ಲೇಖನ
– ಜಯಶ್ರೀ .ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು,
ಬೆಳಗಾವಿ ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಬದುಕಿನ ಸಪಾಟು ರಸ್ತೆಯಲ್ಲಿ ಎಷ್ಟೇ ವೇಗವಾಗಿ ಚಲಿಸುವ ಮನಸ್ಸಿದ್ದರೂ ಭಯವೆನ್ನುವುದು ಅಡೆತಡೆಯಂತೆ ಅಡ್ಡಗಟ್ಟುತ್ತದೆ. ಅಡೆತಡೆಯೆಂಬ ಏರಿ ದಾಟಿದ ಮೇಲೆಯೇ ಪರಿಮಳ ತುಂಬಿಕೊಂಡ ಜೀವನದ ಕಂಪು ಎಲ್ಲೆಲ್ಲೂ ಹರಡುವುದು. ಒಮ್ಮೆ ಮನದಲ್ಲಿ ಭಯ ಮೂಡಿದರೆ ಸಾಕು ಹದವಾದ ಲಯದಲ್ಲಿ ಸಾಗುತ್ತಿದ್ದ ಬದುಕು ಮುಗ್ಗರಿಸಿದಂತೆ ಆಗುತ್ತದೆ. ಭಯವೆಂಬುದು ಕತ್ತಲಲ್ಲಿ ಕರಿ ಬೆಕ್ಕನ್ನು ಹುಡುಕಿದಂತೆ. ಭಯದ ಭಯಕ್ಕೆ ಸಣ್ಣ ಪುಟ್ಟ ಆಸೆಗಳಿಗೂ ಕಡ್ಡಿ ಗೀರುವ ಪ್ರಸಂಗಗಳು ಬರುತ್ತವೆ. ಭಯವಿಲ್ಲದೇ ಬದುಕಬೇಕೆನ್ನುವ ಹಂಬಲ ಯಾರಿಗಿಲ್ಲ?
ಭಯದ ಲೋಕ
ವಿವಿಧ ವಯೋಮಾನದವರಿಗೆ ಭಯದ ಲೋಕಗಳು ಭಿನ್ನ ಭಿನ್ನ. ಇದರರ್ಥ ಭಯ ಎನ್ನುವುದು ಎಲ್ಲ ವಯಸ್ಸಿನಲ್ಲೂ ಇದ್ದದ್ದೇ ಅಂದಂಗಾಯ್ತು. ದಿಢೀರ್ ಹುಟ್ಟಿಕೊಳ್ಳುವ ಭಯ ಒಂದೆಡೆಯಾದರೆ, ಸದ್ದಿಲ್ಲದೇ ಸುಳಿವಿಲ್ಲದೇ ಬಾಲ್ಯದಿಂದಲೂ ಬೆನ್ನು ಹತ್ತಿ ಬಂದ ಭಯ ಮತ್ತೊಂದೆಡೆ. ಹೀಗೆ ಭಯ ಅಟ್ಟಾಡಿಸಿಕೊಂಡು ಹೊರಟರೆ ಮುಂದೆ ಹೇಗೆ ಎನ್ನುವ ತಲೆಬಿಸಿಯಲ್ಲಿ ಕಿರಿ ಕಿರಿ ಉಂಟಾಗುತ್ತದೆ. ಇದರ ಪರಿಣಾಮವಾಗಿ ಮನಸ್ಸು ಇನ್ನಿಲ್ಲದಂತೆ ಹಿಂಡಿ ಹಿಪ್ಪಿಯಾಗಿಸಲು ಶುರುವಿಟ್ಟುಕೊಳ್ಳುತ್ತದೆ. ಭಯದ ಅಟ್ಟಹಾಸದ ಗೋಳನ್ನು ಸ್ವಗತ ಹೇಳಿಕೊಂಡೇ ದಿನ ದೂಡುವುದು ಆಗುತ್ತದೆ. ಭಯದ ಭಯಕ್ಕೆ ಒಣಗಿದ ತರಕಾರಿಯಂತೆ ಸಪ್ಪೆ ಮುಖ ಮಾಡಿಕೊಂಡು ಬದುಕಿನ ಬಂಡಿ ತಳ್ಳಬೇಕಾಗುತ್ತದೆ.
