Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಿ :ಬಿಇಓ ತಳವಾರ

ಸಾಮಾಜಿಕ ಸಾಮರಸ್ಯ ಮೂಡಿಸುವ ಭಗವದ್ಗೀತಾ :ಹೆಗಡೆ

ವಕೀಲಿಕೆಯು ಪಕ್ಷಗಾರರಿಗೆ ನ್ಯಾಯ ಕೊಡಿಸೊ ಕಾರ್ಯಗೈವ ಏಕೈಕ ವೃತ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು( ಹೆಣ್ಣು ಮಕ್ಕಳಿಗೊಂದು ಪತ್ರ )
ವಿಶೇಷ ಲೇಖನ

ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು( ಹೆಣ್ಣು ಮಕ್ಕಳಿಗೊಂದು ಪತ್ರ )

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

ಪ್ರೀತಿಯ ಮಗಳೇ,
ಅರೆ! ನೆನ್ನೆ ತಾನೆ ನನ್ನನ್ನು ಕಳಿಸಲು ಬಂದ ಅಮ್ಮ ಇಷ್ಟು ಬೇಗ ಪತ್ರ ಬರೆಯಲು ಕಾರಣವೇನು? ಎಂದು ಗಾಬರಿಯಾಗಬೇಡ.. ತಾಯಿ ಹೃದಯದ ಅಳಲು ನಿನಗಿನ್ನೂ ಗೊತ್ತಿಲ್ಲ. ನನ್ನ ಮನದಲ್ಲಿ ಹುದುಗಿಸಿರುವ ಪ್ರೀತಿ, ಮಮತೆ, ಅಕ್ಕರೆ, ಭಯ, ಆತಂಕಗಳ ಕುರಿತು ಇಲ್ಲಿ ಬರೆದಿರುವೆ. ಹಾಗೆಂದು ಇದು ನನ್ನೊಬ್ಬಳ ಅಳಲು ಅಲ್ಲ. ನನ್ನಂತೆ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬೇರೆ ಊರುಗಳಲ್ಲಿ ಓದಲು, ನೌಕರಿ ಮಾಡಲು ಕಳುಹಿಸಿರುವ ಲಕ್ಷಾಂತರ ತಾಯಂದಿರ ಮನದ ಮಾತು.

ನಮ್ಮ ಮನೆಯಂಗಳದಲ್ಲಿ ಚಂದದ ಪ್ರಾಕು ಧರಿಸಿ,ಎರಡು ಪುಟ್ಟ ಜುಟ್ಟು ಹಾಕಿಕೊಂಡು, ಮುಖಕ್ಕೆ ಪೌಡರ್ ಸವರಿ, ಹಣೆಗೆ ಕಾಡಿಗೆಯ ಬೊಟ್ಟುಇಟ್ಟು ಕಾಲಿನ ಗೆಜ್ಜೆಯ ಸದ್ದು ಮಾಡುತ್ತಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯೆಲ್ಲ ನಡೆಯುತ್ತಿದ್ದ, ಅರಳು ಹುರಿದಂತೆ ಮುದ್ದಾಗಿ ಬಾಯಿ ತುಂಬಾ ಮಾತನಾಡುತ್ತಿದ್ದ ಪುಟ್ಟ ಕಂದ ನೀನು, ಇಂದು ಕಾಲೇಜಿಗೆ ಹೋಗುವಷ್ಟು ದೊಡ್ಡವಳಾಗಿರುವೆ. ಅತ್ಯುತ್ತಮ ಅಂಕ ಗಳಿಸಿ ಒಳ್ಳೆಯ ಕಾಲೇಜಿನಲ್ಲಿ ಸೀಟು ಗಿಟ್ಟಿಸಿ ಉನ್ನತ ಶಿಕ್ಷಣ ಪಡೆಯುವ ಆಸೆಯಲ್ಲಿ ನಾವು ಮನೆಯವರನ್ನೆಲ್ಲಾ ತೊರೆದು ಹಾಸ್ಟೆಲಿನಲ್ಲಿ ವಾಸವಾಗಲು ಹೋಗುತ್ತಿರುವೆ.
ತುಸುವೇ ಸಂಭ್ರಮ ನಮ್ಮೆಲ್ಲರಲ್ಲಿ ಮನೆ ಮಾಡಿದ್ದರೂ ಹೆಚ್ಚು ಆತಂಕ ಮನದಲ್ಲಿ ಇದೆ. ಕಾಣದ ಊರು, ಅರಿಯದ ಜನ, ಬದಲಾದ ವಾತಾವರಣ ಇದೆಲ್ಲಕ್ಕೂ ನೀನು ಅದು ಹೇಗೋ ಹೊಂದಿಕೊಂಡು ಬಿಡುವೆ ಎಂಬ ಭರವಸೆ ನನಗಿದೆ… ಆದರೆ ನನ್ನ ಭಯ ಅದಲ್ಲ, ಅದರ ಅರಿವಾಗಲು ನೀನು ನಾನಲ್ಲ.
‘ ಅಯ್ಯೋ ಅಮ್ಮ! ಮತ್ತದೇ ರಾಗ ಆಡಬೇಡ ನೀನು’ ಎಂಬ ನಿನ್ನ ಗದರಿಕೆಯ ನಡುವೆಯೂ ಮನ ಆತಂಕದ ಗೂಡಾಗಿದೆ. ನಿನ್ನನ್ನು ಕಳಿಸಲು ಬಂದಾಗ ಹೇಳದ ಮಾತುಗಳನು ಬರೆಯಲೇಬೇಕಾದ, ಬರೆದು ತಿಳಿಸಲೇಬೇಕಾದ ಅನಿವಾರ್ಯತೆ ನನ್ನದು.

