ಲೇಖನ
– ಹೇಮಲತಾ
ಉದಯರಶ್ಮಿ ದಿನಪತ್ರಿಕೆ
"ಈ ಬಾರಿ ಒಳ್ಳೆಯ ಅಂಕಗಳನ್ನು ನೀನು ಪಡೆಯದಿದ್ದರೇ ಹಾಸ್ಟೆಲ್ ಗೆ ಹಾಕುತ್ತೇನೆ" ಎಂದು ಶಿವು ತನ್ನ ಮಗ ದೀಪುವಿಗೆ ಕಟ್ಟುನಿಟ್ಟಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದಾಗ ದೀಪುವಿನ ಮುಖ ಬಾಡಿ ಹೋಯ್ತು. ಕಂಗಳಲ್ಲಿ ತೆಳುವಾಗಿ ಕಂಬನಿ ಶೇಖರವಾಯ್ತು. ಶಿವು ಮದುವೆಯಾದ ಹತ್ತು ವರ್ಷಗಳ ನಂತರ ದೀಪೂ ಹುಟ್ಟಿದ್ದ. ಅಮ್ಮಅಜ್ಜಿ ದೊಡ್ಡಪ್ಪ ದೊಡ್ಡಮ್ಮ ಎಲ್ಲರ ಮುದ್ದು ಕೊಂಡಾಟ ಅವನನ್ನು ಬೇಜವಾಬ್ದಾರಿ ಹುಡುಗನನ್ನಾಗಿಸಿತ್ತು.
ಹುಡುಗ ಜಾಣ ಆದರೆ ಗುರಿಯೆಡೆಗೆ ಗಮನವಿಲ್ಲ. ಓದಲು ಪುಸ್ತಕ ತೆರೆದರೆ ಸಾಕು ಮೇಲಿಂದ ಮೇಲೆ ಆಕಳಿಕೆ ತೂಕಡಿಕೆ ಹಸಿವು ಎಲ್ಲಾ ಒಮ್ಮೆಲೇ ದಾಳಿ ಮಾಡಿ ಪುಸ್ತಕ ಮುಚ್ಚುವಂತೆ ಮಾಡುತ್ತಿತ್ತು. ಇದೇ ಕಾರಣಕ್ಕೆ ಅಂಕಗಳಲ್ಲಿ ಸರಾಸರಿ ತೆಗೆದು ಪಾಸ್ ಆಗುವುದೇ ಮಹಾ ಭಾಗ್ಯ ಎನ್ನುವಂತಾಗಿ ಅಪ್ಪನ ಕೆಂಗಣ್ಣಿಗೆ ಗುರಿಯಾಗುತ್ತಿದ್ದ.
ಮಗನ ಅಳು ಮನೆಯವರ ವಿರುಧ್ಧವಾದ ಅಭಿಪ್ರಾಯಗಳ ಮಧ್ಯೆಯೂ ದೀಪುವನ್ನು ಅವನ ತಂದೆ ದೊಡ್ಡ ಪಟ್ಟಣದ ಒಳ್ಳೆಯ ಹೆಸರಿದ್ದ ವಸತಿ ಸಮೇತದ ಶಾಲೆಗೆ ಸೇರಿಸಿ ಬಂದ.