ಭಯ-ಚಿಂತೆ
ಭಯ ಹೀಗೇ ಮುಂದುವರಿದರೆ ಮುಂದೇನಾಗುವುದೋ ಎಂದು ಭವಿಷ್ಯದ ಬಗ್ಗೆ ಚಿಂತಿಸುತ್ತ ಕೈಯಲ್ಲಿರುವ ವರ್ತಮಾನ ಕಳೆದುಕೊಳ್ಳುತ್ತೇವೆ. “ಬದುಕಿನ ಭವಿಷ್ಯವನ್ನು ಊಹಿಸಬಹುದಾಗಿದ್ದರೆ ಅದು ಬದುಕಾಗಿಯೇ ಉಳಿಯದೆ, ಅದರ ಕಂಪೆಲ್ಲ ಅಳಿದು ಹೋಗುತ್ತಿತ್ತು.” ಎಂದಿದ್ದಾರೆ ಎಲೀನರ್ ರೂಸ್‌ವೆಲ್ಟ್. ಭಯ ಅಲ್ಪಾವಧಿಯಲ್ಲಿ ಮಾಯವಾದರೆ ತೊಂದರೆಯಿಲ್ಲ. ಅದು ಚಿಂತೆಗೆ ಕಾರಣವಾಗುವ ತೆರದಲ್ಲಿ ಮುಂದುವರಿದರೆ ಜೀವನಕ್ಕೆ ಅಡ್ಡಿಪಡಿಸುವುದು ಖಂಡಿತ. ಚಿಂತೆಯು ಊಟ,ನಿದ್ದೆ, ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು. ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಒಟ್ಟಿನಲ್ಲಿ ಜೀವನಾನಂದದಿಂದ ತಡೆಯತ್ತದೆ. ಭಯ ಹಾಗೂ ಚಿಂತೆಯ ಚಕ್ರಗಳನ್ನು ಮುರಿಯಲು ಕಷ್ಟವಾಗಬಹುದು. ಆದರೆ ಅದನ್ನು ತಡೆಯಲು ಸಾಕಷ್ಟು ಮಾರ್ಗಗಳಿವೆ. ಅದರಲ್ಲಿ ಕೆಲವು ಇಲ್ಲಿವೆ.
ಮೊದಲ ಹೆಜ್ಜೆ
ಯಾವುದು ನಮ್ಮನ್ನು ಭಯದ ಲೋಕದಲ್ಲಿ ಮುಳುಗಿಸುತ್ತದೆ ಎಂದು ತಿಳಿದುಕೊಳ್ಳುವುದು ಭಯವನ್ನು ನಿವಾರಿಸುವ ಮೊದಲ ಹೆಜ್ಜೆ. ಭಯವಾದಾಗ ಏನೇನಾಗುತ್ತದೆ ಎಂದು ತಿಳಿಯುವುದು ಮುಖ್ಯ. ಹೃದಯ ತುಂಬ ವೇಗವಾಗಿ ಬಡಿದುಕೊಳ್ಳುತ್ತದೆ. ತುಂಬಾ ಬೆವರುತ್ತೇವೆ. ತಲೆ ಸುತ್ತುತ್ತದೆ. ಬಾಯಿ ಒಣಗುತ್ತದೆ. ಬೇರೆ ಯಾವುದರಲ್ಲೂ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಇದೆಲ್ಲ ಏಕೆ ಸಂಭವಿಸುತ್ತೆಂದರೆ ದೇಹವು ಭಯವನ್ನು ಗ್ರಹಿಸುತ್ತದೆ. ತುರ್ತು ಪರಿಸ್ಥಿತಿಗಾಗಿ ಸಿದ್ಧಪಡಿಸುತ್ತದೆ. ಮೆದುಳಿನ ಭಾವನಾತ್ಮಕ ಭಾಗವು ದೇಹಕ್ಕೆ ಅಪಾಯದ ಸಂಕೇತಗಳನ್ನು ಕಳಿಸುತ್ತಲೇ ಇರುತ್ತದೆ ಎಂಬುದನ್ನು ತಿಳಿದರೆ ದೇಹವು ಬೆರಿಕೆಯಾಗಿ ಗ್ರಹಿಸುವ ವಿಷಯದ ಮೇಲೆ ಕೇಂದ್ರೀಕರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಭಯದ ಬಗೆಗಿರುವ ಭಯವನ್ನು ಬಿಟ್ಟು ಹಾಕಲು ಸಹಕರಿಸುತ್ತದೆ.