ನಮ್ಮ ಮನೆಯ ಪ್ರೀತಿಯ ಕೂಸು ನೀನು.. ಅಜ್ಜ ಅಜ್ಜಿಯ ಚಿನ್ನುವಾಗಿ, ಅಪ್ಪನ ಮುದ್ದಿನ ಮಗಳಾಗಿ, ಅಕ್ಕ-ಅಣ್ಣಂದಿರ ನೆಚ್ಚಿನ ತಂಗಿಯಾಗಿ ನನ್ನ ಕಣ್ಮಣಿಯಾಗಿ ಸುರಕ್ಷಿತವಾದ ಗುಬ್ಬಚ್ಚಿ ಗೂಡಿನಂತಹ ಸಂಸಾರದಲ್ಲಿ ಬೆಳೆದಿರುವ ನಿನಗೆ ಹೊರಗಿನ ನಿಷ್ಕುರ ಪ್ರಪಂಚದ ಅರಿವಿಲ್ಲ. ಹಾಗೆಂದು ಇಡೀ ಜಗತ್ತೇ ಕೆಟ್ಟದು ಎಂದಲ್ಲ. ನನಗೆ ಎಲ್ಲವೂ ಗೊತ್ತಿದೆ ಎಂಬ ಹದಿಹರೆಯದ ಹುಮ್ಮಸ್ಸು, ಸುಣ್ಣದ ತಿಳಿ ನೀರನ್ನು ಕೂಡ ಹಾಲೆಂದು ನಂಬುವ ನಿನ್ನ ಬೋಳೆ ಸ್ವಭಾವ, ಸ್ನೇಹಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂಬ ಸ್ಲೋಗನ್ಗಳು, ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಧ್ಯೇಯ ವಾಕ್ಯಗಳು
ಜೀವನ ಇರೋದೇ ಎಂಜಾಯ್ ಮಾಡೋಕೆ, ಈ ಹದಿಹರೆಯದ ವಯಸ್ಸು ಮತ್ತೆ ಬರುತ್ತಾ ಎಂಬ ಮಾತುಗಳು ಹೆಚ್ಚು ರುಚಿಸುವ ಸಮಯ ಇದು.

