-ಮಂಡ್ಯ ಮ.ನಾ.ಉಡುಪ
ಜೇನು ಅಬ್ಬಾ ಇದರ ರುಚಿಗೆ ಮರುಳಾಗದ ಮನುಷ್ಯರೇ ಇಲ್ಲ. ಪುರಾತನ ಕಾಲದ ಪಾಶ್ಚಾತ್ಯರಿಗೆ ಗೊತ್ತಿದ್ದ ಏಕಮೇವ ಸಿಹಿಯೆಂದರೆ ಜೇನು ಮಾತ್ರವೇ. ಕೂಡಿಬಾಳುವುದಕ್ಕೆ ಮಾನವನಿಗೆ ಹಾದಿಹಾಕಿಕೊಟ್ಟಿದ್ದು ಈ ಜೇನುಗೂಡಿರಲೂ ಸಾಕು.
ಹಿಂದಿನ ಕಾಲದಲ್ಲಿ ಸತ್ತು ಕೊಳೆತ ಪ್ರಾಣಿಗಳ ದೇಹದಿಂದ ಜೇನುನೊಣಗಳು ಹುಟ್ಟುತ್ತವೆಂದು ನಂಬಿದ್ದರು ಮತ್ತು ಜೇನು ಹುಳುಗಳನ್ನು ಹೂವುಗಳಿಂದ ಸಂಗ್ರಹಿಸುತ್ತವೆಂದು ನಂಬಿದ್ದರು. ಅರಿಸ್ಟಾಟಲನು ತನ್ನಪುಸ್ತಕ ನ್ಯಾಚುರಲ್ ಹಿಸ್ಟರಿಯಲ್ಲಿ ಜೇನುನೊಣಗಳ ವರ್ಣನೆಯನ್ನು ಹಾಗೂ ಕೆಲಸಕಾರ್ಯಗಳನ್ನೂ ಅದೇ ತೆರೆನಾಗಿ, ತನ್ನ ಜಿಯೊರಿಕ್ ಪುಸ್ತಕ ದಲ್ಲಿ ವರ್ಜಿಲ್ನು ಜೇನು ನೊಣಗಳ ಕುರಿತು ಬರೆದ ನಂತರದಲ್ಲಿ ಜನರು ಈ ನಂಬಿಕೆಯನ್ನು ಬಿಟ್ಟರು. ನಂತರದ ಕಾಲದಲ್ಲಿ ಪಲಾದಿಯಸ್, ಪ್ಲಿನಿ, ಮೋಲೇ, ಮೊದಲಾದ ಮಹನೀಯರು ಜೇನು ಕುರಿತು ಬರೆದು ಜನರಿಗೆ ಹೆಚ್ಚಿನ ಅರಿವು ಮೂಡಿಸಿದರು.
ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು.ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ ದಿವೋ ರಜಸ ಪೃಥಿವ್ಯಾಃ. ಸಹಸ್ರಂ ಶಂಸಾ ಎತಯೇ ಗವಿಷ್ಟೌ ಸರ್ವಾಂ ಇತ ತಾಂ ಉಪಯತಾ ಪಿಬದ್ದ್ಯೆ..

ಕ್ರಮೇಣ ನಾಗರೀಕತೆ ಬೆಳೆದಂತೆ ಕೌತುಕ ಕಾರಕ ಈ ಜೇನು ವಿಜ್ಞಾನದ ಅರಿವು ಅಲ್ಲಲ್ಲಿ ಆರಂಭವಾಯಿತು ಎನ್ನಬಹುದು. ಜೇನು ನೊಣಗಳ ಪಾಲನೆ ಮತ್ತು ಅಧ್ಯಯನ ಪ್ರಾರಂಭಿಸಿದ ಪಾಶ್ಚಾತ್ಯರಲ್ಲಿ ಸಾಮರ್ದಾಮ್, ಆಂಟೋನಿ, ಪಿ-ಡಿ-ರಿಯೋಮರ್, ಚಾರ್ಲ್ಸಬಾನೆಟ್ ಮತ್ತು ಅಂಧ ಸ್ವಿಸ್ ವಿಜ್ಞಾನಿ ಪ್ರಾನ್ಸಕೋಯಿಸ್ ಹ್ಯೂಬರ್ ಇನ್ನೂ ಮುಂತಾದ ಅನೇಕರನ್ನು ಹೆಸರಿಸಬಹುದು. 18-19 ನೇ ಶತಮಾನದ ಮಧ್ಯಂತರದಲ್ಲಿ ಜೇನು ಪಾಲನಾ ಸಹಕಾರಿಯಾಗಿರುವ ಆವಿಷ್ಕಾರಗಳನ್ನು ಕಾಣಬಹುದು.