ಬದುಕು ಭರವಸೆ
ಬದುಕು ಭರವಸೆ ಮೇಲೆ ನಿಂತಿದೆ ಅನ್ನುವ ಮಾತು ನೆನಪಾದರೆ ಸಾಕು ರೇಜಿಗೆ ಹುಟ್ಟಿಸಿರುವ ಭಯದ ಟೈರ್ ಪಂಕ್ಚರ್ ಆಗಿ ಮನದ ಅಂಗಳದಲ್ಲಿ ಸ್ವಲ್ಪ ಧೈರ್ಯ ಚಿಗುರಿಕೊಳ್ಳುತ್ತದೆ. “ಧೈರ್ಯ ಎಷ್ಟು ಮುಖ್ಯವೋ ಯಶಸ್ಸಿನ ಹಾದಿಯಲ್ಲಿ ಒತ್ತಡ ಮೂಡಿಸಿ ಕಾರ್ಯ ನಿರ್ವಹಿಸುವಂತೆ ಮಾಡುವ ಭಯವೂ ಅಷ್ಟೇ ಮುಖ್ಯ.” ಎನ್ನುವ ಮಾತು ಭಯದ ಮಹತ್ವಕ್ಕೆ ಅಡಿಗೆರೆ ಎಳೆದಂತಿದೆ. ಭಯದ ಸಖ್ಯದ ಕಟು ಮಧುರತೆ ಗೆಲುವಿನ ರುಚಿಕರ ಫಲದ ಅವಿಭಾಜ್ಯ ಅಂಗ ಅನ್ನುವುದು ಅಷೇ ಸತ್ಯ. ಸಮಸ್ಯೆಯಲ್ಲಿ ಮುಖ ತೊಳೆಯುವ ದಿನಗಳಲ್ಲಿ ಕೊಂಚ ಸಹನೀಯಗೊಳಿಸಬಲ್ಲ ಅಮೃತ ಫಲವೇ ಧೈರ್ಯ. ಅದು ಸಾಥ್ ಕೊಟ್ಟರೆ ಜೀವನ ಸಾರ್ಥಕತೆಯ ದಾರಿ ಹಿಡಿಯುತ್ತದೆ. ಧೈರ್ಯವು ಅಂಜಿಕೆ ಇಲ್ಲದಿರುವುದನ್ನು ಸೂಚಿಸುವುದಿಲ್ಲ. ಬದಲಿಗೆ ನಿಮಗೆ ಮುಖ್ಯವಾದ ಗುರಿಯೊಂದರ ಅನ್ವೇಷಣೆಯಲ್ಲಿ ನಿಮ್ಮ ಅಂಜಿಕೆಯನ್ನು ಲೆಕ್ಕಿಸದೇ ಮುನ್ನುಗ್ಗುವ ಛಾತಿಯನ್ನು ಸೂಚಿಸುತ್ತದೆ. ಧೈರ್ಯಶಾಲಿಗಳಾದರೆ ಸಾಕು ಭಯ ಮಾಯ.
ಸವಾಲುಗಳ ಹೊದಿಕೆ
ಭಯ ನಿರಂತರವಾಗಿ ಹೊಸ ಹೊಸ ವೈಖರಿಯ, ತರಹೇವಾರಿ ರೀತಿಯಲ್ಲಿ ಕಾಡುವ ಬದುಕಿನ ದಾರಿಯಲ್ಲಿ ಪ್ರತಿ ಮುಂಜಾವು ಹೊಸದು. ಪ್ರತಿ ದಿನವೂ ಹೊಸದು. ಹೊಸ ಹೊಸ ಸವಾಲುಗಳು ಧುತ್ತೆಂದು ಮುಂದೆ ಬಂದು ನಿಲ್ಲುತ್ತವೆ. ಸವಾಲುಗಳು ಒಂದು ರೀತಿಯಲ್ಲಿ ಅವಕಾಶಗಳಿಗೆ ಹೊಸ ಬಾಗಿಲುಗಳು. ಅವು ಮೇಲ್ನೋಟಕ್ಕೆ ಕಾಣುವುದಿಲ್ಲ ಏಕೆಂದರೆ ಅವು ಸವಾಲುಗಳ ಹೊದಿಕೆ ಹೊದ್ದು ಬರುತ್ತವೆ. ಸಮುದ್ರದ ದಂಡೆಯಲ್ಲಿ ಮಕ್ಕಳು ಆಟವಾಡುತ್ತ ತಮ್ಮ ಪುಟ್ಟ ಕೈಗಳಲ್ಲಿ ಮರಳನ್ನು ತುಂಬಿಕೊಂಡು, ತಮ್ಮ ಬೆರಳ ಸಂದುಗಳಿಂದ ಅದನ್ನು ಪೂರ್ಣವಾಗಿ ಕೆಳಕ್ಕೆ ಚೆಲ್ಲುತ್ತಾರೆ. ಪುಟ್ಟ ಮಕ್ಕಳು ಮಾಡಿದ್ದನ್ನೇ ನಾವು ಅವಕಾಶಗಳೊಂದಿಗೆ ಮಾಡುತ್ತೇವೆ. ಭಯ ತೊರೆಯದಿದ್ದರೆ ಎಷ್ಟು ಹಾನಿಗೊಳಗಾಗಬಹುದು ಎಂಬುದನ್ನು ನಿಖರವಾಗಿ ಕಂಡು ಹಿಡಿಯಲು ಸಾಧ್ಯವಿಲ್ಲ. ಆದ್ದರಿಂದ ಭಯದ ದೈಹಿಕ ಮತ್ತು ಮಾನಸಿಕ ಭಾವನೆಗಳಿಂದ ಅತಿಯಾಗಿ ಅನುಭವಿಸುವುದನ್ನು ಬಿಟ್ಟು ಸವಾಲುಗಳ ಹೊದಿಕೆ ತೆರೆದರೆ ಬದುಕು ಬಂಗಾರ.
