ಲೇಖನ
– ಡಾ. ರಾಜಶೇಖರ ನಾಗೂರ
ಉದಯರಶ್ಮಿ ದಿನಪತ್ರಿಕೆ
ಜವಾಬ್ದಾರಿ ಎನ್ನುವುದು ಚಿಕ್ಕ ಪದ ಆದರೆ ಸಾಗರರದಷ್ಟು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಜವಾಬ್ದಾರಿ ಎಲ್ಲರಿಂದ ಸಾಧ್ಯವೂ ಇಲ್ಲಾ. ಸಮಾಜವಿರಲಿ, ರಾಜಕೀಯವಿರಲಿ, ಕುಟುಂಬವಿರಲಿ, ಗುಂಪುಗಳಲ್ಲಿ ಜವಾಬ್ದಾರಿ ಹೊರುವವ ಮಾತ್ರ ನಾಯಕನಾಗಲು ಸಾಧ್ಯ.
ಜಪಾನ್ ದೇಶದಲ್ಲಿ ಸಾಗರ/ಸಮುದ್ರದ ಹಬ್ಬ ಎಂದು ಆಚರಿಸುವ ರೂಢಿ ಇದೆ. ಆ ದಿನ ಸಾಗರದ ದಡದಲ್ಲಿರುವ ಊರಿನವರು ಸಾಗರದ ಹತ್ತಿರ ಬಂದು ಸಾಗರದ ಮರಳಿನಲ್ಲಿ ಉಂಡು, ತಿಂದು, ನಲಿದು ದೇವರ ಆರಾಧನೆ ಮಾಡಿ ಮನೆಗೆ ಮರಳುವುದು.
ಜಪಾನಿನ ಸಾಗರದ ದಡವೊಂದರ ಹತ್ತಿರವಿರುವ ಎತ್ತರದ ಬೆಟ್ಟದ ಮೇಲೆ ನೂರಾರು ಮನೆಗಳಿರುವ ಊರೊಂದಿತ್ತು. ಆ ಸಾಗರದ ಹಬ್ಬವನ್ನು ಆಚರಿಸಲು ಆ ಊರಿನ ಎಲ್ಲ ಮಕ್ಕಳು, ಹಿರಿಯರು, ಕಿರಿಯರು ಆ ಬೆಟ್ಟದ ಮೇಲಿಂದ ಕೆಳಗಿಳಿದು ಹತ್ತಿರದ ಸಾಗರದ ಮರಳಿನ ಮೇಲೆ ಬಂದಿಳಿದು, ನಕ್ಕು-ನಲಿದು ಹಬ್ಬವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಆಚರಿಸತೊಡಗಿದ್ದರು. ಈ ಹಬ್ಬದ ದಿನದಂದು ಎಲ್ಲರೂ ಕೆಳಗಡೆ ಬಂದಾಗ ಆ ಊರಿನ ಮನೆಗಳನ್ನು ಕಾಯುವವರು ಯಾರು ಎಂದು ಆ ಊರಿನ ಮುದುಕನ್ನೊಬ್ಬನನ್ನು ಊರನ್ನು ಕಾಯಲು ನೇಮಿಸಿದ್ದರು. ಇವರೆಲ್ಲ ಆ ಸಾಗರದ ಹಬ್ಬವನ್ನು ಮುಗಿಸಿಕೊಂಡು ಊರಿಗೆ ಮರಳುವವರೆಗೆ ಆ ವ್ಯಕ್ತಿ ಇಡೀ ಊರನ್ನು ಕಾಯಬೇಕು. ಅದು ಅವನ ಜವಾಬ್ದಾರಿಯಾಗಿತ್ತು.
ಇಡೀ ಊರು ಆ ದಿನ ಆ ಬೆಟ್ಟದ ಕೆಳಗಡೆ ಬಂದು ಸಾಗರದ ದಡದಲ್ಲಿ ನಲಿಯುತ್ತಿದೆ. ಬೆಟ್ಟದ ಮೇಲಿನಿಂದ ಆ ಮುದುಕನೊಬ್ಬನೇ ಇವರನ್ನೆಲ್ಲ ದೂರದಿಂದ ನೋಡುತ್ತಿದ್ದಾನೆ. ಅದೇನೋ ನೋಡ ನೋಡುತ್ತಿದ್ದಂತೆ ವಾತಾವರಣವೇ ಬದಲಾಯಿತು. ಗಾಳಿ ಬೀಸಲು ಪ್ರಾರಂಭವಾಯಿತು. ಮೋಡಗಳ ಸಂಚಲನ ಬದಲಾಯಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆ ಮುದುಕ ಇದೊಂದು ಸುನಾಮಿಯ ಮುನ್ನೆಚ್ಚರಿಕೆ ಎಂದು ಖಾತ್ರಿಪಡಿಸಿಕೊಂಡ ಏಕೆಂದರೆ ಅವನು ಮುದುಕನಾದ್ದರಿಂದ ಸಾಕಷ್ಟು ಇಂತಹ ಅನುಭವಗಳನ್ನು ಅವನು ತನ್ನ ಜೀವಮಾನದಲ್ಲಿ ನೋಡಿದ್ದ. ಇನ್ನು ಕೆಲವೇ ಕ್ಷಣಗಳಲ್ಲಿ ಸುನಾಮಿ ಬಂದು ಕೆಳಗಿರುವ ಊರಿನ ಎಲ್ಲ ಜನರನ್ನು ಅಪ್ಪಳಿಸಿ ಜಲಸಮಾಧಿ ಮಾಡಿ ಬಿಡುತ್ತದೆ ಎಂಬುದು ಅವನಿಗೆ ಖಚಿತವಾಯಿತು.
ಆ ಕ್ಷಣವೇ ಊರ ಜನರನ್ನು ಎಚ್ಚರಿಸಲು ಬೆಟ್ಟದ ಮೇಲಿನಿಂದ ಜೋರಾಗಿ ಕೂಗಿಕೊಂಡ, ಅರಚಿಕೊಂಡ. ಆ ಸಾಗರದ ಅಲೆಗಳ ಅಪ್ಪಳಿಸುವಿಕೆಯ ಸದ್ದಿನಲ್ಲಿ, ಮತ್ತು ಎಲ್ಲ ಜನರ ಗಲಾಟೆಯಲ್ಲಿ, ಸುಂಯ್ ಗುಟ್ಟುತ್ತಿದ್ದ ಗಾಳಿಯ ಸದ್ದಿನಲ್ಲಿ ಜನರಿಗೆ ಕೇಳುವುದಾದರೂ ಹೇಗೆ!
ಆ ಕಡಿಮೆ ಸಮಯದಲ್ಲಿ ಆ ಮುದುಕ ಮೇಲಿನಿಂದ ಕೆಳಗೆ ಓಡಿ ಬರುವುದು ಅಸಾಧ್ಯವಿತ್ತು. ಹೀಗಾಗಿ ಅವನು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾದವು. ಅವನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಏನಾದರೂ ಮಾಡಿ ಜನರನ್ನು ಎಚ್ಚರಿಸಲೇಬೇಕೆಂದುಕೊಂಡ. ತಕ್ಷಣವೇ ಮನೆಯೊಂದಕ್ಕೆ ಬೆಂಕಿ ಇಟ್ಟ. ಆ ಬೆಂಕಿಯ ಹತ್ತಿ ಉರಿಯುತ್ತಿದ್ದಂತೆ ಕೆಳಗಿನಿಂದ ಜನರು ಅದನ್ನು ನೋಡಿದರು ಏಕೆಂದರೆ ಬೆಂಕಿ ಎಲ್ಲಿದ್ದರೂ ಜನರ ದೃಷ್ಟಿಯನ್ನು ಆಕರ್ಷಿಸುತ್ತದೆ.
ಅಯ್ಯೋ ನಮ್ಮ ಮನೆಗಳಿಗೆ ಬೆಂಕಿ ಬಿದ್ದಿದೆ, ಊರು ಸುಡುತ್ತಿದೆ ಎಂದುಕೊಂಡು ಜನರು ಗಾಬರಿಯಿಂದ ಕೆಳಗಿನ ಸಾಗರದ ದಡದಿಂದ ಓಡೋಡಿ ಮೇಲೆ ಬಂದರು. ಎಲ್ಲ ಜನರು ದಡದಿಂದ ಮೇಲೆ ಬಂದ ಕೆಲವೇ ಕ್ಷಣಗಳಲ್ಲಿ ಸಾಗರದ ಸುನಾಮಿ ಆ ದಡಕ್ಕೆ ಅಪ್ಪಳಿಸಿಬಿಟ್ಟಿತ್ತು. ಅಷ್ಟರಲ್ಲಿ ಜನರು ಸುರಕ್ಷಿತವಾಗಿ ಮೇಲೆ ತಲುಪಿದ್ದರು. ಜನರಿಗೆ ಎರಡೆರಡು ಆಘಾತ. ಈ ಕಡೆ ಸುನಾಮಿ ಆ ಕಡೆ ಬೆಂಕಿ.
ಕೊನೆಗೆ ತಮ್ಮ ಊರನ್ನು ಸೇರಿ ಹೊತ್ತಿ ಉರಿಯುತ್ತಿರುವ ಮನೆ ಹತ್ತಿರ ಜನರು ಬಂದು ನಿಂತರು. ಹೊತ್ತಿ ಉರಿಯುತ್ತಿರುವ ಮನೆ ಬೇರೆ ಯಾರದು ಆಗಿರಲಿಲ್ಲ ಆ ಊರನ್ನು ಕಾಯುತ್ತಿರುವ ಮುದುಕನದೇ ಆಗಿತ್ತು. ಈ ಜನರನ್ನು ಎಚ್ಚರಿಸಲು ತನ್ನದೇ ಮನೆಗೆ ಬೆಂಕಿ ಹಾಕಿಕೊಂಡು ಇಡೀ ಊರನ್ನು ಕಾಪಾಡಿದ ಮಹಾತ್ಮನೆಂದು ಎಲ್ಲರಿಗೂ ತಿಳಿಯಿತು. ಆ ಮುದುಕನನ್ನು ಕೊಂಡಾಡಿದರು.
ಆ ಮುದುಕ ಸುನಾಮಿ ವಿಷಯವನ್ನು ಮುಚ್ಚಿಟ್ಟುಬಿಟ್ಟಿದ್ದರೆ ಇಡೀ ಊರೇ ಅವನದಾಗುತ್ತಿತ್ತು. ಅಲ್ಲಿರುವ ಸಂಪತ್ತು ಕೂಡಾ ಅವನದೇ ಆಗಿರುತ್ತಿತ್ತು. ಕೇವಲ ಸಂಪಾತ್ತಿಗಾಗಿ ಜೊತೆ ಇರುವವರನ್ನೇ ನಡು ನೀರಲ್ಲಿ ಮುಳುಗಿಸುವ ಇಂದಿನ ಕಪಟ ಜನರಿಗೆ ಈ ಮುದುಕನ ಕಾರ್ಯ ಆದರ್ಶವಾಗಿ ಕಾಣುವುದಲ್ಲವೇ.
ಈ ಘಟನೆ ಮತ್ತು ಆ ಮುದುಕ ಜಪಾನಿನ ಇತಿಹಾಸದ ಪುಟ ಸೇರಿದರು. ಅವನನ್ನು ಗೌರವಿಸಲಾಯಿತು. ಸಾಗರದ ಹಬ್ಬ ಬಂದಾಗಲೆಲ್ಲ ವಿಶೇಷವಾಗಿ ಆ ಊರು ಇಂದಿಗೂ ಅವನನ್ನು ನೆನೆದು ಪೂಜಿಸುತ್ತಿರಬಹುದು.