ಆ ವೇಳೆಗಾಗಲೇ ಬುಟ್ಟಿಗೆ ಮಣ್ಣು ಲೇಪಿಸಿ ಜೇನು ದಾರಿಯನ್ನೂ ಕಲ್ಪಿಸಿ ಪಾಲನೆ ಮಾಡುವ ತಂತ್ರ ಅರಿಯಲಾಗಿತ್ತು.1768-70 ರಲ್ಲಿ ಥಾಮಸ್ ವೈಲ್ಡಮ್ಯಾನ್ ಬುಟ್ಟಿಯಲ್ಲಿ ಸಾಕಾಣಿಕೆ ಮಾಡುತ್ತಿದ್ದ ಜೇನು ಕುಟುಂಬದಲ್ಲಿ ಬುಟ್ಟಿಯ ಒಳ ಮೇಲುಭಾಗದಲ್ಲಿ ಮರದ ಚಿಕ್ಕ ಕಡ್ಡಿಗಳನ್ನು ಒಂದರ ಪಕ್ಕ ಇನ್ನೊಂದರಂತೆ ಇರಿಸಿದಾಗ ಜೇನು ನೊಣಗಳು ಮರದ ಕಡ್ಡಿಗಳಲ್ಲಿ ಎರಿಗಳು ರಚಿಸುತ್ತವೆ ಎಂಬುದನ್ನು ಅದೇ ರೀತಿ ಅಂತಸ್ತು ಕಲ್ಪಿಸಿದಾಗಲೂ ಹಾಗೆ ಎರಿ ರಚಿಸುತ್ತವೆ ಎಂಬುದನ್ನು ತೋರಿಸಿಕೊಟ್ಟರು. ಇದು ಮುಂದಿನ ದಿನಗಳಲ್ಲಿ ಚಲಿಸುವ ಚೌಕಟ್ಟುಗಳಿರುವ ಜೇನು ಪೆಟ್ಟಿಗೆಗಳ ಹೊಸ ಆವಿಷ್ಕಾರಕ್ಕೆ ಮಾರ್ಗವಾಯಿತು. ಲ್ಯಾರೆಂಜೊ ಲೋರೆಯಾನ್ ಲ್ಯಾಂಗಸ್ಟ್ರೊತ್ 1810-1895 ಇವರೊಬ್ಬ ರೈತಕುಟುಂಬದಿಂದ ಬಂದವರು.ಇವರು ಸಂಯುಕ್ತಸಂಸ್ತಾನದಿಂದ ಯಾರ್ಖಶೈರ್ ಗ್ರಾಮಕ್ಕೆ ವಲಸೆ ಬಂದವರು. ಇವರು ಹ್ಯೊಬರನು ಮೊದಲು ಮಾಡಿದ್ದ ಅನ್ವೇಷಣೆಗಳನ್ನು ಪ್ರಾಯೋಗಿಕ ಸ್ತರದಿಂದ ನೈಜ ಆಚರಣೆಗೆ ಒಳಪಡಿಸಿದರು. ಜೇನುನೊಣಗಳ ಚಲನ ವಲನದ ದಾರಿಗಾಗಿ ಎರಿಗಳ ಮಧ್ಯದಲ್ಲಿ ಅಂತರವನ್ನು ಕಾಪಾಡುವುದು ಹಾಗೂ ಚಲಿಸುವ ಚೌಕಟ್ಟುಗಳಿಂದ ಕೂಡಿದ ಒಂದು ಪೆಟ್ಟಿಗೆಯ ಆಕಾರ ಮತ್ತು ಅಳತೆಯನ್ನು ನಿರೂಪಿಸಿ ನಿರ್ಮಿಸಿದರು. ಇವರು ತಾವು ಸಂಶೋಧಿಸಿ ನಿರ್ಮಿಸಿದ ಜೇನು ಪೆಟ್ಟಿಗೆಗೆ 1853ರಲ್ಲಿ ಸರ್ಕಾರದಿಂದ ಸ್ವಾಮಿತ್ವದ ಅನುಮೋದನೆ ಗಳಿಸಿದರು.ಇದೇ ಲ್ಯಾಂಗ್ ಸ್ಟ್ರೋತ್ ಮಾದರಿ ಜೇನು ಪೆಟ್ಟಿಗೆ ಎಂಬುದಾಗಿ ಇಂದಿಗೂ ಆಚರಣೆಯಲ್ಲಿರುವುದು. ಈ ಮಾದರಿಯನ್ನು ಅಳವಡಿಸಿಕೊಂಡು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಸ್ಥಳೀಯ ಪರಿವರ್ತನೆ ಹಾಗೂ ಸ್ಥಳೀಯ ಹೆಸರೊಂದಿಗೆ ಮುಖ್ಯ ಲಕ್ಷಣಗಳನ್ನು ಉಳಿಸಿಕೊಂಡು ವ್ಯಾಪಕವಾಗಿ ಬಳಕೆಗೆ ಬಂದಿತು. ಈ ತೆರನಾದ ಚಲಿಸುವ ಮಾದರಿಯ ಜೇನು ಪೆಟ್ಟಿಗೆಗಳು ಜೇನು ಕೃಷಿಯ ಕ್ಷಿಪ್ರ ಬೆಳವಣಿಗೆಗೆ ಹೆದ್ದಾರಿಯಾಯಿತು. ಆದ್ದರಿಂದ ಶ್ರಿಯುತ ಎಲ್ಎಲ್ ಲ್ಯಾಂಗ್ ಸ್ಟ್ರೋತ್ ರವರನ್ನು ಆಧುನಿಕ ಜೇನು ಕೃಷಿಯ ಪಿತಾಮಹ ಎನ್ನಲಾಗುತ್ತದೆ. ಅಮೆರಿಕದಲ್ಲಿ ಲ್ಯಾಂಗ್ ಸ್ಟ್ರೋತ್ ಹಾಗೂ ಡ್ಯಾಡೆಂಟ್, ಇಂಗ್ಲೆಂಡಿನಲ್ಲಿ ಬ್ರಿಟಿಷ್-ಸ್ಟಾಂಡರ್ಡ್ ಮತ್ತು ಸುಧಾರಿತ ಡ್ಯಾಡಂಟ್ ಮತ್ತು ನ್ಯಾಷನಲ್, ಭಾರತದಲ್ಲಿ ಸುಧಾರಿತ ಲ್ಯಾಂಗ್ ಸ್ಟ್ರೋತ್ ಮತ್ತು ನ್ಯೊಟನ್ ಹೆಸರುಗಳಲ್ಲಿ ಚಾಲ್ತಿಗೆ ಬಂದವು. ನಮ್ಮ ದೇಶದಲ್ಲಿ ಸುಮಾರು 50 ವರುಷಗಳ ತರುವಾಯ ಅಂದರೆ ೧೯೧೧ರಲ್ಲಿ ಜೇನು ಪೆಟ್ಟಿಗೆಗಳು ಪರಿಚಯಿಸಲ್ಪಟ್ಟವು. ಈಗ ನಮ್ಮ ದೇಶದಲ್ಲಿ ಸರ್ಕಾರವು ಐ.ಎಸ್.ಐ.- ಎ ಮತ್ತು ಬಿ, ಮಾದರಿಯಲ್ಲಿರುವ ಜೇನು ಪೆಟ್ಟಿಗೆಗಳನ್ನೇ ಬಳಸುವಂತೆ ಸೂಚಿಸಿದೆ. ಜೇನು ಕುಟುಂಬದಲ್ಲಿರುವ ನೊಣಗಳ ಸಂಖ್ಯಾಬಲವನ್ನು ಲಕ್ಷ್ಯದಲಿರಿಸಿಕೊಂಡು ಉತ್ತರ ಮತ್ತು ದಕ್ಷಿಣ ಭಾರತದ ಅಗತ್ಯಕ್ಕೆ ಅನುಗುಣವಾಗಿ ಇವು ರೂಪಿಸಲ್ಟಿವೆ. ಈಗಿತ್ತಲಾಗಿ ಮರದ ಬದಲು ಪಾಲಿಸ್ಟ್ರಿನ್ ಉಪಯೋಗಿಸಿದ ಪೆಟ್ಟಿಗೆಯೂ ಬಳಸಲ್ಪಡುತ್ತಿದೆ.
ಕೆಲಸಗಾರ್ತಿ ನೊಣದ ಜೀವನ ಚಕ್ರ ಹೀಗಿದೆ ಕೆಲಸಗಾರ್ತಿ ನೊಣವು ಹುಟ್ಟಿ ಕಣದಿಂದ ಹೊರಬರುತ್ತಿರುವಂತೆಯೇ ಸುಮಾರು 19 ರಿಂದ21 ದಿನಗಳಲ್ಲಿ ತನ್ನದೇಹವನ್ನು ತಾನೇ ಶುಚಿಗೊಳಿಸಿಕೊಳ್ಳತೊಡಗುತ್ತದೆ. ಇದು ರಾಣಿಯಿಂದ ಬಳುವಳಿಯಾಗಿ, ಹುಟ್ಟುವಾಗಲೇ ಬಂದಿರುವ 10-12 ಓವರಿಯಲ್ಸ್ ಗಳನ ತತ್ತಿಯ ಕೋಶಗಳನ್ನು ಹೊಂದಿರುತ್ತವೆ. ಅನಂತರ 3 ದಿನಗಳವರೆಗೆ ತನಗಿಂತ ಹಿರಿಯ ಪ್ರಾಯದ ನೊಣಗಳಿಂದ ಆಹಾರ ಪಡೆದುಕೊಳ್ಳುತ್ತದೆ. ಹೀಗೆ ಪಡೆದ ಆಹಾರವು ಜೇನಾಗಿರಬಹುದು ಇಲ್ಲವೇ ಮಕರಂದವಾಗಿರಬಹುದು. ಮತ್ತು ಕೆಲವೊಮ್ಮೆ ರಾಜಶಾಹಿ ರಸ ಅಥವಾ ಬೇರೆ ರಸ ಗ್ರಂಥಿಗಳಿಂದ ಬರುವ ರಸವನ್ನು ಮಿಶ್ರ ಮಾಡಿದ ಆಹಾರದ ಗುಟುಕು ಕೂಡಾ ಆಗಿರಬಹುದು. ಆ ನಂತರದ ದಿನಗಳಲ್ಲಿ ಅವುಗಳ ಆಹಾರವು ಕೇವಲ ಪರಾಗ ಮತ್ತು ಜೇನಾಗಿರುತ್ತದೆ. ಜೇನು ನೊಣಗಳು ಸೇವಿಸುವ ಪರಾಗದಿಂದ ಅದರಲ್ಲಿನ ಸಸಾರಜನಕವು ರಾಸಾಯನಿಕವಾಗಿ ವಿಭಜಿಸಲ್ಪಟ್ಟು ವೇಗವರ್ಧಕದಂತೆಯೂ ಮತ್ತು ಆಯರ್ವರ್ಧಕವೂ ಆಗಿರುವುದು. ಇದಲ್ಲದೆ ಪೆಪ್ಟೋನ್ ಮತ್ತು ಪಾಲಿಪೆಪ್ಟೋನ್ಗಳಾಗಿ ನಂತರ ಅಮಿನೋ ಆಮ್ಲಗಳಿಂದ ಕೂಡಿಸಲ್ಪಟ್ಟು ಹೆಚ್ಚಿನಂಶವು ಹೈಪೋಪೆರೆಂಜಿಯಲ್ ರಸದೂತದ ಉತ್ಪತ್ಪಿಯಲ್ಲಿ ಪರಿವರ್ತನೆಗೊಳ್ಳುವುದು. 10 ದಿನಗಳಪರ್ಯಂತ ಮಾತ್ರ ಪರಾಗ ಜೇನುಮಿಶ್ರಿತ ಆಹಾರ ಸೇವಿಸುತ್ತವೆ. ಅನಂತರ ಕೇವಲ ಜೇನು ಮಾತ್ರ ಆಹಾರವಾಗಿರುವುದು. ಈ ಅವದಿಯಲ್ಲಿ ಹೆಚ್ಚು ಪರಾಗದ ಆಹಾರ ಸೇವಿಸಿದ್ದರೆ ಅದು ಹೆಚ್ಚು ಬಲಿಷ್ಟ ನೊಣವಾಗಿ ಹೆಚ್ಚು ಸಾಮರ್ಥ್ಯವನ್ನು,, ಮುಂದೆ ಹೆಚ್ಚು ಮೇಣ ಉತ್ಪಾದನಾ ಶಕ್ತಿಯನ್ನು ಸಹ ಹೊಂದಿರುತ್ತದೆ. ಇದರ ಮಿದುಳು ಗಂಡು/ರಾಣಿ ನೊಣಗಳಿಗಿಂತ ದೊಡ್ಡದು. ಈ ಭಾಗವನ್ನು ಕಾಪರ್ರಾಪೆಡೆಂಕ್ಯುಲೇಟಾಜೇನುನೊಣಗಳಲ್ಲಿ ದೇಹದ ವಿವಿಧ ಅಂಗಗಳ ನಿಯಂತ್ರಣವು ಕೇವಲ ಮಿದುಳಿಗೆ ಮಾತ್ರ ಸೀಮಿತವಾಗಿಲ್ಲ, ಹಾಗೂ ಐದುಕೋಣೆಗಳುಳ್ಳ ಹೃದಯ ಎನ್ನಬಹುದಾದ ಭಾಗವಿದ್ದರೂ ಪ್ರತ್ಯೇಕ ರಕ್ತ ಪರಿಚಲನಾ ವ್ಯವಸ್ಥೆಯಿಲ್ಲ. ಒಣ ಹುಲ್ಲಿನ ಬಣ್ಣದಲ್ಲಿರುವ ಇದರ ರಕ್ತದಲ್ಲಿ ಲ್ಯುಕೋಸೈಟ್ ಮತ್ತು ಫ್ಯಾಗೋಸೈಟ್ ಎಂಬ ಎರಡು ಬಗೆ ಇದ್ದು ಫ್ಯಾಗೋಸೈಟ್ ಬಿಳಿ ರಕ್ತದಂತೆ ರೋಗನಿರೋಧಕ ಕೆಲಸ ಮಾಡುವುದು. ಉಸಿರಾಟದ ವ್ಯವಸ್ಥೆಗಾಗಿ ಗಾಳಿಚೀಲಗಳು ಶ್ವಾಸನಾಳಗಳು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ನಾಳ ಹಾಗೂ ಅದರ ಕವಲುಗಳಿವೆ. ಗಾಳಿಯು ರಂದ್ರಗಳ ಮೂಲಕ ಸ್ಪಿರಾಕಲ್ಸ್ ಮೂಲಕ ಪ್ರವೇಶಿಸುತ್ತದೆ. ಈ ರಂದ್ರಗಳು ಥೋರೆಕ್ಸ ಗ್ರಂಥಿಯ ಮೇಲೆ ಎರಡು ಜೊತೆ ಹಾಗೂ ಹೊಟ್ಟೆಯಮೇಲೆ ಆರು ಜೊತೆಯಲ್ಲಿವೆ. ಆದರೆ ಗಂಡು ನೊಣಗಳಿಗೆ ಎಳು ಜೊತೆಯಲ್ಲಿವೆ. ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಈ ರಂದ್ರಗಳು ತೆರೆದು ಮುಚ್ಚಿಕೊಳ್ಳುತ್ತವೆ. ಇದರ ಬಾಯಿಸುತ್ತಲೂ ಚೂಪಾದ ಕೊಳವೆಯಂತಿರುವ ರುಚಿ ಗ್ರಾಹಕಗಳಿವೆ. ಇವುಗಳಿಗೆ ಮಿದುಳಿನ ನೇರಸಂಪರ್ಕವಿದ್ದು ರುಚಿಯನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸುತ್ತವೆ. ಜೇನುನೊಣಗಳಿಗೆ ಶೇ.4ಕ್ಕಿಂತ ಕಡಿಮೆ ಸಕ್ಕರೆಯುಳ್ಳ ದ್ರವವು ಸಿಹಿ ಎನಿಸುವುದಿಲ್ಲ. ಆದುದರಿಂದ ಅದನ್ನು ಸೇವಿಸಲು ಒಪ್ಪುವುದಿಲ್ಲ. ಜೇನುನೊಣಗಳ ಕಾಲುಗಳ ತುದಿಭಾಗದಲ್ಲಿ `ಅರೋಲಿಯಂ’ ಎಂಬ ಒಂದು ವಿಶಿಷ್ಟ ದ್ರವವಿದ್ದು ಇದರ ಸಹಾಯದಿಂದ ಅತ್ಯಂತ ನಯವಾದ ಗಾಜು ಮುಂತಾದ ಸ್ಥಳದಲ್ಲೂ ಸುಲಭವಾಗಿ ಕುಳಿತುಕೊಳ್ಳಬಲ್ಲವು. ನೊಣಗಳಿಗೆ ಅತ್ಯಂತ ಖಚಿತವಾದ ಸಮಯ ಪ್ರಜ್ಞೆ ಇರುವುದು. ಆದುದರಿಂದ ಮರಗಿಡಗಳಲ್ಲಿ ಹೂವು ಅರಳಿ ಪುಷ್ಪರಸ ಪರಾಗ ದೊರೆಯುವ ಸಮಯಕ್ಕೆ ಅನುಗುಣವಾಗಿ ಹಗಲಿನಲ್ಲಿ ಹೂವಿನೆಡೆಗೆ ಹಾರಿಹೋಗಿ ಆಹಾರವನ್ನು ಸಂಗ್ರಹಿಸುತ್ತವೆ. ಕೆಲಸಗಾರ್ತಿ ನೊಣಗಳ ಎಲ್ಲ ಚಟುವಟಿಕೆಗಳು ಅವುಗಳ ದೈಹಿಕ ವಯಸ್ಸಿಗಿಂತ ಅವಶ್ಯಕತೆಗೆ ಸರಿಹೊಂದುವಂತೆ ನಿಯಂತ್ರಿಸಲ್ಪಡುವುದು. ಹೀಗಿರುವುದರಿಂದಲೇ ಅದರ ಚಟುವಟಿಕೆಗಳು ಆ ಕುಟುಂಬದ ಅವಶ್ಯಕತೆಗೆ ಅನುಗುಣವಾಗಿ ಕೆಲವೊಮ್ಮೆ ಬದಲಾಗಬಹುದು. ಉದಾ: ಅಕಾಲಿಕವಾಗಿ ಮೇಣ ಮತ್ತು ರಾಜಶಾಹಿ ರಸವನ್ನು ಉತ್ಪಾದಿಸುವ ಪ್ರಾಯದ ನೊಣಗಳಲ್ಲದ ನೊಣಗಳು ಸಹ ಸಾಂದರ್ಭಿಕವಾಗಿ ಜೇನುಮೇಣ, ರಾಜಶಾಹಿರಸವನ್ನು ಉತ್ಪಾದಿಸುವುದಾಗಿದೆ. ಮತ್ತುಳಿದ ಕೆಲಸ ಹಾಗೂ ಕ್ಷೇತ್ರ ಕಾರ್ಯಗಳು ಸಹ ಹೀಗೆ ಬದಲಾಗಬಹುದು. ಜೇನು ನೊಣಗಳು ಬೆಳಕಿಗೆ ಆಕಷರ್ಸಲ್ಪಡುವ ಗುಣವನ್ನು ಹೊಂದಿವೆ. ಇದನ್ನು ಫೊಟೋ ಪಾಸಟಿವ್ ಗುಣವೆನ್ನುವರು. ಅನೇಕವೇಳೆ ವಿದ್ಯುತ್ ದೀಪದೆಡೆಗೆ ನೊಣಗಳು ಗಿರಕಿ ಹೊಡೆಯುತ್ತಿರುದನ್ನು ನಾವು ಕಾಣುತ್ತಿರುತ್ತೇವೆ. ಮತ್ತು ಗುರುತ್ವ ವಿರುದ್ಧ ಚಲಿಸುವ ಗುಣವನ್ನು ಸಹ ತೋರಿಸುತ್ತವೆ ಇದನ್ನು ಜಿಯೋನೆಗೆಟಿವ ಗುಣವೆನ್ನುವರು ಆದುದರಿಂದ ಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸುವಾಗ ಅಡಿಮಣೆಯನ್ನು ಇಳಿಜಾರಾಗಿರಿಸಿ ಅಡಿಮಣೆಯ ಇಳಿಜಾರಿನಲ್ಲಿ ಕೆಳಗಿನಿಂದ ಮೇಲಕ್ಕೆ ಏರುವಂತೆ ಮಾಡಿ, ನೊಣಗಳನ್ನು ಪೆಟ್ಟಿಗೆಗೆ ಸೇರಿಸುವ ಕೆಲಸವನ್ನು ಸುಲಭಗೊಳಿಸಿಕೊಳ್ಳಬಹುದು. ಕೆಲಸಗಾರ್ತಿ ಜೇನುನೊಣಗಳ ಜೀವನಾವಧಿಯು ಸುಮಾರಾಗಿ 22 ದಿನಗಳಿಂದ 57 ದಿನಳಾವಧಿಯಲ್ಲಿದ್ದು ಮತ್ತು ಅದು ಹುಟ್ಟುವ ಋತು ಹಾಗೂ ಅದರ ಚಟುವಟಿಕೆಗಳನ್ನು ಅವಲಂಬಿಸಿದೆ. ಸಮಶೀತೋಷ್ಣ ವಲಯದಲ್ಲಿ ಜೇನು ನೊಣಗಳಿಗೆ ಆಹಾರವು ವರ್ಷಪೂರ್ತಿ ಸರಿಸುಮಾರಾಗಿ ದೊರಕುವುದು. ಹಾಗಾಗಿ ವರ್ಷವೆಲ್ಲ ಸಂಸಾರದ ಮೊಟ್ಟೆಮರಿ ಬೆಳೆಸುವಿಕೆಯು ನಿರಂತರವಾಗಿರುವುದು. ಈ ಪರಿಣಾಮವಾಗಿ ಅದು ಹೆಚ್ಚು ಕೆಲಸ ನಿರ್ವಹಿಸಬೇಕಾಗಿ ಬರುವುದರಿಂದ ಅಲ್ಪಾಯು ಆಗುವುದು. ಬೇರೆ ಪ್ರದೇಶಗಳಲ್ಲಿ ಅದೇರೀತಿ ಮಳೆಗಾಲ ಚಳಿಗಾಲದಲ್ಲಿ ಸಂಸಾರದಲ್ಲಿ ಕುಂಠಿತಗೊಳ್ಳುವ ಮೊಟ್ಟೆಮರಿ ಬೆಳೆಸುವಿಕೆ ಪರಿಣಾಮವು ಅವುಗಳ ದೇಹದಲ್ಲಿ ಸಸಾರಜನಕಾಂಶದ ಮಟ್ಟವು ವೃದ್ಧಿಸಿ ಹಾಗೂ ಕೆಲಸಕಾರ್ಯ ಕುಂಠಿತಗೊಂಡು ಆಯಸ್ಸು ಹೆಚ್ಚುವುದು. 42ದಿನಗಳಿಗಿಂತ ಕಡಿಮೆ ವಯಸ್ಸಿನ ನೊಣಗಳು ಏರಿಗಳ ಕಣ ಶುಚಿಗೊಳಿಸುವಿಕೆ ಮತ್ತು ಕಣದಲ್ಲಿ ಬೆಳೆಯುತ್ತಿರುವ ಚಿಕ್ಕ ಹುಳಗಳಿಗೆ ಶುಶ್ರೂಷೆ ಮಾಡುವವು. ಮೊದಮೊದಲು ದೊಡ್ಡಹುಳಗಳಿಗೆ ಮಾತ್ರ ಆಹಾರವನ್ನು ಕೊಡುತ್ತವೆ. ಅನಂತರ ಎಲ್ಲಾ ಪ್ರಾಯದಲ್ಲಿರುವ ಕಣದಲ್ಲಿ ಬೆಳೆಯುತ್ತಿರುವ ಹುಳಗಳಿಗೆ ಆಹಾರ ನೀಡುತ್ತವೆ. ಚಕಿತಗೊಳಿಸುವ ಸಂಗತಿ ಎಂದರೆ 6-7ದಿನಗಳಲ್ಲಿ ಅನೇಕ (8ಸಾವಿರಕ್ಕೂ ಮಿಕ್ಕಿ) ಸಾವಿರ ಬಾರಿ ಈ ತೆರನಾಗಿ ಮರಿಹುಳುಗಳಿಗೆ ಆಹಾರವನ್ನು ಒದಗಿಸುತ್ತವೆ. 