ಮರು ದಿನದಿಂದಲೇ ದೀಪುವಿಗೆ ಹಿರಿಯ ತರಗತಿಯ ವಿದ್ಯಾರ್ಥಿಗಳಿಂದ ರ್ಯಾಗಿಂಗ್ ಹೆಸರಲ್ಲಿನ ಕಿರುಕುಳ ಶುರುವಾಗಿತ್ತು. ಹೇಳಿದಂತೆ ಕೇಳದಿದ್ದರೇ ಚಿತ್ರ ಹಿಂಸೆ ಕೊಟ್ಟು ಅವಹೇಳನ ಮಾಡಿ ನಗುತ್ತಾ ಶಾಲೆಯ ಎಲ್ಲರಿಗೂ ಇವನು ಬರೀ ಅಂಗಿ ಚಡ್ಡಿ ಗಂಡಸು ಅಷ್ಟೇ. ಪುಕ್ಲ ಹುಡುಗಿರ ಹಾಗೆ, ಹೆಣ್ಣಪ್ಪಿ ಎಂದು ಉಳಿದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಕೀಳಾಗಿಸುತ್ತಿದ್ದರು. ಊರಿಂದ ಕಳಿಸಿದ್ದ ಚಕ್ಲಿ ಕೊಬ್ರಿ ಮಿಠಾಯಿ ಉಂಡೆಗಳನ್ನೆಲ್ಲಾ ಕಿತ್ತುಕೊಂಡು ಅವನ ಮುಂದೆಯೇ ಹಂಚಿ ತಿಂದಿದ್ದರು. ಆಗಾಗ ಸಿನಿಮಾ ಹೋಟೆಲ್ ಬಿಲ್ ಸಹ ಇವನೇ ಭರಿಸಬೇಕಾಗಿತ್ತು. ಮರೆಯಲ್ಲಿ ರಾತ್ರಿ ವೇಳೆ ಅವರಾಡುತ್ತಿದ್ದ ಇಸ್ಪೀಟು ಸಿಗರೇಟ್ ಗಳಿಗೂ ದೀಪುವಿನದೇ ಹಣ. ಅಪ್ಪ ಇವನ ಮಾತನ್ನು ಕೇಳಿಸಿಕೊಂಡು ವಾರ್ಡನ್ ಗೆ ಹೇಳಿದ ನಾಲ್ಕು ದಿನ ಅವರೆಲ್ಲಾ ಸುಮ್ಮನಿದ್ದರೂ ಮತ್ತೆ ಶುರು ಮಾಡುತ್ತಿದ್ದರು.
ಎರಡನೇ ವರ್ಷಕ್ಕೆ ಬರುವಷ್ಟರಲ್ಲಿ ದೀಪುವಿನ ಮನದಲ್ಲಿ ಆಕ್ರೋಶ ಸೀನಿಯರ್ಸ್ ಮೇಲೆ ದ್ವೇಷ ಶುರುವಾಗಿತ್ತು. “ನಾವೇ ಕಷ್ಟಗಳ ಪರಂಪರೆಗೆ ಅಂತ್ಯ ಹಾಡಲು ಮುನ್ನುಡಿ ಬರೆಯಬೇಕು” ಎಂದು ಒಂದು ಪುಸ್ತಕದಲ್ಲಿ ಓದಿದ್ದು ಪದೇ ಪದೇ ನೆನಪು ಬಂತು. ಪರಿಣಾಮ ಒಮ್ಮೆ ಜುಟ್ಟು ಹಿಡಿದು ಎಳೆಯಲು ಬಂದ ವಿದ್ಯಾರ್ಥಿಯ ಕೈಯ್ಯನ್ನು ಬಲವಾಗಿ ತಿರುವಿದ್ದ. ಜಗಳಕ್ಕೆ ನಿಲ್ಲುತ್ತಿದ್ದ. ಅಲ್ಲದೇ ಇಂತಹ ತುಂಟ ವಿದ್ಯಾರ್ಥಿಗಳ ವಿರುಧ್ಧ ಲಿಖಿತ ದೂರು ವಾರ್ಡನ್ ಹಾಗೂ ಪ್ರಾಂಶುಪಾಲರಿಗೆ ನೀಡಿ ಅವರ ಮುಂದಿನ ಕ್ರಮದ ಬಗ್ಗೆ ಆಗಾಗ ವಿಚಾರಿಸುತ್ತಿದ್ದ. ಅವನಲ್ಲಿ ಆತ್ಮ ವಿಶ್ವಾಸ ಊಟೆ ಒಡೆಯತೊಡಗಿತ್ತು. ಕಿರಿಯ ವಿದ್ಯಾರ್ಥಿಗಳಿಗೆ ಕಿರುಕುಳ ಕೊಟ್ಟಾಗ ಅವರ ಸಹಾಯಕ್ಕೆ ಧಾವಿಸಿ ಹೋಗಿ ಧೈರ್ಯ ತುಂಬುತ್ತಿದ್ದ.
ನಂತರ ಅವನ ಗಮನ ಸೆಳೆದಿದ್ದು ಹಾಸ್ಟೆಲ್ ಊಟ ತಿಂಡಿಯ ಒಂದೇ ರುಚಿ. ಸಾಕಷ್ಟು ಹಣ ಪಡೆಯುತ್ತಿದ್ದರೂ ಗುಣ ಮಟ್ಟದ ಕೊರತೆ ಇತ್ತು. ಎಲ್ಲಾ ವಿದ್ಯಾರ್ಥಿಗಳನ್ನು ಈ ಬಗ್ಗೆ ಒಗ್ಗೂಡಿಸಿದ ಇವನಂತೆಯೇ ಏಕತಾನತೆಗೆ ರೋಸಿಕೊಂಡಿದ್ದ ಮಕ್ಕಳು ಒಂದುಗೂಡಿದರು. ಈಗೀಗ ಹಿರಿಯ ವಿದ್ಯಾರ್ಥಿಗಳೂ ಇವನ ನಾಯಕತ್ವ ಗುಣಕ್ಕೆ ಇವನ ಹತ್ತಿರಕ್ಕೆ ಬಂದಿದ್ದರು. ತುಂಟತನ ಬೇರೆ, ನಾಯಕತ್ವ ಗುಣ ಬೇರೆ ಅದು ಎಲ್ಲರಿಗೂ ಸಾಧ್ಯದ ಮಾತಲ್ಲ ಎಂದು ಅರ್ಥ ಮಾಡಿಕೊಂಡಿದ್ದರು. ದೀಪೂ ವಿದ್ಯಾರ್ಥಿಗಳ ಪುಟ್ಟ ನಾಯಕನಾಗಿ ಬೆಳೆಯತೊಡಗಿದ್ದು. ತಾನು ಓದಿನಲ್ಲಿ ಮೊದಲಿಗ ಆಗದಿದ್ದರೇ ತನಗೆ ಬೆಲೆಯಿರುವುದಿಲ್ಲವೆಂದು ಅರ್ಥ ಮಾಡಿಕೊಂಡು ಅಲ್ಲಿನ ಗ್ರಂಥಾಲಯ ಉತ್ತಮ ಪಾಠಗಳು ಅವಿರತ ಶ್ರಮದಿಂದ ಶಾಲೆಗೇ ಪ್ರಥಮನಾಗಿ ಬಂದು ಎಲ್ಲರ ಮೆಚ್ಚುಗೆಗೂ ಪಾತ್ರ ಎನಿಸಿಕೊಂಡಾಗ ಹೆಮ್ಮೆಯೆನಿಸಿತ್ತು ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಿದ್ದರ ಬಗ್ಗೆ ಸಂತಸವೆನಿಸಿತ್ತು.
ಕಿರಿಯ ವಿದ್ಯಾರ್ಥಿಗಳ ಜೊತೆಗೆ ತನ್ನ ಸಹಪಾಠಿಗಳ ಮೆಚ್ಚುಗೆಯನ್ನು ಅವರಿಗೆ ಅಟ ಪಾಠಗಳಲ್ಲಿ ಸಹಾಯ ಮಾಡುವ ಮುಖಾಂತರ ಪಡೆದಿದ್ದ. ಮಗ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಪಾಸಾಗಿದ್ದೂ ಆತ್ಮ ವಿಶ್ವಾಸಗಳಿಸಿಕೊಂಡು ತನ್ನ ರಕ್ಷಣೆ ತಾನು ಮಾಡಿಕೊಳ್ಳುತ್ತಿರುವುದು ಶಿವೂಗೂ ಮತ್ತು ಮನೆಯವರಿಗೂ ಸಂತಸ ನೆಮ್ಮದಿ ತಂದಿತ್ತು