ಯಾವುದೂ ತಪ್ಪಲ್ಲ ನಿಜ….. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿದ್ದಾಗ ಮಾತ್ರ. ಜೀವನದಲ್ಲಿ ಎಂಜಾಯ್ಮೆಂಟ್ ಇರಬೇಕೆ ಹೊರತು ಎಂಜಾಯ್ಮೆಂಟ್ ಒಂದೇ ಜೀವನದ ಮುಖ್ಯ ಉದ್ದೇಶ ಅಲ್ಲ. ನಮ್ಮ ಬದುಕನ್ನು ವ್ಯವಸ್ಥಿತವಾಗಿ ನಡೆಸಲು ಬೇಕಾಗುವ ವಿದ್ಯೆ, ಆರ್ಥಿಕ ಸ್ವಾವಲಂಬನೆಯನ್ನು ಕೊಡುವ ನೌಕರಿ, ಸಾಮಾಜಿಕ ವಲಯದಲ್ಲಿ ನಿನ್ನದೇ ಆದ ಒಂದು ಒಳ್ಳೆಯ ಗುರುತಿಸುವಿಕೆ ಇವು ಉನ್ನತ ಶಿಕ್ಷಣದ ಮುಖ್ಯ ಧ್ಯೇಯಗಳು.

ಈಗಾಗಲೇ ಬದುಕಿನಲ್ಲಿ ಒಂದು ಮಹತ್ತರ ಘಟ್ಟವನ್ನು ತಲುಪಿರುವ ಸೋದರ ಸಂಬಂಧಿಗಳು ನಾವಂತೂ ಎಂಜಾಯ್ ಮಾಡಲಿಲ್ಲ ನೀವಾದರೂ ಮಾಡಿ ಎಂದು ಲಘುವಾಗಿ ನಿಮಗೆ ಹೇಳಿರುವುದನ್ನು ನೀನು ಗಂಭೀರವಾಗಿ ತೆಗೆದುಕೊಳ್ಳಬೇಡ…. ಓಟದ ನಡುವೆ ಅಲ್ಲೊಂದು ಇಲ್ಲೊಂದು ಅಡೆತಡೆಗಳು ಇದ್ದರೆ ತೊಂದರೆ ಇಲ್ಲ, ಆದರೆ ಆಡೆ ತಡೆಗಳನ್ನೇ ದಾಟುತ್ತ ಮುಂದೆ ಸಾಗುವ ಹೊತ್ತಿಗೆ ನಿನ್ನ ಸಮಯ ವ್ಯರ್ಥವಾಗಬಹುದು, ನಿನ್ನ ಗುರಿ ನಿನ್ನ ಕೈತಪ್ಪಿ ಹೋಗಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ.

ನಿನ್ನ ಕಾಲೇಜಿನಲ್ಲಿ, ಹಾಸ್ಟೆಲ್ ನಲ್ಲಿ ಎಲ್ಲರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದು ಆದರೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳುವುದು ಬೇಡ. ಸದಾ ಒಂದು ಅಂತರವನ್ನು ಕಾಯ್ದುಕೋ. ಕಹಿ ಎನಿಸಿದರೂ ಜೀವನದ ಸತ್ಯ ಇದುವೇ. ಕೆಲ ಸ್ನೇಹ ಸಂಬಂಧಗಳು ಜೊತೆಗಿರುವವರೆಗೆ ಮಾತ್ರ.. ಒಂದೇ ಊರಿನವರಾದರೆ ಆಗಾಗ ಪರಸ್ಪರ ಭೇಟಿಯಾಗಿ ಕಷ್ಟ ಸುಖವನ್ನಾದರೂ ಹಂಚಿಕೊಳ್ಳುತ್ತಾರೆ, ಆದರೆ ದೂರದಲ್ಲಿರುವ ಸ್ನೇಹಿತರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗುತ್ತಾರೆ ಎಂಬುದನ್ನು ನೀನೇ ನೋಡುತ್ತಿರುವೆಯಲ್ಲ. ಹಾಗೆಂದು ಆ ಸ್ನೇಹದ ಕುರಿತು ತಿರಸ್ಕಾರ ಬೇಡ, ಒಳ್ಳೆಯ ಸ್ನೇಹಗಳು ಒಂದು ಮಧುರ ಅನುಭೂತಿಯಂತೆ ನಿನ್ನೊಂದಿಗೆ ಉಳಿದು ಹೋಗಬೇಕು ನಿಜ.. ದುಸ್ವಪ್ನಗಳಂತಲ್ಲ.

