ಬಸವನಬಾಗೇವಾಡಿ: ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರಾಮಹೋತ್ಸವ ಹಾಗೂ ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಬಸವಾದಿ ಪ್ರಮಥರ ವಚನ ಚಿಂತನ ಪ್ರವಚನ ಕಾರ್ಯಕ್ರಮದ ಸದುಪಯೋಗವನ್ನು ಜನತೆ ಪಡೆದುಕೊಂಡು ಬಸವಾದಿ ಪ್ರಮಥರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ಸಾಗಿಸಬೇಕೆಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಹೇಳಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಅಂತರಾಷ್ಟ್ರೀಯ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಸೋಮವಾರ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ಹಾಗೂ ಶ್ರಾವಣ ಮಾಸದಂಗವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬಸವಾದಿ ಪ್ರಮಥರ ವಚನ ಚಿಂತನ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ೧೨ ನೇ ಶತಮಾನದ ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ನಮಗೆ ನೀಡಿದ್ದಾರೆ. ವಚನಗಳಲ್ಲಿರುವ ಈ ಮೌಲ್ಯಗಳನ್ನು ನಾವೆಲ್ಲರೂ ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.
ಪ್ರವಚನಕಾರ ಬಳೂಟಗಿಯ ಶಿವಕುಮಾರ ಸ್ವಾಮೀಜಿ ಮಾತನಾಡಿ,ಹನ್ನೆರಡು ಮಾಸದಲ್ಲಿ ಶ್ರಾವಣ ಮಾಸ ಪಾವಿತ್ರ್ಯತೆಯಿಂದ ಕೂಡಿದೆ. ಈ ಮಾಸದಲ್ಲಿ ನಾವು ಆಧ್ಯಾತ್ಮಿಕ ವಿಚಾರಗಳನ್ನು ಶ್ರವಣ ಮಾಡುವದರಿಂದ ಜೀವನ ಪಾವನವಾಗುವದರಲ್ಲಿ ಸಂದೇಹವಿಲ್ಲ. ನಮ್ಮ ಅಂತರಾತ್ಮದಲ್ಲಿ ಅಡಗಿರುವ ಭಗವಂತನನ್ನು ಕಾಣಬೇಕಾದರೆ ಆಧ್ಯಾತ್ಮಿಕ ವಿಚಾರಗಳು, ಶರಣರ ಜೀವನ ದರ್ಶನ, ವಚನಗಳು ದಾರಿದೀಪವಾಗುವ ಮೂಲಕ ನಮ್ಮ ಬದುಕಿಗೆ ಬೆಳಕು ನೀಡುತ್ತವೆ. ಬಸವಾದಿ ಶರಣ ಜೀವನ-ವಿಚಾರಧಾರೆಗಳು ಸಾರ್ವಕಾಲಿಕವಾಗಿವೆ. ನಾವು ನಿತ್ಯ ವಚನ ಸಾಹಿತ್ಯ ಓದಿದರೆ ಮನಸ್ಸು ಪ್ರಪುಲ್ಲಿತವಾಗುತ್ತದೆ. ನಮ್ಮ ಬದುಕು ದೇವಾಲಯವಿದ್ದಂತೆ. ಈ ದೇವಾಲಯಕ್ಕೆ ವಚನಗಳು ಮಾರ್ಗದರ್ಶಿವಿದ್ದಂತೆ. ವಚನ ಸಾಹಿತ್ಯವು ನಾಡಿನ ಶ್ರೇಷ್ಠ ಬೆಳಕಾಗಿದೆ. ಈ ಬೆಳಕಿನಲ್ಲಿ ನಾವು ನಡೆದರೆ ಆತ್ಮವಿಶ್ವಾಸದ ಬದುಕನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ. ಒಂದು ತಿಂಗಳ ಕಾಲ ಪ್ರತಿನಿತ್ಯ ಸಂಜೆ ೬.೩೦ ಗಂಟೆಯಿಂದ ೮ ಗಂಟೆಯವರಿಗೆ ನಾವು ಬಸವಾದಿ ಪ್ರಮಥರ ವಚನ ಚಿಂತನ ಮಾಡೋಣ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನರು ಸರಿಯಾದ ಸಮಯಕ್ಕೆ ಬರುವ ಮೂಲಕ ಈ ವಚನ ಚಿಂತನ ಪ್ರವಚನವನ್ನು ಆಲಿಸುವ ಮೂಲಕ ಬಸವಾದಿ ಶರಣರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸ, ಜಾತ್ರೆಯಂಗವಾಗಿ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಪ್ರತಿವರ್ಷ ನಾಡಿನ ಶ್ರೇಷ್ಠ ಪ್ರವಚನಕಾರರಿಂದ ಒಂದು ತಿಂಗಳ ಕಾಲ ಪ್ರವಚನ ನಡೆಯುತ್ತಾ ಬಂದಿದೆ. ಈ ವರ್ಷದ ಪ್ರವಚನವನ್ನು ಎಲ್ಲರೂ ಆಲಿಸುವ ಮೂಲಕ ಯಶಸ್ವಿಗೊಳಿಸಬೇಕು. ಈಗಾಗಲೇ ಸರ್ಕಾರ ಬಸವಜನ್ಮ ಸ್ಥಳ ಅಭಿವೃದ್ಧಿಗಾಗಿ ಪ್ರತ್ಯೇಕ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಘೋಷಣೆ ಮಾಡಿದೆ. ಇದುವರೆಗೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಮತಕ್ಷೇತ್ರದ ಶಾಸಕ,ಸಚಿವ ಶಿವಾನಂದ ಪಾಟೀಲ ಸೇರಿದಂತೆ ಎಲ್ಲ ಮುಖಂಡರು ಶೀಘ್ರವೇ ಪ್ರತ್ಯೇಕ ಮಂಡಳಿಯು ಅಸ್ತಿತ್ವಕ್ಕೆ ಬಂದು ಕಾರ್ಯನಿರ್ವಹಿಸುವಂತೆ ಸರ್ಕಾರದ ಗಮನಕ್ಕೆ ತರುವಂತೆ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬಸವಾದಿ ಪ್ರಮಥರ ವಚನದ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಈ ವರ್ಷ ಬಳೂಟಗಿಯ ಶಿವಕುಮಾರ ಸ್ವಾಮೀಜಿಗಳನ್ನು ಪ್ರವಚನಕ್ಕೆ ಆಹ್ವಾನ ನೀಡಲಾಗಿದೆ. ಪ್ರತಿನಿತ್ಯ ಪ್ರವಚನ ಆಲಿಸುವ ಮೂಲಕ ಜನರು ವಚನ ಸಾರ ಅರಿತುಕೊಂಡು ಜೀವನ ಪಾವನ ಮಾಡಿಕೊಳ್ಳಬೇಕು. ಐತಿಹಾಸಿಕ ಬಸವೇಶ್ವರ ಜಾತ್ರಾಮಹೋತ್ಸವ ಆಗಷ್ಟ್ ೨೬ ರಿಂದ ಐದು ದಿನಗಳ ಕಾಲ ಜರುಗಲಿದೆ. ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ, ವಿವಿಧ ಕಸರತ್ತಿನ ಪ್ರದರ್ಶನ, ಸಾಂಸ್ಕ್ರತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿವೆ. ಈ ವರ್ಷ ಆಗಷ್ಟ್ ೨೯,೩೦ ರಂದು ಎರಡು ದಿನಗಳ ಕಾಲ ಕೃಷಿ ಇಲಾಖೆಯ ಸಹಯೋಗದಲ್ಲಿ ಕೃಷಿ ಮೇಳ ಆಯೋಜನೆ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ರೈತಬಾಂಧವರು ಪಡೆದುಕೊಳ್ಳಬೇಕು. ಜಾತ್ರೆಯು ಅದ್ದೂರಿಯಾಗಿ ಜರುಗಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.
ಯುವಮುಖಂಡ ಸಂಗಮೇಶ ಓಲೇಕಾರ ಮಾತನಾಡಿದರು. ನೇತೃತ್ವವನ್ನು ಶಿವಾನಂದ ಈರಕಾರ ಮುತ್ಯಾ ವಹಿಸಿದ್ದರು. ವೇದಿಕೆಯಲ್ಲಿ ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಟಿಎಪಿಸಿಎಂಸ್ ಅಧ್ಯಕ್ಷ ಶೇಖರಗೌಡ ಪಾಟೀಲ, ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷ ಭರತ ಅಗರವಾಲ, ಹಿರಿಯ ಸಾಹಿತಿ ಲ.ರು.ಗೊಳಸಂಗಿ, ನಿವೃತ್ತ ಪ್ರಾಚಾರ್ಯ ಸುರೇಶಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ರವಿ ರಾಠೋಡ, ಮುಖಂಡರಾದ ಸಂಗಣ್ಣ ಕಲ್ಲೂರ,ಸಂಕನಗೌಡ ಪಾಟೀಲ, ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಉಪಾಧ್ಯಕ್ಷರಾದ ಸಂಗಯ್ಯ ಒಡೆಯರ, ಪ್ರವೀಣ ಪೂಜಾರಿ, ಬಸವರಾಜ ಅಳ್ಳಗಿ, ಮುತ್ತು ಪತ್ತಾರ, ಪ್ರಧಾನ ಕಾರ್ಯದರ್ಶಿ ಬಾಬು ನಿಡಗುಂದಿ ಇತರರು ಇದ್ದರು. ಸೇವಾ ಸಮಿತಿಯ ಸದಸ್ಯ ಎಂ.ಜಿ.ಆದಿಗೊಂಡ ಪ್ರವಚನಕಾರನ್ನು ಪರಿಚಯಿಸಿದರು. ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು. ಜಾತ್ರಾಮಹೋತ್ಸವ ಸಮಿತಿ ಖಜಾಂಚಿ ಎಂ.ಬಿ.ತೋಟದ ಸ್ವಾಗತಿಸಿದರು. ಶಿಕ್ಷಕರಾದ ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