ಮತ್ತೆರಡು ವರ್ಷಗಳು ಸರಿದಿತ್ತು. ಈಗ ದೀಪೂ ಎಸ್.ಎಸ್.ಎಲ್.ಸಿ.ಯಲ್ಲಿ ಬೋರ್ಡ್ ಗೇ ಮೊದಲ ರ್ಯಾಂಕ್ ಬಂದಿದ್ದ. ಶಾಲೆಯಲ್ಲಿ ನಡೆದ ಅವನ ಸನ್ಮಾನ ಸಮಾರಂಭಕ್ಕೆ ಮನೆಯವರೆಲ್ಲಾ ಬಂದು ಭಾಗಿಯಾಗಿ ಸಂತಸ ಪಟ್ಟಿದ್ದರು. ಪ್ರಿನ್ಸಿಪಾಲ್ ರು ದೀಪುವಿನಂತಹ ಉತ್ತಮ ವಿದ್ಯಾರ್ಥಿಗಳು ಶಾಲೆಗೇ ಆಸ್ತಿಯೆಂದು ಹೊಗಳಿ ಭಾವಪೂರ್ಣ ವಿದಾಯ ಭಾಷಣ ಮಾಡಿದರು. ಇತರೆ ಉಪಾಧ್ಯಾಯರೂ ಅವನ ಗೆಳೆಯರೂ ತುಂಬಾ ಭಾವುಕರಾದರು. ಉಪಹಾರಾನಂತರ ಎಲ್ಲರೂ ಮನೆ ಕಡೆ ನಡೆದಾಗ ಶಿವು ಮಗನನ್ನು ಹಾಸ್ಟೆಲ್ ಗೆ ಸೇರಿಸುವ ನಿರ್ಧಾರ ಮಾಡಿದ್ದು ಎಷ್ಟು ಒಳ್ಳೆಯದಾಯಿತೆಂದುಕೊಂಡ. ಮನೆಯವರೂ ಸಹ ಮನದಲ್ಲಿ ಇದನ್ನೇ ಆಲೋಚಿಸುತ್ತಿದ್ದರು. ಈಗ ಮಗನನ್ನು ಯಾವ ಊರಿನ ಕಾಲೇಜಿಗೆ ಸೇರಿಸಲಿ ತನ್ನನ್ನು ತಾನು ಕಾಪಾಡಿಕೊಳ್ಳಬಲ್ಲ. ಅನ್ಯಾಯ ಪ್ರತಿಭಟಿಸುವ ಉತ್ತಮ ಗುಣವನ್ನು ದೀಪೂ ಬೆಳೆಸಿಕೊಂಡಿದ್ದು ಹಾಸ್ಟೆಲ್ ಕಾರಣದಿಂದಲೇ ಎಂದು ಆಲೋಚಿಸದರೇ ದೀಪು ತಾನು ಇದೇ ಸಣ್ಣ ಊರಿನ ಶಾಲೆಯಲ್ಲೇ ಇದ್ದಿದ್ದರೇ ಸಾಮಾನ್ಯ ವಿದ್ಯಾರ್ಥಿಯಾಗೇ ಬದುಕು ಕಟ್ಟಿಕೊಳ್ಳಬೇಕಿತ್ತು. ಈಗ ತನ್ನ ಕನಸಿಗೆ ರೆಕ್ಕೆಗಳು ಮೂಡಿದೆ. ಅನ್ಯಾಯ ತನಗೇ ಆಗಲಿ ಬೇರೆಯವರಿಗೇ ಆಗಲಿ ಆದಾಗ ಪ್ರತಿಭಟಿಸಬೇಕೆಂದು ಕಲೆತಂತಾಯ್ತು. ನಾವು ಸಮಾಜದ ಆದರ್ಶ ವ್ಯಕ್ತಿಗಳೆಂದು ಆರಾಧಿಸುವ ವಿವೇಕಾನಂದರಂತಹವರು ಬಾಲ್ಯದಲ್ಲೇ ಅನ್ಯಾಯ ಪ್ರತಿಭಟಿಸಿ ಅಸಹಾಯಕರ ಊರುಗೋಲಾದವರು, ವಿದ್ಯಾರ್ಥಿಗಳಿಗೆ ಸದಾ ಆದರ್ಶವಾಗಿರಬೇಕು. ತಾನು ಅಇಷ್ಟದಿಂದಲೇ ಹಾಸ್ಟೆಲ್ ಸೇರಿದರೂ ಅದರಿಂದ ಒಳಿತೇ ಆಯಿತು ಎಂದು ತಂದೆಗೆ ಮನದಲ್ಲೇ ಧನ್ಯವಾದಗಳನ್ನು ದೀಪೂ ಅರ್ಪಿಸಿದ.