ಜೀವಿತದ ಕೊನೆಯವರೆಗೂ ನಮ್ಮ ಜೊತೆಗೆ ಬರುವುದು ನಮ್ಮ ಅಪ್ಪ, ಅಮ್ಮ, ಅಣ್ಣ-ತಮ್ಮ, ಅಕ್ಕ- ತಂಗಿ ಮುಂತಾದ ರಕ್ತ ಸಂಬಂಧಗಳು ಮಾತ್ರ. ನಮ್ಮ ಕಷ್ಟ ಸುಖಕ್ಕೆ ನೋವು ನಲಿವಿಗೆ ಜೊತೆಯಾಗುವವರು ನಮ್ಮವರೇ. ಕೆಲ ಸ್ನೇಹಗಳು ಇದಕ್ಕೆ ಅಪವಾದ ಇರಬಹುದು.

ನೀನು ಮನೆಯವರನ್ನೆಲ್ಲಾ ಬಿಟ್ಟು ಓದಲು ಹೋಗಿರುವ ಮುಖ್ಯ ಉದ್ದೇಶವನ್ನು ಸದಾ ನೆನಪಿನಲ್ಲಿಡು. ಓದು ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ಊಟದಲ್ಲಿ ಉಪ್ಪಿನಕಾಯಿ ಇರುವಂತೆ ತಮಾಷೆ, ಜೋಕುಗಳು, ಕಾಲೆಳೆಯುವುದು ಹಿತಮಿತವಾಗಿರಲಿ…. ಆದರೆ ಅದುವೇ ಮುಖ್ಯವಾಗದಿರಲಿ.

ಹಾಸ್ಟೆಲ್ ನಲ್ಲಿ ಕೊಡುವ ಆಹಾರಕ್ಕೆ ನಿನ್ನನ್ನು ನೀನು ಒಗ್ಗಿಸಿಕೊಳ್ಳುವುದನ್ನು ರೂಢಿ ಮಾಡಿಕೋ. ಬೇಕು ಬೇಕೆಂದಾಗ ಊಟ ಮಾಡಲು ಆಗುವುದಿಲ್ಲ. ಆದ್ದರಿಂದ ನಿಗದಿತ ಸಮಯದಲ್ಲಿ ಆಹಾರ ಸೇವಿಸು. ಅಲ್ಲಿ ಕೊಡುವ ಹಸಿ ತರಕಾರಿ ಸೊಪ್ಪುಗಳನ್ನು, ಹಣ್ಣುಗಳನ್ನು ಸೇವಿಸು. ಸಾಧ್ಯವಾದಷ್ಟು ಹೊರಗಿನ ಆಹಾರವನ್ನು ಅವಾಯ್ಡ್ ಮಾಡು. ಹಾಸ್ಟೆಲ್ನ ನಿಯಮಾವಳಿಗಳನ್ನು ಎಂದೂ ಮೀರದಿರು. ಅತಿಯಾಗಿ ರುಚಿಯ ಕಡೆ ಗಮನ ಕೊಡದೆ ಹಿತಮಿತವಾದ ಆಹಾರವನ್ನು ಸೇವಿಸು.

ಖರ್ಚಿನ ವಿಷಯದಲ್ಲಿ ಸ್ವಲ್ಪ ಹುಷಾರಾಗಿರು. ಯಾವುದೇ ಕಾರಣಕ್ಕೂ ಹಣದ ದುರ್ಬಳಕೆ ಬೇಡ. ಅದೆಷ್ಟೇ ಒಳ್ಳೆಯ ಸ್ನೇಹಿತರಾಗಿದ್ದರೂ ಕೂಡ ಯಾರೊಂದಿಗೂ ನಿನ್ನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಎಟಿಎಂನ ಪಾಸ್ವರ್ಡ್ ಅನ್ನು ಹಂಚಿಕೊಳ್ಳಬೇಡ.

ನೀನು ಓದುತ್ತಿರುವೆಡೆಯಲ್ಲಾಗಲಿ, ವಾಸಿಸುತ್ತಿರುವ ಸ್ಥಳದಲ್ಲಾಗಲಿ ಪ್ರತಿ ಬಾರಿಯೂ ನಿನ್ನ ಮಾತೇ ನಡೆಯಬೇಕು ಎಂಬ ಹಟ ಬೇಡ. ಬೇರೆಯವರ ಮಾತಿಗೂ ಬೆಲೆ ಕೊಡು. ಬಹಳಷ್ಟು ಸಲ ನಿಮ್ಮ ಹಾಸ್ಟೆಲ್ ವಾರ್ಡನ್ ಗಳು ನಿಮಗೆ ಹೇಳುವ ಮಾತುಗಳು ಒರಟೆನಿಸಬಹುದು, ಬೇಧ ತೋರುತ್ತಾರೆ ಎಂದು ಕೂಡ ಅನಿಸಬಹುದು…. ಆದರೆ ಅವರು ಕೂಡ ನಿಮ್ಮ ಒಳಿತಿಗಾಗಿ ಮತ್ತು ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿರುವವರು. ನಿಮ್ಮ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರು ಎಂಬುದು ಸದಾ ನೆನಪಿರಲಿ.

ಇನ್ನು ಮುಖ್ಯವಾಗಿ ನಮ್ಮ ಬದುಕಿನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಹೇಗೆ ಒಂದರ ನಂತರ ಒಂದು ಕ್ರಮವಾಗಿ ಬರುತ್ತವೆಯೋ ಹಾಗೆಯೇ ವಿದ್ಯಾರ್ಥಿ ಜೀವನ, ಉದ್ಯೋಗ, ಸಂಗಾತಿ ಮತ್ತು ವಿವಾಹಗಳು ಕೂಡ ಅದೇ ಕ್ರಮದಲ್ಲಿ ಬರಬೇಕು. ಇದರಲ್ಲಿ ಮಧ್ಯದ ಎರಡು ವಿಷಯಗಳು ಹಿಂದು ಮುಂದಾದರೆ ಉಳಿದ ಎರಡು ವಿಷಯಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಆಗುವುದಿಲ್ಲ. ಆದ್ದರಿಂದ ಈಗ ಓದುವ ವಯಸ್ಸಿನಲ್ಲಿ ಕೇವಲ ನಿನ್ನ ಓದಿನೆಡೆ ಮಾತ್ರ ನಿನ್ನ ಗಮನವಿರಲಿ. ಹರೆಯದ ಆಕರ್ಷಣೆಗೆ ಒಳಗಾಗಿ ವಿರುದ್ಧ ಲಿಂಗಿಯ ಜೊತೆಗಿನ ಸ್ನೇಹಕ್ಕೆ ಪ್ರೀತಿ ಪ್ರೇಮದ ಬಣ್ಣ ಹಚ್ಚುವುದು ಬೇಡ. ನಿನ್ನ ತಂದೆ ತಾಯಿಯರಿಗೂ ನಿನ್ನ ಸ್ನೇಹಿತರನ್ನು ಪರಿಚಯಿಸಿ ಧೈರ್ಯವಾಗಿ ಮಾತನಾಡಬಲ್ಲಷ್ಟು ನಿಷ್ಕಲ್ಮಶ ಸ್ನೇಹವನ್ನು ಹೊಂದಿದ್ದರೆ ಸಾಕು.

