“ಉದ್ಯೋಗo ಪುರುಷ ಲಕ್ಷಣಂ” ಎಂಬ ಮಾತು ಇತ್ತು.
ಉದ್ಯೋಗ ಅನ್ನುವುದು ಪುರುಷರಿಗಾಗಿ ಅನ್ನುವ ಒಂದು ಕಾಲವಿತ್ತು. “ಗೃಹಿಣಿ ಗೃಹಮುಚ್ಯತೆ” ಎಂದು ಹೆಣ್ಣು ಮನೆ ಒಳಗೆ , ಪುರುಷರು ಹೊರಗೆ ದುಡಿದು ತರೋದು,
ಹೆಣ್ಣು ಅಡುಗೆ ಮನೆಗೆ ಸೀಮಿತವಾಗಿ, ಮಕ್ಕಳನ್ನು ಹೆರುವ ಯಂತ್ರವಾಗಿ, ಅವರನ್ನು ಸಾಕುವುದರಲ್ಲೆ ಜೀವನ ಕಳೆದು ಹೋಗುತ್ತಾ ಇತ್ತು.
ಆದರೆ, ಆಗಿನ ಕಾಲದಲ್ಲಿ, ಕೂಡ, ರೈತ ಮಹಿಳೆಯರು, ಹೊಲದಲ್ಲಿ ದುಡಿಯುವುದು, ಮನೆ ಗೆಲಸಕ್ಕೆ ಹೋಗುವುದು ಕೂಡ ಇತ್ತು. ಕಾರಣ ಆರ್ಥಿಕವಾಗಿ ಹಿಂದುಳಿತ. ಆಗಲೂ, ಇಬ್ಬರೂ , ದುಡಿಯುತ್ತಾ ಇದ್ದರು. ಸಂಸಾರದ ನೊಗ ಹೊರಲು. ಜೊತೆಗೆ, ಎಷ್ಟೋ ಹೆಣ್ಣುಮಕ್ಕಳು, ಕೂಡ, ಗಂಡನನ್ನು ಕಳೆದುಕೊಂಡವರು, ಅಡುಗೆ ಕೆಲಸಕ್ಕೆ ಹೋಗುವುದು, ಹಪ್ಪಳ ಸಂಡಿಗೆ,ಉಪ್ಪಿನಕಾಯಿ, ಪುಡಿಗಳನ್ನು, ಮನೆಯಲ್ಲೇ ಮಾಡಿ, ಮಾರಾಟ ಮಾಡುತ್ತಾ ಸಂಸಾರ ಸಾಗಿಸುತ್ತ ಇದ್ದರು. ಆಗೆಲ್ಲ ಎರಡನೇ ಮದುವೆಗೆ ಅವಕಾಶ ಕೂಡ ಇರಲಿಲ್ಲ. ಅಪ್ಪ ಅಮ್ಮ ಎರಡು ಆಗಿ ಮಕ್ಕಳನ್ನು ಸಾಕಿ ಬೆಳೆಸಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆಯೇ ಇದೆ.ಆಗಲೂ ಕೆಲವು ಮನೆಗಳಲ್ಲಿ ಹೆಣ್ಣು ಮಗುವನ್ನು ಓದಿಸಿ ಕೆಲಸಕ್ಕೆ ಕಳುಹಿಸಿದ ಉದಾಹರಣೆ ಇದೆ.
ಕ್ರಮೇಣ, ನಗರ ಪ್ರದೇಶದಲ್ಲಿ, ಒಬ್ಬರ ದುಡಿತ, ಸಂಸಾರ ತೂಗಿಸಲು, ಸಾಕಾಗದೆ, ಇಬ್ಬರು ಹೊರಗೆ ಹೋಗಿ ದುಡಿಯುವ ಕಾಲ ಬಂತು.ಉದ್ಯೋಗ ಅನ್ನುವುದು ಪುರುಷ ಮತ್ತು ಸ್ತ್ರೀ ಇಬ್ಬರ ಪಾಲಿಗೂ ಅನಿವಾರ್ಯ
ಅನ್ನುವುದು ಮನದಟ್ಟಾಯ್ತು.ಗಂಡಸಿಗೆ ಸರಿಸಮವಾಗಿ, ವಿದ್ಯಾಭ್ಯಾಸ ಮಾಡಿದ ಹೆಣ್ಣುಮಕ್ಕಳು, ಅವರಿಗೆ ಸರಿಸಮಾನವಾಗಿ ಉದ್ಯೋಗದಲ್ಲಿ ತೊಡಗಿಸಿಕೊಂಡು, ಸಮಾನತೆಯ ಹಕ್ಕು ಸಾಧಿಸಿದ್ದಾರೆ.
ಯಾವುದೇ ಕ್ಷೇತ್ರ ತೆಗೆದುಕೊಂಡರು ಕೂಡ ,ಈಗ ಅವಳ ಪಾಲು ಇದೆ.
ಈಗ ಹುಡುಗನಿಗೆ ಮದುವೆಗೆ ಹುಡುಗಿ ಬೇಕು ಎಂದರೆ, ಹುಡುಗಿ ಕೆಲಸಕ್ಕೆ ಹೋಗಬೇಕು, ಕೈತುಂಬ ಸಂಬಳ ತರಬೇಕು ಎನ್ನವ ನಿಯಮವೇ ಆಗಿದೆ. ಇಬ್ಬರ ಸಂಬಳ ಸೇರಿದರೆ, ಒಳ್ಳೆಯ ಐಷಾರಾಮಿ ಜೀವನ ಮಾಡಬಹುದು.
ಹಾಗಾಗಿ ಆರ್ಥಿಕವಾದ ಸುಭದ್ರತೆ, ಇಬ್ಬರು ದುಡಿಯುವುದು ಅನಿವಾರ್ಯ ಕೂಡ ಆಗಿದೆ. ಮೊದಲಿನಂತೆ, ಹೆಣ್ಣು ಹೆರುವ ಯಂತ್ರವಾಗಿ ಉಳಿಯದೆ, ಮನೆಗೆ ಆಧಾರಸ್ತಂಭವಾಗಿ
“ಉದ್ಯೋಗo ಸ್ತ್ರೀ ಲಕ್ಷಣಂ” ಎನ್ನುವಷ್ಟು ಮಾರ್ಪಾಡು ಆಗಿದೆ.
ಮಹಿಳೆ ಅಂದು, ಇಂದು ,ಎಂದು ಉದ್ಯೋಗ ಮಾಡುತ್ತಲೇ ಇದ್ದಾಳೆ. ಮೊದಲು ಮನೆಯಲ್ಲಿ, ಸಂಬಳವೂ ಇಲ್ಲದೆ, ರಜೆಯು ಇಲ್ಲದೆ, ಕೆಲಸ ಮಾಡುತ್ತಾ ಇದ್ದವಳು, ಒಂದು ರೀತಿ ನಾಲ್ಕು ಗೋಡೆಯ ಮಧ್ಯೆ, ಶೋಷಿತ ಮಹಿಳೆಯಾಗಿಯೆ ಉಳಿದಿದ್ದ, ಅವಳು ಇಂದು, ಒಳಗೂ ಹೊರಗೂ ದುಡಿದು, ಕೈ ತುಂಬಾ ಸಂಪಾದನೆ ಮಾಡುತ್ತಾ, ಆರ್ಥಿಕ ಸಬಲತೆಯಿಂದ, ಶೋಷಿತ ಮಹಿಳೆಯಾಗಿ ಉಳಿಯದೆ , ಧ್ವನಿ ಎತ್ತಿ ನಿಂತಿದ್ದಾಳೆ. ಹೆಣ್ಣಿಗೆ ಆರ್ಥಿಕ ಸಮಾನತೆ , ಸಾಮಾಜಿಕ ಕಳಕಳಿ ಎರಡು ಇರಬೇಕು.
ನನ್ನ ಸೋದರತ್ತೆ ಬಾಲ ವಿಧವೆ ಆಗಿ, ನಂತರ ಅವರಿವರ ಮನೆ ಅಡುಗೆ ಮಾಡುತ್ತಾ, ಇದ್ದದ್ದು ಇಲ್ಲಿ ಸ್ಮರಿಸಬಹುದು. ಅವಳು ದುಡಿದ ಹಣವನ್ನು, ಬಡವರ ಹೆಣ್ಣು ಮಕ್ಕಳ ಮದುವೆಗೆ ಕೊಡುತ್ತಾ ಇದ್ದಳು. ಹಾಗೆ ಮತ್ತೂಬ್ಬ ಮಹಿಳೆ ಬಾಲ ವಿಧವೆ ಆಗಿ, ನಂತರ ಓದಿ ಡಾಕ್ಟರ್ ಆಗಿ, ಎರಡು ಹೆಣ್ಣುಮಕ್ಕಳನ್ನು ದತ್ತು ಪಡೆದು ಸಾಕಿದ್ದು ನೋಡಿದ್ದೆ. ಹೆಣ್ಣು ಎಂದು ಛಲವಾದಿ. ಕಷ್ಟ ಅಂತ ಕೈಕಟ್ಟಿ ಕೂರುವುದಿಲ್ಲ, ಯಾವುದೋ ಒಂದು ಕೆಲಸ ಮಾಡಿ, ಗಂಡು, ಹೆಣ್ಣು ಎರಡು
ಪಾತ್ರವನ್ನು, ಒಬ್ಬಳೇ ನಿಭಾಯಿಸುವ ಸಾಮರ್ಥ್ಯ ಇರುವವಳು. ಅವಳೆಂದೂ ಉದ್ಯೋಗಸ್ಥ ಮಹಿಳೆಯೆ.
ಅವಳ ಕೆಲಸಕ್ಕೆ ನಿವೃತ್ತಿ ಅನ್ನುವುದೇ ಇಲ್ಲ.