ಆಲಮಟ್ಟಿ: 3500 ಕ್ಯುಸೆಕ್ಸ್ ಹೊರಹರಿವು :ವಿದ್ಯುತ್ ಉತ್ಪಾದನೆ ಆರಂಭ
ಆಲಮಟ್ಟಿ: ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಗುರುವಾರ ಮಧ್ಯಾಹ್ನದಿಂದ 3500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಈ ನೀರನ್ನು ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.
ಕಳೆದ ಕೆಲ ತಿಂಗಳಿಂದ ಹೊರಹರಿವು ಸ್ಥಗಿತವಾಗಿದ್ದರಿಂದ ವಿದ್ಯುತ್ ಉತ್ಪಾದನಾ ಘಟಕ ಬಂದಾಗಿತ್ತು.
ಗುರುವಾರ 55 ಮೆಗಾವಾಟ್ ಸಾಮರ್ಥ್ದದ ಒಂದು ಘಟಕ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ 25 ಮೆಗಾವಾಟ್ ವಿದ್ಯುತ್ ಉತ್ಪಾದನೆ ಯಾಗುತ್ತಿದೆ.
ಗುರುವಾರ 69,482 ಕ್ಯುಸೆಕ್ ಇದ್ದ ಒಳಹರಿವು ಸಂಜೆ ವೇಳೆಗೆ ಕಡಿಮೆಯಾಗಿದೆ. ನಾರಾಯಣಪುರ ಜಲಾಶಯ ಭರ್ತಿಗಾಗಿ ಇಲ್ಲಿಂದ ನೀರು ಬಿಡಲಾಗುತ್ತಿದೆ.
ಸದ್ಯ ಆಲಮಟ್ಟಿ ಜಲಾಶಯದಲ್ಲಿ 84 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಮುಂಜಾಗ್ರತೆಯ ಕ್ರಮವಾಗಿ ಜಲಾಶಯ ಭರ್ತಿಗೂ ಮುನ್ನವೇ ಆಲಮಟ್ಟಿ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಈಗಿರುವ 3500 ಕ್ಯುಸೆಕ್ ಹೊರಹರಿವನ್ನು ಸದ್ಯಕ್ಕೆ ಹೆಚ್ಚಿಗೆ ಮಾಡುವುದಿಲ್ಲ ಎಂದು ಪ್ರಭಾರಿ ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಪಾಟೀಲ ತಿಳಿಸಿದರು.
ಆಲಮಟ್ಟಿ ಜಲಾಶಯದ ಮುಂಭಾಗ ಹಾಗೂ ನಾರಾಯಣಪುರ ಜಲಾಶಯದ ಹಿಂಭಾಗದಲ್ಲಿನ ಕೃಷ್ಣಾ ನದಿ ಹಿನ್ನೀರಿನಲ್ಲಿ ಮತ್ತೆ ಜೀವ ಕಳೆ ಬಂದಿದೆ.