ನಮ್ಮ ಹಿರಿಯರು ಇದ್ದಂತೆ ನಾವಿಲ್ಲ ನಿಜ, ಆದರೆ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗಿದ್ದೆ ಇದೆ. ಆಧುನಿಕತೆಯ ಸೋಗಿಗೆ ಬಿದ್ದು ನಿನ್ನದಲ್ಲದ ಉಡುಗೆ ತೊಡುಗೆಗಳನ್ನು ಧರಿಸಬೇಡ.ಯಾವ ಉಡುಗೆಯಲ್ಲಿ ನೀನು ಅತ್ಯಂತ ಆರಾಮದಾಯಕವಾಗಿಯೂ ಆತ್ಮವಿಶ್ವಾಸದಿಂದಲೂ ಇರುವೆಯೋ ಅಂತಹ ಉಡುಗೆಯನ್ನೇ ಧರಿಸು. ನೆನಪಿಡು…ನಿನ್ನ ಸಭ್ಯ ಉಡುಗೆಯ ಮೂಲಕ ನೀನು ನಿನ್ನ ಕೌಟುಂಬಿಕ ಸಂಸ್ಕಾರವನ್ನು ಪ್ರತಿನಿಧಿಸುವೆ.

ಮತ್ತೊಂದು ವಿಷಯ ಹೇಳಿದರೆ ನಿನಗೆ ಬೇಸರವಾಗಬಹುದು… ಇತ್ತೀಚೆಗೆ ಕೇಳಿ ಬರುತ್ತಿರುವ ಹೆಣ್ಣು ಮಕ್ಕಳ ಮೇಲಿನ ಬರ್ಬರ ಕೃತ್ಯಗಳು ಹೆತ್ತವರನ್ನು ಆತಂಕಕ್ಕೆ ಈಡು ಮಾಡಿವೆ. ಕ್ಷಣಿಕ ಆಕರ್ಷಣೆ ಬದುಕನ್ನು ನಾಶ ಮಾಡಬಹುದು. ಅದೆಷ್ಟೇ ಕಾಲ ಮುಂದುವರೆದರೂ ಹೆಣ್ಣುಮಕ್ಕಳು ಬಾಳೆ ಎಲೆಯಂತೆ.ಬಾಳೆ ಎಲೆಯ ಮೇಲೆ ಮುಳ್ಳು ಬಿದ್ದರೂ ಮುಳ್ಳಿನ ಮೇಲೆ ಬಾಳೆ ಎಲೆ ಬಿದ್ದರೂ ಹರಿಯುವುದು ಬಾಳೆ ಎಲೆಯೇ … ಅಂತೆಯೇ ಹೆಣ್ಣು ತಾನಾಗಿ ಮತ್ತೊಬ್ಬರ ಆಕರ್ಷಣೆಗೆ ಒಳಗಾದರೂ ಮತ್ತೊಬ್ಬರು ಆಕೆಯ ಆಕರ್ಷಣೆಗೆ ಒಳಪಟ್ಟರೂ ಅಪಾಯ ಹೆಣ್ಣಿಗೆ ಎಂಬುದನ್ನು ಎಂದೂ ಮರೆಯಬೇಡ. ಒಂದು ತಪ್ಪು ಹೆಜ್ಜೆ ಜೀವನವಿಡೀ ಪಶ್ಚಾತಾಪಕ್ಕೆ ದಾರಿ ಮಾಡಿಕೊಡುವುದು ಬೇಡ ಎಂಬ ಎಚ್ಚರ ನಿನಗಿದ್ದರೆ ಸಾಕು.

ಬದುಕಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು… ಕಳೆದ ಒಂದುವರೆ ತಿಂಗಳಿನಲ್ಲಿ ನಡೆದ ಹೆಣ್ಣು ಮಕ್ಕಳ ಸಾಲು ಸಾಲು ಹತ್ಯೆಗಳನ್ನು ನೋಡಿ ಮನಸ್ಸಿಗೆ ಅನ್ನಿಸಿದ್ದು ಹೀಗೆ. ನಾವು ಕೇವಲ ಹೆಣ್ಣು ಮಕ್ಕಳನ್ನು ನಮ್ಮ ಹಕ್ಕು ಎಂದು ಭಾವಿಸುವ ಅಸಹಿಷ್ಣು ಗಂಡು ಜನಾಂಗವನ್ನು ಹುಟ್ಟು ಹಾಕಿದ್ದು ಪ್ರಸ್ತುತ ಅದರ ಫಲವನ್ನು ಉಣ್ಣುತ್ತಿದ್ದೇವೆ. ಆದರೆ ಇದಕ್ಕೆ ಬಲಿಯಾಗಿರುತ್ತಿರುವುದು ಪಾಪದ ಹೆಣ್ಣು ಮಕ್ಕಳು. ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಗುಂಗಿಗೆ ಬಿದ್ದು, ತಂದೆ ತಾಯಿ ಬುದ್ಧಿ ಹೇಳಿದಾಗ ವಿದ್ಯಾರ್ಥಿ ದೆಸೆಯಲ್ಲಿ ತಾನು ತಪ್ಪು ಮಾಡುತ್ತಿರುವೆ ಎಂಬ ಅರಿವು ಉಂಟಾಗಿ ಪ್ರೀತಿಯಿಂದ ಹಿಂದೆ ಸರಿದ ತಪ್ಪಿಗೆ ಒಂದೊಮ್ಮೆ ತನ್ನನ್ನು ಪ್ರೀತಿಸಿದ ಹುಡುಗನೇ ತನ್ನನ್ನು ಕೊಚ್ಚಿ ಕೊಂದರೆ ಆಕೆಯನ್ನು ಇಷ್ಟು ವರ್ಷಗಳ ಕಾಲ ಲಾಲಿಸಿ ಪಾಲಿಸಿದ ತಂದೆ ತಾಯಿಗಳ ಪಾಡೇನು? ಎಂದು ನೆನೆದಾಗ ಮೈಯಲ್ಲಿ ನಡುಕ ಉಂಟಾಗುತ್ತದೆ. ನಿಮ್ಮ ಬದುಕು ಕೇವಲ ನಿಮ್ಮದಲ್ಲ. ನಿಮ್ಮ ಬದುಕಿನ ಆಗುಹೋಗುಗಳ ಸುತ್ತ ನಿಮ್ಮ ಕುಟುಂಬ ಮತ್ತು ಸಮಾಜ ನಿಮ್ಮೊಂದಿಗೆ ಜೋಡಿಸಲ್ಪಟ್ಟಿ ರುತ್ತದೆ. ಆದ್ದರಿಂದ ನಿನ್ನ ಹುಷಾರಿನಲ್ಲಿ ನೀನಿರು ಎಂದು ಮಾತ್ರ ಹೇಳುತ್ತೇನೆ. ಸಮಾಜಕ್ಕೆ ಒಳ್ಳೆಯ ಉದಾಹರಣೆಯಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟ ಉದಾಹರಣೆಯಾಗಬಾರದು ಎಂಬ ಅರಿವಿನ ಪ್ರಜ್ಞೆ ನಿನ್ನಲ್ಲಿ ಸದಾ ಜಾಗೃತವಾಗಿರಲಿ.

ಅಷ್ಟಾಗಿಯೂ ನಿನಗೆ ಏನೇ ತೊಂದರೆಯಾದರೂ ಮುಕ್ತವಾಗಿ ಹೇಳಿಕೋ…. ಒಂದು ಸುಳ್ಳನ್ನು ಮುಚ್ಚಲು ನೂರಾರು ಸುಳ್ಳುಗಳನ್ನು ಹೇಳುವುದರ ಬದಲು ಒಂದು ಸತ್ಯವನ್ನು ಹೇಳಿ ಬೈಸಿಕೊಂಡರೂ ಪರವಾಗಿಲ್ಲ ಮನಸ್ಸು ನಿರಾಳವಾಗಿರುತ್ತದೆ ಎಂಬುದನ್ನು ಅರಿತುಕೋ.
ಬದುಕಿನ ಯಾವುದೇ ಹಂತದಲ್ಲಿಯಾದರೂ ನಮ್ಮ ತೋಳುಗಳ ಆಸರೆ ನಿನಗೆ ಇದ್ದೇ ಇರುತ್ತದೆ… ಆದರೆ ಆ ತೋಳುಗಳಲ್ಲಿ ಕಸುವು ತುಂಬುವ ಕೆಲಸ ಮಾತ್ರ ನಿನ್ನದು. ಅದು ನಿನ್ನ ನಡತೆಯಲ್ಲಿ, ವಿದ್ಯಾಭ್ಯಾಸದಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಸದಾ ಇರಲೇಬೇಕು.

