ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಪಡೆಯಲು ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ೧ಕೋಟಿ ೨೦ಲಕ್ಷ ರೂ. ವೆಚ್ಚದಲ್ಲಿ ೪ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಅವುಗಳ ಸದುಪಯೋಗವಾಗಬೇಕೆಂದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್, ಸಿಂದಗಿ ಪಂ.ರಾ.ಇಂ. ಉಪ ವಿಭಾಗ, ೨೦೨೩-೨೪ನೆಯ ಸಾಲಿನ ವಿವೇಕ ಯೋಜನೆ ಅಡಿಯಲ್ಲಿ ಪಟ್ಟಣದ ಸರಕಾರಿ ಪಪೂ ಕಾಲೇಜಿನಲ್ಲಿ ೧ಕೋಟಿ ೨೦ಲಕ್ಷ ರೂ.ವೆಚ್ಚದ ೪ ಕೊಠಡಿಗಳ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮೂರ ಮಹಾವಿದ್ಯಾಲಯ, ನಮ್ಮ ಕಾಲೇಜು ಎಂದು ಭಾವಿಸಬೇಕು. ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಉತ್ತಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಸಾಧಿಸಬಹುದು. ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡುವ ಸರಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತೇನೆ. ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಅಭಿವೃದ್ಧಿಯೇ ನನ್ನ ಮೂಲಮಂತ್ರ. ಕ್ಷೇತ್ರವನ್ನು ಶಕ್ತಿ ಮೀರಿ ಅಭಿವೃದ್ಧಿ ಮಾಡುವ ಉದ್ದೇಶವಿದೆ. ಸಿಂದಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿದ್ದು, ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಶಶಿಧರ ಅವಟಿ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು.
ಪ್ರಾಚಾರ್ಯ ಎನ್.ಆರ್.ಗಂಗನಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಣಮಂತ ಸುಣಗಾರ, ಉಪನ್ಯಾಸಕರಾದ ಎಂ.ಎಂ.ಯಾಳಗಿ, ಎಸ್.ಎಸ್.ಪಾಟೀಲ, ಮಲ್ಲಿಕಾರ್ಜುನ ಹೆಬ್ಬಾಳ, ಎ.ಆರ್.ರಜಪೂತ, ಎಸ್.ಎಸ್.ಸುರಪುರ, ಸಿದ್ದು ಹುಳಿ, ಸಿ.ಎಸ್.ಮೋರಟಗಿ, ಕಪಿಲ್ ಈಳಗೇರ, ಅಭಿಯಂತರ ಜಿ.ವಾಯ್.ಯರನಾಳ, ಶಂಕರಗೌಡ ಪಾಟೀಲ, ಎಂ.ಸಿ.ಮಠ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

