ಅಪ್ರತಿಮ ಮಹಿಳೆ
ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ
ಉದಯರಶ್ಮಿ ದಿನಪತ್ರಿಕೆ
ಆಕೆ ಕನ್ನಡದ ಹೆಣ್ಣು ಹುಲಿ ಕೆಳದಿಯ ರಾಣಿ ಚೆನ್ನಮ್ಮ. ಶತ್ರು ಪಾಳೆಯಕ್ಕೆ ಬೆಂಕಿ ಚೆಂಡಿನಂತಿದ್ದ ವೀರಾಧಿ ವೀರರನ್ನೇ ರಣ ರಂಗದಲ್ಲಿ ಮಂಡಿ ಊರುವಂತೆ ಮಾಡಿದ ಔರಂಗಜೇಬನಂಥ ಸುಲ್ತಾನನನ್ನೇ ಕಂಗಾಲಾಗುವಂತೆ ಮಾಡಿ ಪ್ರಾಣಭಿಕ್ಷೆ ನೀಡಿದ ವೀರ ವನಿತೆ.
ಚೆನ್ನಮ್ಮ ಕ್ರಿಸ್ತಶಕ 1672 ರಿಂದ ಕ್ರಿಸ್ತಶಕ 1697 ರವರೆಗೆ ಕೆಳದಿ ಸಂಸ್ಥಾನವನ್ನು ಆಳಿದ ವೀರ ಮಹಿಳೆ ರಾಣಿ ಚೆನ್ನಮ್ಮ ಛತ್ರಪತಿ ಶಿವಾಜಿಯ ಎರಡನೆಯ ಮಗನಾದ ರಾಜಾರಾಮನಿಗೆ ನೀಡಿದ ಆಶ್ರಯ ಮತ್ತು ಅದರ ಪರಿಣಾಮವಾಗಿ ಯುದ್ಧಕ್ಕೆ ಬಂದ ಔರಂಗಜೇಬನ ಸೈನ್ಯವನ್ನು ಸೋಲಿಸಿದ್ದು ಅವಳ ಆಳ್ವಿಕೆಯ ಅತ್ಯಂತ ಮಹತ್ವದ ಸಂಗತಿಗಳು. ತನ್ನ ಸ್ಥಿರ ಸಂಕಲ್ಪ, ದೂರ ದೃಷ್ಟಿ, ಹಾಗೂ ಕಲಿತನಗಳಿಂದ ಇಕ್ಕೇರಿ ಸಂಸ್ಥಾನವನ್ನು ವಿಪತ್ತಿನಿಂದ ಪಾರು ಮಾಡಿದಳೆಂದು ಚೆನ್ನಮ್ಮ ಪ್ರಸಿದ್ಧಳಾಗಿದ್ದಾಳೆ. ಶತದಿಕ್ಕುಗಳಿಂದ ಶತ್ರುಗಳು ಮುಗಿಬಿದ್ದಾಗಲೂ ಅವರನ್ನು ಸೋಲಿಸಿ ಇಕ್ಕೇರಿ ಸಂಸ್ಥಾನವನ್ನು ಸಂರಕ್ಷಿಸಿದ ರಣಚತುರೆ ಆಕೆ.
ಚೆನ್ನಮ್ಮನು ಕೋಟಿಪುರದ ಸಿದ್ದಪ್ಪ ಶೆಟ್ಟರ ಮಗಳು ಹಾಗೂ ಒಂದನೆಯ ಸೋಮಶೇಖರ ನಾಯಕನ ಮಡದಿ. ಕೆಳದಿಯ ರಾಜ ಸೋಮಶೇಖರ ನಾಯಕ ಪ್ರಾರಂಭದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರೂ, ದುರ್ಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾಗಿ ಮತಿ ವಿಕಲನಾಗಿ ಕೊನೆಗೆ 1671ರಲ್ಲಿ ಕೊಲೆಯಾದನು. ಅವನಿಗೆ ಮಕ್ಕಳಿರಲಿಲ್ಲ. ಕೆಳದಿ ಸಂಸ್ಥಾನದಲ್ಲಿ ಅರಾಜಕತೆ ಉಂಟಾಯಿತು. ನಾಯಕ ಮನೆತನದ ವಿರೋಧಿಗಳು ತಮಗೆ ಬೇಕಾದವನೊಬ್ಬನನ್ನು ನಾಯಕ ಪಟ್ಟಕ್ಕೆ ತರಲು ಹವಣಿಸಿದರು. ಅಂತ ದುರ್ಭರ ಸನ್ನಿವೇಶದಲ್ಲಿ 1672 ರಲ್ಲಿ ಕವಲೇದುರ್ಗದಲ್ಲಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತದೆ. ಆಗ ಚೆನ್ನಮ್ಮ ಆಡಳಿತವನ್ನು ವಹಿಸಿಕೊಂಡು ಅಸಾಧಾರಣ ಜಾಣ್ಮೆಯಿಂದ ಸಂಸ್ಥಾನದಲ್ಲಿ ಶಾಂತಿ ಸ್ಥಾಪಿಸಿದಳು.