ನಿನ್ನ ಕುರಿತಾಗಿ ನನ್ನ ಆಸೆ ಆಕಾಂಕ್ಷೆಗಳಿಗೆ ಮಿತಿ ಇಲ್ಲ,ಭಯ ಆತಂಕಗಳು ನಿರಾಧಾರವಾದುದು ಎಂದು ನಿನಗೆ ಅನಿಸಿದರೆ ಅದು ನಿನ್ನ ತಪ್ಪಲ್ಲ. ನನ್ನಂತೆ ನೀನೂ ಕೂಡ ತಾಯಾಗಿ ನಿನ್ನ ಮಕ್ಕಳನ್ನು ಬೆಳೆಸುವಾಗ ನಿನಗೆ ಇದರ ಅನುಭವ ಖಂಡಿತವಾಗಿಯೂ ಆಗುತ್ತದೆ. ಪತ್ರ ತುಸು ದೊಡ್ಡದಾಯಿತು ಆದರೆ ಓದದೆ ಇರಬೇಡ. ನಿನ್ನ ಹಿತದಲ್ಲಿಯೇ ನಮ್ಮ ಕುಟುಂಬದ ಒಳಿತಿದೆ.
ಇಂತಿ ನಿನ್ನನ್ನು ಸದಾ ಪ್ರೀತಿಸುವ
ನಿನ್ನ ಅಮ್ಮ

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಿ :ಬಿಇಓ ತಳವಾರ

ಸಾಮಾಜಿಕ ಸಾಮರಸ್ಯ ಮೂಡಿಸುವ ಭಗವದ್ಗೀತಾ :ಹೆಗಡೆ

ವಕೀಲಿಕೆಯು ಪಕ್ಷಗಾರರಿಗೆ ನ್ಯಾಯ ಕೊಡಿಸೊ ಕಾರ್ಯಗೈವ ಏಕೈಕ ವೃತ್ತಿ

ಮಾನವೀಯತೆಯ ಗ್ರಂಥಾಲಯದಂತಿದ್ದ ಅಟಲ್ ಜೀ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಿ :ಬಿಇಓ ತಳವಾರ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ಸಾಮರಸ್ಯ ಮೂಡಿಸುವ ಭಗವದ್ಗೀತಾ :ಹೆಗಡೆ
    In (ರಾಜ್ಯ ) ಜಿಲ್ಲೆ
  • ವಕೀಲಿಕೆಯು ಪಕ್ಷಗಾರರಿಗೆ ನ್ಯಾಯ ಕೊಡಿಸೊ ಕಾರ್ಯಗೈವ ಏಕೈಕ ವೃತ್ತಿ
    In (ರಾಜ್ಯ ) ಜಿಲ್ಲೆ
  • ಮಾನವೀಯತೆಯ ಗ್ರಂಥಾಲಯದಂತಿದ್ದ ಅಟಲ್ ಜೀ
    In ವಿಶೇಷ ಲೇಖನ
  • ಲೋಕಾಯುಕ್ತ ಅಧಿಕಾರಿಗಳ ದಾಳಿ :ದಾಖಲೆಗಳ ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಹಾಗೂ ಪತ್ರಕರ್ತರ ಓಟಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತ
    In (ರಾಜ್ಯ ) ಜಿಲ್ಲೆ
  • ಗುರು ಎಂದು ಚೈತನ್ಯ ಸ್ವರೂಪ :ಶಿವಬಸಯ್ಯ ಸ್ವಾಮಿ
    In (ರಾಜ್ಯ ) ಜಿಲ್ಲೆ
  • ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ
    In (ರಾಜ್ಯ ) ಜಿಲ್ಲೆ
  • ಅದ್ಧೂರಿ ಗುರುವೀರಘಂಟೈ ಮಡಿವಾಳೇಶ್ವರ ಜೋಡು ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಮಕ್ಕಳನ್ನು ಪ್ರಬುದ್ದ ನಾಗರಿಕರಾಗಿ ನಿರ್ಮಾಣ ಮಾಡಿ :ಬಿಇಓ‌ ತಳವಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.