ಶಾಸಕ ನಡಹಳ್ಳಿಯವರಿಂದ ಮತದಾರರಿಗೆ ಆಮಿಷ | ಸಿ.ಎಸ್.ನಾಡಗೌಡ ಆರೋಪ
ಮುದ್ದೇಬಿಹಾಳ: ಬಿಜೆಪಿ ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಭ್ರಷ್ಟಾಚಾರ, ಅನೈತಿಕ, ದ್ವೇಷದ ರಾಜಕಾರಣ ನಡೆಸುವ ಮೂಲಕ ಮತಕ್ಷೇತ್ರದ ಜನರನ್ನು ದುಡ್ಡುಕೊಟ್ಟು ಕೊಂಡುಕೊಳ್ಳುತ್ತೇನೆ ಎಂಬ ಆಲೋಚನೆಯಲ್ಲಿದ್ದಾರೆ. ಚುನಾವಣಾ ಅಕ್ರಮಗಳು ಪೊಲೀಸರ ಕಣ್ಣೆದುರಿಗೇ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಹಿಳಾ ಸಂಘಗಳ (ಎಂಬಿಕೆ) ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಚುನಾವಣಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಸತ್ಯಾಗ್ರಹ ನಡೆಸುವದಾಗಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಎಚ್ಚರಿಸಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳೆದ ೩೫ ವರ್ಷಗಳ ಆಡಳಿತದಲ್ಲಿ ಬಿಜೆಪಿಯಂತಹ ಭ್ರಷ್ಟಾಚಾರ, ದುರಾಡಳಿತವನ್ನು ನಾನೆಂದೂ ಕಂಡಿರಲಿಲ್ಲ. ದೇಶಮುಖರಾಗಲಿ ಅಥವಾ ನಾನಾಗಲಿ ಯಾವತ್ತಿಗೂ ಸ್ವಚ್ಛ ರಾಜಕಾರಣ ಮಾಡುತ್ತಲೇ ಬಂದಿದ್ದೇವೆ. ಸಧ್ಯ ಮತಕ್ಷೇತ್ರದಲ್ಲಿ ನಡಹಳ್ಳಿಯವರು ವ್ಯಾಪಕ ಭ್ರಷ್ಟಾಚಾರದಿಂದ ತಾವು ಗಳಿಕೆ ಮಾಡಿದ ಹಣದಲ್ಲಿ ಒಂದು ಭಾಗದ ಹಣವನ್ನು ಮತಕ್ಷೇತ್ರದ ಜನರಿಗೆ ಹಣ-ಹೆಂಡದ ಆಮಿಷಗಳನ್ನು ನೀಡಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮತಕ್ಷೇತ್ರದ ಎಲ್ಲೆಡೆ ಅಕ್ರಮಗಳು, ನೀತಿ ಸಂಹಿತೆ ಉಲ್ಲಂಘನೆಗಳು ನಡೆಯುತ್ತಲೇ ಇವೆ. ಆದರೆ ಚುನಾವಣಾ ಅಧಿಕಾರಿಗಳಾಗಲಿ ಅಥವಾ ಪೋಲಿಸ್ ಇಲಾಖೆಯಾಗಲಿ ಅದನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋಲುತ್ತೇನೆ ಎಂಬ ಭಯದಲ್ಲಿ ಪೋಲಿಸ್ ಇಲಾಖೆ, ಐಟಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ಈ ಭಾಗದ ಬಹುತೇಕ ಗಣ್ಯ ಉದ್ಯಮಿಗಳಲ್ಲಿ, ವ್ಯಾಪಾರಸ್ಥರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಸಧ್ಯ ತಾಲೂಕಿನಲ್ಲಿನ ರೈತರಿಗೆ ಆಶ್ರಯವಾಗಿರುವ ಬಾಲಾಜಿ ಶುಗರ್ಸ್ ಮೇಲೆ ಐಟಿ ದಾಳಿ ನಡೆಸುವಂತಹ ಕೀಳು ಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮತಕ್ಷೇತ್ರದಲ್ಲಿ ಪೋಲಿಸ್ ವಾಹನದ ಮೂಲಕವೇ ಮತದಾರರಿಗೆ ಹಣ ಸೇರಿದಂತೆ ಇತರೆ ವಸ್ತುಗಳನ್ನು ಹಂಚುವ ಮೂಲಕ ಪೋಲಿಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾರಣ ಚುನಾವಣಾ ಅಧಿಕಾರಿಗಳು ಮತಕ್ಷೇತ್ರದಲ್ಲಿ ಹದ್ದಿನ ಕಣ್ಣಿಡಬೇಕು. ಜತೆಗೆ ಒಂದು ಪಕ್ಷದ ಅಥವಾ ವ್ಯಕ್ತಿಯ ಪರವಾಗಿ ಕರ್ತವ್ಯ ನಿರ್ವಹಿಸದೇ ತಪ್ಪು ಯಾರೇ ಮಾಡಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರೊಡಗೂಡಿ ತಹಶೀಲ್ದಾರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ನಾಡಗೌಡ ಎಚ್ಚರಿಕೆ ನೀಡಿದರು.
ಈ ವೇಳೆ ಮುಖಂಡರಾದ ಸಿ.ಬಿ.ಅಸ್ಕಿ ಹಾಗೂ ಶಾಂತಗೌಡ ಪಾಟೀಲ(ನಡಹಳ್ಳಿ)ಯವರು ಮಾತನಾಡಿ, ಐಟಿ ಮಾತ್ರವಲ್ಲದೆ ಎಲ್ಲ ದಾಳಿಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಈ ಬಾರಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಡಗೌಡರನ್ನು ಗೆಲ್ಲಿಸಲು ಜನರು ತೀರ್ಮಾನಿಸಿದ್ದಾರೆ ಎಂದರು.
ಈ ವೇಳೆ ಗೋವಾ ಕನ್ನಡಿಗರ ಹೋರಾಟ ಸಮೀತಿಯ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ನ್ಯಾಯವಾದಿಗಳಾದ ಎಸ್.ಎಸ್.ಮಾಲಗತ್ತಿ, ಎಂ.ಎಚ್.ಹಾಲಣ್ಣವರ, ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಬಿ.ಕೆ.ಬಿರಾದಾರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಬಾಪೂರಾವ್ ದೇಸಾಯಿ, ಬಹದ್ದೂರ ರಾಠೋಡ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಸ್ಥಾಯಿ ಸಮೀತಿ ಅಧ್ಯಕ್ಷ ಶಿವು ಶಿವಪುರೆ, ಮಲ್ಲಿಕಾರ್ಜುನ ನಾಡಗೌಡ, ಕಾಶೀಮ ಪಟೇಲ, ರಾಯನಗೌಡ ತಾತರಡ್ಡಿ ಸೇರಿದಂತೆ ಹಲವರು ಇದ್ದರು.