ಗೊತ್ತಿರಬೇಕು. ಮಠಾಧೀಶರು ಕೇವಲ ಮಠದಲ್ಲಿ ಕುಳಿತುಕೊಳ್ಳದೆ ಸಮಾಜಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅನ್ಯಾಯವನ್ನು ಸರಿ ಪಡಿಸುವ ನಿಟ್ಟಿನಲ್ಲಿ ಹೋರಾಟ ಮಾಡುವುದರಲ್ಲಿ ತಪ್ಪೇನಿದೆ. ಮಠಾಧೀಶರು ಸಮಾಜದ ಒಂದು ಭಾಗವಾಗಿದ್ದಾರೆ ಅನ್ನೋ ಸಾಮಾನ್ಯ ಜ್ಞಾನ ಅವರಿಗೆ ಇದ್ದಂತಿಲ್ಲ.
ನಿಮಗೆ ನಿಜವಾದ ಸಮಾಜದ ಕಳಕಳಿ ಇದ್ದರೆ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸುವಂತೆ ಸರಕಾರಕ್ಕೆ ಒತ್ತಾಯಿಸಬೇಕು. ಜೊತೆಗೆ ರೈತರ ಪರವಾಗಿ ತಾವು ನಿಲ್ಲಬೇಕು. ರೈತರು ಎಂದರೆ ಯಾವುದೇ ಜಾತಿ ಯಾವುದೇ ಧರ್ಮದವರಲ್ಲ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು. ವಕ್ಫ್ ವಿರುದ್ದ ಕೇವಲ ಬಸನಗೌಡ ಪಾಟೀಲ ಅವರು ಹೋರಾಟ ಮಾಡಿಲ್ಲ. ಅವರೊಂದಿಗೆ ಎಲ್ಲ ಮಠಾಧೀಶರು ರೈತರು ಪಕ್ಷಾತೀತವಾಗಿ ಸೇರಿದ್ದರು ಎನ್ನುವರು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಎಂ. ಎಸ್. ಪಾಟೀಲ ಗಣಿಯಾರ ಮಠಾಧೀಶರ ಕ್ಷಮೆ ಕೇಳಬೇಕೆಂದು ಸಾವಿತ್ರಿ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.