ಒಂದು ದೇಶಕ್ಕಾಗಿ, ಒಂದು ಊರಿಗಾಗಿ, ಒಂದು ಮನೆಗಾಗಿ, ಒಂದು ಭಾಷೆಗಾಗಿ, ಒಂದು ಸಂಸ್ಥೆಗಾಗಿ, ಒಂದು ಮುಖಪುಟದ ಸಾಹಿತ್ಯಕ ಗ್ರೂಪಿಗಾಗಿ ಹೀಗೇ ತನ್ನತನವನ್ನು ಲೆಕ್ಕಿಸದೆ, ತನ್ನ ಸ್ವಾರ್ಥವನ್ನು ಬದಿಗಿಟ್ಟು, ತಮ್ಮ ಸ್ವಂತದ್ದನ್ನು ತ್ಯಾಗ ಮಾಡುವ ವ್ಯಕ್ತಿ ಗೌರವಕ್ಕೆ ಪಾತ್ರರಾಗುತ್ತಾನೆ, ನಾಯಕ ಎನಿಸಿಕೊಳ್ಳುತ್ತಾನೆ. ಆದರೆ ತನ್ನದೇ ಸ್ವಾರ್ಥಕ್ಕಾಗಿ ಇಡೀ ಕುಟುಂಬವನ್ನು ಬೀಳಿಸುವವ, ಇಡೀ ಗ್ರೂಪ್ ನ್ನು ಹಾಳು ಮಾಡುವವ, ಇಡೀ ಸಮಾಜದಲ್ಲಿ ಗುಲ್ಲೆಬ್ಬಿಸುವವ ನಾಯಕನಾಗಲಾರ.
ಒಮ್ಮೆ ಜವಾಬ್ದಾರಿ ಹೊತ್ತು ನಿಂತರೆ ತನ್ನ ಕೊನೆಯ ವರೆಗೂ ತನ್ನವರಿಗೆ, ತನ್ನ ವೇದಿಕೆಗೆ, ತನ್ನ ಮನೆಗೆ, ತನ್ನ ಸಮಾಜಕ್ಕೆ ನಿಷ್ಠೆಯಿಂದಿರುವವ ಮಾತ್ರ ಗೌರವಕ್ಕೆ ಭಾಜನನಾಗುತ್ತಾನೆ.
ಇಂದಿನ ಸೈಬರ್ ಯುಗದಲ್ಲಿ ಇನ್ನೊಬ್ಬರನ್ನು ಹಾಳುಗೆಡವಿಯಾದರೂ ನಾವು ಬೆಳೆಯೋಣ ಎನ್ನುವ ಸ್ವಾರ್ಥದಲ್ಲಿ ಮುಳಗಿದ ಜನರಿಗೆ ಇದೊಂದು ಪ್ರೇರಣೆಯ ನೀತಿ ಪಾಠವೆನಿಸುವುದು. ಇದು ಮನೆಯ ಅಣ್ಣ ತಮ್ಮಂದಿರಿಂದ ಹಿಡಿದು, ಜೊತೆ ಇರುವ ಸಹಪಾಠಿಗಳವರೆಗೂ, ಸಹೋದ್ಯೋಗಿಗಳವರೆಗೂ ಅನ್ವಯವಾಗಬೇಕಾದ ಪರಮ ಸತ್ಯವಿದು.
ಅದಕ್ಕಾಗಿಯೇ ಹೇಳಿದ್ದು ನಿಯತ್ತನ್ನು, ಜವಾಬ್ದಾರಿಯನ್ನು ಅಗ್ಗದ ಜನರಿಂದ ಅಪೇಕ್ಷಿಸಲು ಸಾಧ್ಯವಿಲ್ಲ.
ಇನ್ನೊಬ್ಬರನ್ನು ಮೇಲೆತ್ತದಿದ್ದರೂ ಸರಿಯೇ, ಇನ್ನೊಬ್ಬರನ್ನು ಕೆಳಗೆ ಬೀಳಿಸುವ ಗುಂಪಿಗೆ ಸೇರದಿರೋಣ..