ಕೆಳದಿಯಲ್ಲಿ ಉಂಟಾಗಿದ್ದ ದುಸ್ಥಿತಿಯನ್ನು ಉಪಯೋಗಿಸಿಕೊಂಡು ಬಿಜಾಪುರದ ಸುಲ್ತಾನ ಮತ್ತು ಇತರ ಪಾಳೆಯಗಾರರು ಕೆಳದಿ ಯನ್ನು ಕಬಳಿಸಲು ಹೊಂಚು ಹಾಕಿದ್ದರು. ವೈರಿಗಳ ಸಂಚಿನಿಂದಾಗಿ ಚೆನ್ನಮ್ಮ ಒಮ್ಮೆ ರಾಜಧಾನಿಯಿಂದ ತಲೆ ತಪಿಸಿಕೊಳ್ಳಬೇಕಾಯಿತು. ಅವಳು ತನ್ನ ನೆಚ್ಚಿನ ಸಚಿವನಾದ ಗುರುಬಸಪ್ಪ ದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ ಹಾಗೂ ತಿಮ್ಮರಸಯ್ಯ ಇವರ ಸಹಾಯದಿಂದ ವೈರಿಗಳನ್ನು ಸದೆಬಡಿದು ಸಂಸ್ಥಾನವನ್ನು ವಿಪತ್ತಿನಿಂದ ರಕ್ಷಿಸಿದಳು. ಮೈಸೂರು ಮತ್ತು ಕೆಳದಿಯ ಮದ್ಯೆ ರಾಜ್ಯ ವಿಸ್ತರಣೆಗಾಗಿ ನಡೆಯುತ್ತಿದ್ದ ಯುದ್ಧಗಳು ರಾಣಿ ಚೆನ್ನಮ್ಮಾಜಿಯ ಕಾಲದಲ್ಲೂ ಮುಂದುವರೆದವು. ಚೆನ್ನಮ್ಮ ಮೈಸೂರಿನ ಒಡೆಯರ ರಾಜ್ಯ ವಿಸ್ತರಣ ಕಾರ್ಯವನ್ನು ಎದುರಿಸಿದ್ದಳು. ಆದರೂ ಪರಾಕ್ರಮಿಯಾದ ಚಿಕ್ಕದೇವರಾಜ ಒಡೆಯರ್ 1695ರ ವೇಳೆಗೆ ಕೆಳದಿಯ ಬಲವನ್ನು ಸೋಲಿಸಿ ಅರಕಲಗೂಡು ಹಾಸನ ಪ್ರದೇಶಗಳನ್ನು ವಶಪಡಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಸಕ್ಕರೆ ಪಟ್ಟಣದವರೆಗೂ ರಾಜ್ಯವನ್ನು ವಿಸ್ತರಿಸಿದನು.
