ಪ್ರಧಾನಿ ಮೋದಿ ಹೇಳಿಕೆ | “ಆರ್‌ಬಿಐ ಉದ್ಯೋಗದ ಕುರಿತು ಪ್ರಕಟಿಸಿದ ವಿಸ್ತೃತ ವರದಿ | ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
ಮುಂಬೈ: ಆರ್‌ಬಿಐ ವರದಿಯ ಪ್ರಕಾರ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಎಂಟು ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಮುಂಬೈನ ಗೋರೆಗಾಂವ್ ಉಪನಗರದಲ್ಲಿ ನಡೆದ ಸಮಾರಂಭದಲ್ಲಿ ರಸ್ತೆ, ರೈಲ್ವೆ ಮತ್ತು ಬಂದರು ವಲಯಗಳಲ್ಲಿ 29,000 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, “ಆರ್‌ಬಿಐ ಇತ್ತೀಚೆಗೆ ಉದ್ಯೋಗದ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿದೆ. ಆ ವರದಿಯ ಪ್ರಕಾರ, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಸುಮಾರು ಎಂಟು ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಈ ಅಂಕಿ ಅಂಶಗಳು ಉದ್ಯೋಗಗಳ ಬಗ್ಗೆ ಸುಳ್ಳು ಮಾಹಿತಿ ಹರಡುವವರ ಬಾಯಿ ಮುಚ್ಚಿಸಿದೆ ಎಂದರು.
ಉದ್ಯೋಗದ ಬಗ್ಗೆ ಸುಳ್ಳು ಮಾಹಿತಿ ಹರಡುವವರು ಹೂಡಿಕೆ, ಮೂಲಸೌಕರ್ಯ ಮತ್ತು ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಾರೆ. ಈಗ ಅವರ ಬುದ್ಧಿ ಬಯಲಾಗಿದೆ. ದೇಶದ ನಾಗರಿಕರು ಅವರ ಪಿತೂರಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕೌಶಲಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಅಗತ್ಯವಿದ್ದು, ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಸರ್ಕಾರದ ಮೂರನೇ ಅವಧಿಯನ್ನು ಸಣ್ಣ ಮತ್ತು ದೊಡ್ಡ ಹೂಡಿಕೆದಾರರು ಅತ್ಯಂತ ಉತ್ಸಾಹದಿಂದ ಸ್ವಾಗತಿಸಿದ್ದಾರೆ. “ಮಹಾರಾಷ್ಟ್ರವನ್ನು ವಿಶ್ವದ ದೊಡ್ಡ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡುವುದು ಮತ್ತು ಮುಂಬೈಯನ್ನು ಜಾಗತಿಕ ಫಿನ್‌ಟೆಕ್ ರಾಜಧಾನಿಯನ್ನಾಗಿ ಮಾಡುವುದು ನನ್ನ ಗುರಿ” ಎಂದು ಪ್ರಧಾನಿ ತಿಳಿಸಿದರು.

