ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ನಷ್ಟಗೊಂಡ ರೈತರು | ೧೨ ವರ್ಷ ಕಳೆದರೂ ಬಾರದ ಪರಿಹಾರಹಣ
ವಿಜಯಪುರ: ಜಿಲ್ಲೆಯಲ್ಲಿ ನಡೆಯುತ್ತಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ನಷ್ಟಗೊಂಡ ರೈತರಿಗೆ ಭೂಸ್ವಾಧೀನದ ಹಣ ಹಾಗೂ ಹೆಚ್ಚುವರಿ ಕೊರ್ಟ ಮೂಲಕ ಆದೇಶವಾದ ಪರಿಹಾರದ ಹಣ ಇಲ್ಲಿವರೆಗೆ ನೀಡದೇ ನ್ಯಾಯಾಂಗ ನಿಂದನೆ ಮಾಡುವುದಲ್ಲದೇ, ನ್ಯಾಯಾಂಗಕ್ಕೂ ಅನ್ಯಾಯಮಾಡಿ ರೈತರಿಗೂ ಮೊಸ ಮಾಡುತ್ತಿರುವ ನೀರಾವರಿ ಇಲಾಖೆಯವರು ಕೂಡಲೇ ನಷ್ಟಗೊಂಡ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಾಗಲಕೋಟದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕ ರಮೇಶ ಕಳಸದ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆಯಲ್ಲಿ ಸುಮಾರು ೨೦೧೨ ರಿಂಧ ಚಿಮ್ಮಲಗಿ ಏತ ನೀರಾವರಿ ಯೋಜನೆ ಕಳೆದ ೧೨ ವರ್ಷಗಳಿಂದ ನಡೆಯುತ್ತಿದ್ದು, ರೈತರ ಜಮೀನುಗಳಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುಂಚೆಯೇ ರೈತರಿಗೆ ಭೂಸ್ವಾಧೀನದ ನೋಟಿಸ್‌ಗಳನ್ನು ನೀಡಿ ಪರಿಹಾರ ನೀಡಿದ ನಂತರ ಕಾಮಗಾರಿ ಪ್ರಾರಂಭಿಸಬೇಕು ಎನ್ನುವ ನಿಯಮಾವಳಿಗಳಿದ್ದರೂ ಅವುಗಳನ್ನು ಗಾಳಿಗೆ ತೂರಿ ಈಗ ರೈತರನ್ನು ನಿಮ್ಮ ಇಲಾಖೆಗೆ ಹಾಗೂ ಕೋರ್ಟಿನೆಡೆ ಅಲೆದಾಡುವಂತೆ ಮಾಡಿದ್ದಿರಿ,
ಕಾಮಗಾರಿ ಮುಗಿಸಲು ಇರುವ ಕಾಲಮಿತಿ ಮುಗಿದರೂ ಇಲ್ಲಿಯವರೆಗೆ ಕಾಮಗಾರಿ ಮುಗಿದಿಲ್ಲ, ರೈತರು ಕೇಳಿದರೆ ಹಾರಿಕೆ ಉತ್ತರಕ್ಕೆ ಏನೂ ಕಡಿಮೆ ಇಲ್ಲ, ಇದನ್ನು ಕಳಪೆ ಆಗದಂತೆ ಹಾಗೂ ಗುಣಮಟ್ಟವನ್ನು ಕಾಪಾಡಬೇಕಿದ್ದ ಅಧಿಕಾರಿಗಳು ಕಣ್ಣುಮುಚ್ಚಿ ಗುತ್ತಿಗೆದಾರರ ಪರ ನಿಲ್ಲುತ್ತಿರುವುದು ಕಂಡುಬರುತ್ತಿದೆ, ಒಟ್ಟಾರೆಯಾಗಿ ರೈತರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತವಾದ ಸಂಚು ನಿಮ್ಮ ಇಲಾಖೆಯಿಂದ ನಡೆಯುತ್ತಿದೆ,
ಈ ಕೂಡಲೇ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ನಷ್ಟಗೊಂಡ ಎಲ್ಲಾ ರೈತರಿಗೂ ೧೫ ದಿನಗಳ ಒಳಗೆ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಮುಂದಿನ ಹೋರಾಟಕ್ಕೆ ನೀವೇ ಜವಾಬ್ದಾರರು, ಒಂದು ವೇಳೆ ತಡವಾಗಿದ್ದೆ ಆದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಷ್ಟಗೊಂಡ ಎಲ್ಲಾ ರೈತರೊಂದಿಗೆ ನಿಮ್ಮ ಇಲಾಖೆಗೆ ಬೀಗ ಜಡಿದು ಪರಿಹಾರ ನೀಡುವವರೆಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚಿçಸಿದರು.
ಈ ವೇಳೆ ರಮೇಶ ಕಳಸದ ಅವರು ಮನವಿ ಸ್ವೀಕರಿಸಿ ಮಾತನಾಡುತ್ತಾ, ಸರಕಾರಕ್ಕೆ ಈಗಾಗಲೇ ಪರಿಹಾರದ ಅನುದಾನ ಕುರಿತು ಪ್ರಸ್ಥಾವನೆ ಕಳಿಸಲಾಗಿದೆ, ಮೇಲಿನಿಂದ ಅನುದಾನ ಬಂದ ತಕ್ಷಣ ಎಲ್ಲಾ ಪಲಾನುಭವಿ ರೈತರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ತಾಳಿಕೋಟಿ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಹಾಗೂ ಕಲಕೇರಿ ಹೋಬಳಿ ಅಧ್ಯಕ್ಷ ಮಹಿಬೂಬ ಬಾಷಾ ಮನಗೂಳಿ ಸೇರಿದಂತೆ ಇತರರು ಇದ್ದರು.