ಕೆಳದಿಯ ರಾಣಿಯ ರಾಜಕೀಯ ಚತುರತೆಗೆ ಇನ್ನೊಂದು ನಿದರ್ಶನವಿದೆ. ಛತ್ರಪತಿ ಶಿವಾಜಿಯ ಮೊದಲ ಮಗ ಸಂಭಾಜಿ ಕೊಲೆಯಾಗುತ್ತದೆ. ಎರಡನೇ ಮಗ ರಾಜಾರಾಮನನ್ನು ಕೊಂದು ಮರಾಠ ಸಾಮ್ರಾಜ್ಯ ವಶಪಡಿಸಿಕೊಳ್ಳಲು ಔರಂಗಜೇಬ ಹವಣಿಸುತ್ತಾನೆ. ಹೆದರಿದ ರಾಜಾರಾಮ ಸನ್ಯಾಸಿ ವೇಷ ತೊಟ್ಟು ರಕ್ಷಣೆ ಕೋರಿ ಚೆನ್ನಮ್ಮ ಬಳಿಗೆ ಬರುತ್ತಾನೆ. ರಾಣಿಯು ಅಭಯ ನೀಡುತ್ತಾಳೆ, ಔರಂಗಜೇಬನ ಸೈನ್ಯ ಕೆಳದಿಯ ಗಡಿಗೆ ಬಂದು ನಿಲ್ಲುತ್ತದೆ. ಕನ್ನಡದ ರಾಣಿ ಔರಂಗಜೇಬನ ಸೇನೆಯನ್ನು ಸದೆ ಬಡೆಯುತ್ತಾಳೆ. ಔರಂಗಜೇಬ ಮತ್ತು ಆತನ ಮಗ ಮೊಹಮ್ಮದ್ ಅಜಂ ಶಾ ಇಬ್ಬರೂ ಸೆರೆಯಾಳಾಗುತ್ತಾರೆ. ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಾರೆ. ಇಬ್ಬರನ್ನೂ ಕೊಂದು ಮೊಘಲ್ ಸಾಮ್ರಾಜ್ಯವನ್ನು ಚೆನ್ನಮ್ಮ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ದೊಡ್ಡತನ ಮೆರೆದ ಚೆನ್ನಮ್ಮ ಇಬ್ಬರನ್ನೂ ಕ್ಷಮಿಸುತ್ತಾಳೆ.
ಮೊಘಲರ ಸೋಲಿನಿಂದ ರಾಣಿ ಚೆನ್ನಮ್ಮಾಜಿಯ ಕೀರ್ತಿ ಇಡೀ ಭಾರತದಲ್ಲಿ ಹಬ್ಬಿತು. ಈ ಸಂಗತಿಯನ್ನು ಕುರಿತ ಜನಪದ ಗೀತೆಗಳು ಇಂದಿಗೂ ಕನ್ನಡ ನಾಡಿನಲ್ಲಿ ಪ್ರಚಾರದಲ್ಲಿವೆ. ಚೆನ್ನಮ್ಮ ಮೊಘಲರ ಈ ಪ್ರಚಂಡ ಸೈನ್ಯವನ್ನು ಸೋಲಿಸಿ ಅವರು ರಣರಂಗದಿಂದ ಕಾಲ್ತೆಗೆಯುವಂತೆ ಮಾಡಿದಳು. ಕಣಿವೆಗಳಲ್ಲಿ ವೈರಿಸೈನ್ಯವನ್ನು ಸಿಲುಕಿಸಿ ಔರಂಗಜೇಬನು ಒಪ್ಪಂದಕ್ಕೆ ಬರುವಂತೆ ಮಾಡಿದಳು.
ಚೆನ್ನಮ್ಮನಿಗೆ ಸಂತತಿ ಇರಲಿಲ್ಲವಾದ್ದರಿಂದ ಬಸಪ್ಪ ಎಂಬ ಕುಮಾರನನ್ನು ದತ್ತಕವಾಗಿ ಸ್ವೀಕರಿಸಿದಳು. ಅವನಿಗೆ ಯುದ್ಧ ಮತ್ತು ಆಡಳಿತದಲ್ಲಿ ಶಿಕ್ಷಣ ಕೊಟ್ಟು 1696ರಲ್ಲಿ ಕೆಳದಿ ಬಸವ ಭೂಪಾಲನೆಂದು ಹೆಸರಿಟ್ಟು ಆಡಳಿತ ವಹಿಸಿಕೊಟ್ಟಳು. ಎರಡು ವರ್ಷಗಳ ನಂತರ 1698ರಲ್ಲಿ ಚೆನ್ನಮ್ಮ ಮರಣ ಹೊಂದಿದಳೆಂದು ತಿಳಿದುಬರುತ್ತದೆ.