ಅದೃಷ್ಟವಿದೆ
ಭಯವು ಅತ್ಯಂತ ಶಕ್ತಿಯುತ ಭಾವನೆಗಳಲ್ಲಿ ಒಂದಾಗಿದೆ. ಇದು ನಮ್ಮ ಮನಸ್ಸು ಮತ್ತು ದೇಹದ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. ನಮ್ಮ ಉಳಿವಿಗೆ ಪ್ರಮುಖವಾದ ಪ್ರತಿಕ್ರಿಯೆಯಾಗಿದೆ. ಬೆಂಕಿ ಬಿದ್ದರೆ, ದಾಳಿಗೊಳಾದರೆ, ಪರೀಕ್ಷೆಗಳು ಸಮೀಪಿಸಿದರೆ, ಉದ್ಯೋಗ ಸಂದರ್ಶನ, ಸಾರ್ವಜನಿಕ ಭಾಷಣದಂತಹ ಘಟನೆಗಳಲ್ಲಿ ಇದು ಸಾಮಾನ್ಯ. ಸರಳವಾಗಿ ಹೇಳಬೇಕೆಂದರೆ ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ಘಟನೆಗಳಿಗೆ ಇದು ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ರಾಬಿನ್ ಶರ್ಮಾ ತಮ್ಮ ‘ನಿಮ್ಮ ಭಾಗ್ಯವನ್ನು ಅನ್ವೇಷಿಸಿ.’ ಎನ್ನುವ ಪುಸ್ತಕದಲ್ಲಿ ಚೆನ್ನಾಗಿ ಹೇಳಿದ್ದಾರೆ “ಭಯದ ಇನ್ನೊಂದು ಬದಿಯಲ್ಲಿ ನಿಮ್ಮ ಅದೃಷ್ಟವನ್ನು ಕಂಡುಕೊಳ್ಳುತ್ತೀರಿ.”ನಿಜಕ್ಕೂ ಅವರ ಮಾತು ಸ್ಪೂರ್ತಿದಾಯಕ. ಅಂದ್ಹಾಗೆ ಸಿದ್ಧತೆಯು ಅವಕಾಶವನ್ನು ಭೇಟಿಯಾಗುವುದೇ ಅದೃಷ್ಟ. ಅವರ ನುಡಿಮುತ್ತು ಭಯಪ್ರಿಯರಿಗೆ ಇಷ್ಟವಾಗುವಂತಿದೆ. ಭಯವಿಲ್ಲದ ಅದೃಷ್ಟದ ದಿನಗಳಿಗಾಗಿ ಕಾಂಯ್ದು ಕುಳಿತುಕೊಳ್ಳುವುದು ಮೂರ್ಖತನ. “ಕಾದಿರುವವರಿಗೆ ಒಳ್ಳೆಯದೇ ದೊರೆಯಬಹುದು ಆದರೆ ಅದು ಲವಲವಿಕೆಯಿಂದ ಕೆಲಸ ಮಾಡಿದಾತ ಬಿಟ್ಟು ಹೋದದ್ದು ಮಾತ್ರವಾಗಿರುತ್ತದೆ.” ಇದು ಅಬ್ರಹಾಂ ಲಿಂಕನ್‌ವರ ನುಡಿ. ಲವಲವಿಕೆಯಿಂದ ಕೆಲಸ ನಿರ್ವಹಿಸಿ, ಭಯದ ಇನ್ನೊಂದು ಬದಿಯಲ್ಲಿದೆ ಅದೃಷ್ಟವೆನ್ನುತ್ತ ಎರಡು ತೋಳುಗಳನ್ನು ಚಾಚಿ ಅದೃಷ್ವವನ್ನು ಬಾಚಿಕೊಳ್ಳೋಣವಲ್ಲವೇ?