ಸುರಗಂಗೆ ಸುರಿದ್ಹಂಗೆಗೆ ನನ್ನವಳ ನಗುವು|
ಕೋಲ್ಮಿಂಚು ಹೊಳೆದಂಗೆ ಬಾನಗಲವೂ||
ಗೋಧೂಳಿ ಸಮಯದಾ ಕೆಂಧೂಳಿನಾ ಕೆಂಪು|
ಮೊಗವೆತ್ತಿ ತನ್ಮಯದಿ ನಾ ರಮಿಸಲು||
ಕಂಪಿಸುವ ಅಧರಗಳು ಬಿರಿದ ಕುಸುಮದ ದಳವು|
ಭೂಮಿ ತೂಕದ ಹೆಣ್ಣು ಪಾರಿಜಾತೆ||
||ಸುರಗಂಗೆ||
ತಿದ್ದಿ ತೀಡಿಹ ಹುಬ್ಬು ಬಣ್ಣಿಸಲಿ ನಾನೆಂತು|
ಮನ್ಮಥನು ಹಿಡಿದಿರುವ ಇಂದ್ರಚಾಪ||
ವೈದೇಹಿ ಗುಣದವಳ ವಾರಿಧಿಯ ಮನದವಳ|
ಕೈಹಿಡಿದ ನನಗಿನ್ನು ಇಲ್ಲ ತಾಪ||
||ಸುರಗಂಗೆ||
ಕರುವ ಕೊರಳಿನ ಗೆಜ್ಜೆ ಅವಳ ಕಾಲಿನ ಗೆಜ್ಜೆ|
ನನ್ನೆದೆಯು ಮುದಗೊಂಡು ಘಲ್ಲೆನುವುದು||
ಮನವು ಒಲವಿನ ಇಳೆ ಕೈತುಂಬ ಹಸಿರು ಬಳೆ |
ಸೋತ ಬದುಕಲಿ ಎದ್ದು ಗೆಲ್ಲೆನುವುದು||
||ಸುರಗಂಗೆ||