ದಕ್ಷ ಆಡಳಿತಗಾರಳಾದ ಚೆನ್ನಮ್ಮ ಮತೀಯ ವಿಚಾರಗಳಲ್ಲಿ ಉದಾರ ನೀತಿ ಹೊಂದಿದ್ದಳು. ಜಂಗಮರಿಗೆ ಮಠಗಳನ್ನು ಕಟ್ಟಿಸಿಕೊಟ್ಟಳು. ತನ್ನ ಪತಿಯ ಹೆಸರಿನಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಿದಳು. ಒಂದು ಅಗ್ರಹಾರವನ್ನು ತನ್ನ ಸ್ವಂತ ಹೆಸರಿನಿಂದ ಚೆನ್ನಮ್ಮಾoಬಪುರ ಎಂಬುದಾಗಿ ಕರೆದಳು. ಕೆಳದಿಯ ವೀರಭದ್ರ ದೇವಾಲಯದ ಮುಂದಿನ ಧ್ವಜ ಸ್ತಂಭವನ್ನು ನೆಡೆಸಿದವಳು ಈಕೆಯೇ. ಮೂಕಾಂಬ ದೇವಾಲಯಕ್ಕೆ ವಿಶೇಷ ದಾನ ನೀಡಿದಳು. ತನ್ನ ರಾಜ್ಯದಲ್ಲಿ ಚರ್ಚುಗಳನ್ನು ನಿರ್ಮಿಸಲು ಪೋರ್ಚುಗೀಸರಿಗೆ ಅನುಮತಿ ನೀಡಿದಳು. ಚೆನ್ನಮ್ಮ ಅನೇಕ ದಾನ ಧರ್ಮಗಳನ್ನು ಮಾಡಿದ್ದಾಳೆ. ಮಠಗಳನ್ನು ದೇವಾಲಯಗಳನ್ನು ಸ್ಥಾಪಿಸಿದ್ದಾಳೆ. ಅವುಗಳಲ್ಲಿ ದತ್ತಪೀಠದಲ್ಲಿರುವ ಚಂದ್ರದ್ರೋಣ ಪರ್ವತದ ದೇವಾಲಯವೂ ಒಂದಾಗಿದೆ.
ಚೆನ್ನಮ್ಮ ಧೈರ್ಯ ಶೌರ್ಯದ ಜೊತೆಗೆ ಧಾರ್ಮಿಕ ನಿಲುವಿಗೆ ಹೆಸರಾದವಳು. ಬಸವಾದಿ ಶರಣರ ವಚನ ಪಠಿಸುತ್ತಾ ನಿತ್ಯ ಇಷ್ಟಲಿಂಗ ಧ್ಯಾನ ಮಾಡುತ್ತಿದ್ದಳು. ಶೃಂಗೇರಿ ಮಠಕ್ಕೆ ರಾಜಾಶ್ರಯ ಅಗ್ರಹಾರ ಮತ್ತು ಜಂಗಮ ಮಠಗಳ ನಿರ್ಮಾಣ, ಎರಡು ಲಕ್ಷ ಜಂಗಮರಿಗೆ ದಾಸೋಹ ವ್ಯವಸ್ಥೆ, ಕೆರೆಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಳು. ಶೃಂಗೇರಿಗೆ ಚಿನ್ನದ ಗೋಪಾಲಕೃಷ್ಣ ಮತ್ತು ಸ್ಪಟಿಕಲಿಂಗ, ಕೊಲ್ಲೂರು ಮೂಕಾಂಬಿಕೆಗೆ ಪಚ್ಚೆ ಪದಕ , ಹೊರನಾಡು ಅನ್ನಪೂರ್ಣೇಗೆ ವಿಜಯ ದಶಮಿಯಂದು ವಿಶೇಷ ಪೂಜೆಗೆ ಪ್ರೋತ್ಸಾಹ ನೀಡಿದ್ದಳು. ಬಸಪ್ಪನೆಂಬ ದತ್ತು ಪುತ್ರನನ್ನು ಪಡೆದು ಉತ್ತಮ ಶಿಕ್ಷಣ ಕೊಡಿಸಿದಳು. ಮುಂದೆ ಆತ ಬಸಪ್ಪ ನಾಯಕನೆಂದು ಖ್ಯಾತಿ ಪಡೆದ. ಆತ ಬರೆದ ಗ್ರಂಥ ‘ಶಿವ ತತ್ವ ರತ್ನಾಕರ’ ಸಾಂಸ್ಕೃತಿಕ ವಿಶ್ವಕೋಶ ಎಂದೇ ಜಾತಿ ಪಡೆದಿದೆ. ದಿಟ್ಟ ನಿರ್ಧಾರಗಳ ಮೂಲಕ ಗಮನ ಸೆಳೆದಿದ್ದ ವೀರ ವನಿತೆಯ ಪಟ್ಟಾಭಿಷೇಕವಾಗಿ ಇದು 350ನೇ ವರ್ಷ. ಆಕೆಯ ನೆನಪುಗಳನ್ನು ಉಳಿಸುವ ಆಕೆಯ ಶೌರ್ಯವನ್ನು ವಿವರಿಸುವ ಕಥನಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಆದ್ಯತೆ ಮೇಲೆ ಆಗಬೇಕಿದೆ.