ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಜಗತ್ತಿನಲ್ಲಿ ಬಿದ್ದವರನ್ನು ಮೇಲೆತ್ತಿದ, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ, ಮಹಿಳೆಗೆ ಸ್ವಾತಂತ್ರ್ಯ ನೀಡಿದ ಬಸವಣ್ಣನವರು ನಮಗೆ ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣ ಶೆಟ್ಟಿ ಅಭಿಪ್ರಾಯ ಪಟ್ಟರು.
ಪಟ್ಟಣದ ಲಕ್ಷ್ಮೀ ನಗರದ ಕ್ವಾಟಿ ಲಕ್ಷ್ಮೀ ಜಾತ್ರೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಮಾತನಾಡಿದ ಅವರು, ಸಮಾಜದಲ್ಲಿರುವ ಮಡಿ-ಮೈಲಿಗೆಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೇ ತಿದ್ದಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನ ಇತಿಹಾಸದಲ್ಲಿ ಅದೆಷ್ಟೋ ಕ್ರಾಂತಿಗಳು ನಡೆದಿವೆ. ಆದರೆ ಬಸವಾದಿ ಶರಣರ ಕ್ರಾಂತಿ ಇಡೀ ಸಮಾಜವನ್ನೇ ಎತ್ತರದ ಮಟ್ಟಕ್ಕೆ ಒಯ್ಯುವ ಆಶಯದಿಂದ ನಡೆದ ಕ್ರಾಂತಿಯಾಗಿದೆ ಎಂದರು.
ಬಸವಾದಿ ಶರಣರು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕಾಯಕ ಸಿದ್ಧಾಂತಕ್ಕೆ ಹೊಸ ಭಾಷೆ ಬರೆದರು. ಕಾಯಕ, ದಾಸೋಹ ಸಿದ್ದಾಂತ ಸಮಾನವಾಗಿ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಸಮ ಸಮಾಜ ನಿರ್ಮಿಸುವಲ್ಲಿ ಮೇಲು ಕೀಳು ಎನ್ನದೇ ಅನುಭವ ಮಂಟಪದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿ ಬಸವಣ್ಣನವರ ನಿಜ ಆಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಸುಂದರ ಮಾಡಿಕೊಳ್ಳಬೇಕೆಂದರು.
ಬಸವನಬಾಗೇವಾಡಿಗೆ ಕರ್ನಾಟಕದಲ್ಲಿ ಅಷ್ಟೇ ಯಾಕೆ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ. ಬಸವನಬಾಗೇವಾಡಿ ಜನತೆ ಅವರ ನಿಜವಾದ ತತ್ವವನ್ನು ಆಚರಿಸುವ ಮೂಲಕ ಜಗತ್ತಿಗೆ ಮಾದರಿಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರವಚನಕಾರರಾದ ಸ್ಥಳೀಯ ವಿರಕ್ತ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿದ ಬಸವಣ್ಣನವರು ದೇವ ಭಾಷೆಯನ್ನು ಜನ ಭಾಷೆಯನ್ನಾಗಿ ಪರಿವರ್ತಿಸಿದರು. ನಮ್ಮ ಇಂದಿನ ಯುವ ಜನಾಂಗಕ್ಕೆ ಬಸವಣ್ಣನವರ ನಿಜವಾದ ತತ್ವಗಳನ್ನು ಮುಟ್ಟಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತರಿಸುವ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಂಭೀರವಾಗಿ ಆಲೋಚಿಸುವ ಅವಶ್ಯಕತೆ ಎಂದು ಹೇಳಿದ ಅವರು, ಇಡೀ ಜಗತ್ತೇ ಬಸವಣ್ಣನವರ ವಿಚಾರಗಳಿಗೆ ಮಾರುಹೋಗುವ ಈ ಸಂದರ್ಭದಲ್ಲಿ ನಾವು ನಮ್ಮ ಆತ್ಮಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಗವಾಯಿಗಳಾದ ರಾಜು ಗುಬ್ಬೇವಾಡ ಹಾಗೂ ಬಸನಗೌಡ ಪಾಟೀಲ ವಚನ ಗಾಯನ ನಡೆಸಿಕೊಟ್ಟರು.

