ಹಿಂದಿನ ಬಜೆಟ್‌ನಲ್ಲಿ ಈಗಾಗಲೇ ಅನುಮೋದನೆ | 20 ಹೋಬಳಿಗಳಲ್ಲಿ ಈ ವರ್ಷವೇ ವಸತಿ ಶಾಲೆ ಆರಂಭ | ಸಿಎಂ ಸಿದ್ದರಾಮಯ್ಯ ಸ್ಪಷ್ಠನೆ
ಬೆಂಗಳೂರು: ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಪ್ರತಿ ಹೋಬಳಿಗೂ ಕಡ್ಡಾಯವಾಗಿ ವಸತಿ ಶಾಲೆಗಳನ್ನು ನೀಡಲಾಗುವುದು ಎಂದು ಘೋಷಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಆಯೋಜಿಸಿದ್ದ ಎಸ್‌ಸಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಹಿಂದಿನ ಬಜೆಟ್‌ನಲ್ಲಿ ಈಗಾಗಲೇ ಅನುಮೋದನೆ ದೊರೆತಿದ್ದು, 20 ಹೋಬಳಿಗಳಲ್ಲಿ ಈ ವರ್ಷ ವಸತಿ ಶಾಲೆಗಳನ್ನು ಆರಂಭಿಸಲಾಗುವುದು. ಹಂತ ಹಂತವಾಗಿ ರಾಜ್ಯದ ಎಲ್ಲ ಹೋಬಳಿಗಳಲ್ಲಿ ವಸತಿ ಶಾಲೆಗಳು ಬರಲಿವೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಅವರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಡಿ 833, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 113 ವಸತಿ ಶಾಲೆಗಳಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಯತ್ನ ಮತ್ತು ಕಾಳಜಿಯಿಂದ ರಾಜ್ಯಾದ್ಯಂತ ಮೊರಾರ್ಜಿ ದೇಸಾಯಿ ಶಾಲೆಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳು ತೆರೆದಿದ್ದು, ದಲಿತ, ಹಿಂದುಳಿದ ಮತ್ತು ಬುಡಕಟ್ಟು ಕುಟುಂಬಗಳ ಮಕ್ಕಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಸಂಸ್ಥೆಗಳು ಸಹಾಯ ಮಾಡುತ್ತಿವೆ ಎಂದರು.”
– ಡಾ. ಎಚ್‌ಸಿ ಮಹದೇವಪ್ಪ
ಸಮಾಜ ಕಲ್ಯಾಣ ಸಚಿವರು