6ರಿಂದ 12ದಿನಗಳ ಪ್ರಾಯದ ನೊಣಗಳು ಮೊಟ್ಟೆಹಾಕುವ ರಾಣಿಗೆ ಆಹಾರ ಉಣಿಸುತ್ತವೆ. ಹೀಗೆ ರಾಣಿಗೆ ಉಣಿಸಲು ಅವುಗಳ ತಲೆಯ ಭಾಗಲ್ಲಿರುವ ಹೈಪೋಪರೆಂಜಿಯಲ್ ಗ್ರಂಥಿಯಿಂದ ವಿಶಿಷ್ಟವಾದ ರಾಜಶಾಹಿರಸವು ಉತ್ಪಾದನೆಗೊಳ್ಳುವುದು. ನಂತರದ ದಿನಗಳಲ್ಲಿ ಶುಶ್ರೂಷಾತನವು ಕೊನೆಗೊಳ್ಳುತ್ತದೆ, ಅಲ್ಲದೆ 14-20ದಿನ ಪ್ರಾಯದ ನೊಣಗಳು ಹೊಸ ಏರಿ ರಚನೆಯ ಕಾರ್ಯದಲ್ಲಿ ತೊಡಗುತ್ತವೆ. ಆ ಸಮಯದಲ್ಲಿ ಅವುಗಳ ಹೊಟ್ಟೆಯ ತಳಭಾಗದಲ್ಲಿ ಇರುವ 4ಜೊತೆ ಮೇಣದ ಗ್ರಂಥಿಗಳು ಸಕ್ರಿಯಗೊಂಡಿರುತ್ತವೆ. ಈ ಸಮಯದಲ್ಲಿ ಅವು ಮಣಿಸರವನ್ನು ಪೋಣಿಸಿದಂತೆ ತಳುಕು ಹಾಕಿ ನಿಶ್ಚಲವಾಗಿ ಕುಳಿತು ಮೇಣ ಉತ್ಪಾದನೆಗೆ ತೊಡಗುತ್ತವೆ. 3ನೇವಾರದ ಪ್ರಾಯದಲ್ಲಿ ಗೂಡಿನಿಂದ ಹೊರಗಡೆಗಡೆಗೆ ಹೊರಟು ಸಣ್ಣಸಣ್ಣ ಹಾರಟವನ್ನು ಪ್ರಾಂಭಿಸುತ್ತವೆ. ಅವುಗಳಲ್ಲಿ ಕೆಲವು ಹಿರಿಯ ನೊಣಗಳು ಆ ಸಮಯದಲ್ಲಿ ಮುಖದ್ವಾರದಲ್ಲಿ ಕುಳಿತು ಪಹರೆ ಕೆಲಸಗಳನ್ನು ನೆಡೆಸುತ್ತವೆ. ಒಳಬರುವ ನೊಣಗಳನ್ನು ಪರಿಶೀಲನೆ ಮಾಡಿ ಕುಡಿಮೀಸೆಯಿಂದ ಮೂಸಿನೋಡಿ ಗೂಡಿನ ವಾಸನೆಯನ್ನು ಹೊಂದಿರದ, ಆಹಾರವನ್ನೂ ಹೊಂದಿರದ ನೊಣವನ್ನು ಹೊರಗಟ್ಟುತ್ತವೆ. ಅಲ್ಲದೆ ಕುಟುಂಬವು ಹೊಸ ಸ್ಥಳಕ್ಕೆ ಹೋಗಿ ನೆಲೆಸುವ ಸನ್ನಿವೇಶದಲ್ಲಿ ಕೆಲವು ಅನ್ವೇಷಕ ನೊಣಗಳು ಮೊದಲು ಆಹಾರ ಹಾಗೂ ಶತ್ರುಗಳ ಉಪಟಳವಿಲ್ಲದ ಉತ್ತಮವಾದ ವಾತಾವರಣವನ್ನು ಹೊಂದಿರುವ ಪ್ರದೇಶವನ್ನು ಆಯ್ಕೆಮಾಡಿ ತನ್ನ ಕುಟುಂಬ ನೆಲೆಸಲು ಬೇಕಾಗಿರುವ ನೆಲೆಗಳನ್ನು ಕಂಡುಹಿಡಿಯುವವು. ಅಂತಹ ಹೊಸ ನೆಲೆಗಳಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರು ವಾಸಮಾಡಲು ಬೇಕಾಗುವಷ್ಟು ಪೊಟರೆಯು ವಿಶಾಲವಾಗಿದೆಯೇ ಎಂಬೆಲ್ಲಾ ಸೂಕ್ಷ್ಮ ಅಂಶಗಳನ್ನೂ ಸಹ ಅರಿತುಕೊಳ್ಳಲು ಪೊಟರೆಯೊಳಗೆ ಪ್ರವೇಶಿಸಿ ಜೋರಾಗಿ ರೆಕ್ಕೆಯಿಂದ ಶಬ್ದಹೊರಡಿಸಿ ಪ್ರತಿಧ್ವನಿ ಮೂಲಕ ಆ ಸ್ಥಳದ ವಿಶಾಲತೆಯನ್ನು ಗ್ರಹಿಸುತ್ತವೆ. ಅನಂತರದಲ್ಲಿ ಆ ಸ್ಥಳಕ್ಕೆ ರಾಣಿಯೊಂದಿಗೆ ಎಲ್ಲಾ ಸದಸ್ಯರು ಅನುಸರಿಸಿ ಹಾರಿಬರಲು ಮಾರ್ಗದರ್ಶನ ಇವೇ ಮುಂತಾದ ಅನೇಕ ಸಾಂದರ್ಭಿಕ ಕೆಲಸಗಳನ್ನೂ ನೋಡಿಕೊಳ್ಳುತ್ತವೆ. ಗೂಡಿನೊಳಗೆ ಶತ್ರುಗಳು ಬರದಂತೆ ರಕ್ಷಣೆ ಕೆಲಸವನ್ನು ನಿರ್ವಹಿಸುವವು. ಒಂದು ವೇಳೆ ಶತ್ರುಗಳು ಪ್ರಬಲವಾಗಿದ್ದು ಗೂಡಿನೊಳಗೆ ಅತಿಕ್ರಮಿಸಿದರೆ ವಿಶಿಷ್ಟ ಶಬ್ದವನ್ನು ಹೊರಡಿಸಿ ಎಚ್ಚರಿಕೆಯನ್ನು ನೀಡುವವು ಮತ್ತು ಶತ್ರುವನ್ನು ಆಕ್ರಮಿಸಿ ಹಿಮ್ಮೆಟ್ಟಿಸುತ್ತವೆ/ಕೊಂದು ಎಸೆಯುತ್ತವೆ. ಮೊಟ್ಟೆ ಮರಿಯುಳ್ಳ ಏರಿಗಳಮೇಲೆ ಒತ್ತಾಗಿ ಕುಳಿತು ಶಾಖ ಸಂರಕ್ಷಣೆಯ ಕೆಲಸವನ್ನೂ ಇಲ್ಲವೆ ಗೂಡಿನ ಶಾಖ 98ಡಿಗ್ರಿಗಳಿಗಿಂತ ಅಧಿಕವಾಗತೊಡಗಿದರೆ ರೆಕ್ಕೆಗಳನ್ನು ಜೋರಾಗಿ ಬೀಸುವ ಮೂಲಕ ತಣ್ಣನೆಯ ಗಾಳಿಯನ್ನು ಗೂಡಿನೊಳಗೆ ಕಳುಹಿಸಿ ತಂಪಾಗಿಸಲು ಯತ್ನಿಸುತ್ತವೆ. ಅಧಿಕ ಶಾಖದಿಂದ ಏರಿಗಳು ಕಳಚಿ ಬೀಳದಂತೆ ಮಾಡಲು ನೀರನ್ನು ಅನ್ವೇಷಿಸಿ ಕೂಡಲೇ ತಂದು ಏರಿಯ ಬುಡಕ್ಕೆ ನೀರನ್ನು ತುಂತುರು ಹನಿಯಂತೆ ಸಿಂಪಡಿಸುವವು. ಅಲ್ಲದೇ ಬೇಡದ ಕಸಕಡ್ಡಿಗಳನ್ನು ಗೂಡಿನಿಂದ ತೆಗೆದು ಹೊರಹಾಕುತ್ತವೆ. ಅಂಗವಿಹೀನ ಸತ್ತುಹೋದ ನೊಣಗಳನ್ನು ಹೊರಕ್ಕೆ ಎಸೆಯುವವು. ಶುಚಿ ಮಾಡುವ ಕೆಲಸವನ್ನು ಸದಾ ನೋಡಿಕೊಳ್ಳುತ್ತಿರುತ್ತವೆ. ಗೂಡಿನಲ್ಲಿ ಸದಾ ಒಂದಲ್ಲ ಇನ್ನೊಂದು ಕೆಲಸವನ್ನು ನಿಷ್ಠೆಯಿಂದಲೂ ಕಾಳಜಿಯಿಂದಲೂ ನಿರ್ವಹಿಸುತ್ತವೆ. ಹೀಗೆ ಕಾಲಕಾಲಕ್ಕೆ ಆಗಬೇಕಾಗಿರುವ ಎಲ್ಲಾ ಕೆಲಸಗಳನ್ನು ತಪ್ಪದೇ ನಿರ್ವಹಿಸುತ್ತಿರುವಂತೆಯೇ ಅವುಗಳ ರೆಕ್ಕೆಯು ಸವೆದು ಬಲಹೀನವಾಗುತ್ತಿರುವಂತಹ ಈ ಅವಧಿಯಲ್ಲಿ ಬಹುತೇಕವಾಗಿ ಅವುಗಳ ಜೀವನವೇ ಮುಗಿದು ಹೋಗಿರುತ್ತದೆ. ಇನ್ನೂ ಹಿರಿಯ ನೊಣಗಳು ಮಕರಂದವನ್ನು ಕಲೆಹಾಕಿ ತಂದ ನೊಣಗಳಿಂದ ಮಕರಂದವನ್ನು ಪಡೆದು, ಅದನ್ನು ಜೇನುತುಪ್ಪವಾಗಿ ಪರಿವರ್ತಿಸುವ ಕೆಲಸ ಹಾಗೂ ದಾಸ್ತಾನು ಮಾಡುವ ಕೆಲಸವನ್ನು ಮಾಡುತ್ತವೆ. 3 ವಾರ ಪ್ರಾಯದ ನಂತರ, ಪರಾಗ-ಪುಷ್ಪರಸ-ನೀರು ಸಂಗ್ರಹಿಸಿ ತರುವುದು ಮುಂತಾದ ಕೆಲಸವನ್ನು ಮಾಡುತ್ತವೆ. ಜೇನು ಕುಟುಂಬದಲ್ಲಿನ ಬಹುಪಾಲು ಸಂಖ್ಯೆಯಲ್ಲಿರುವ ಈ ಕೆಲಸಗಾರ್ತಿ ನೊಣಗಳು ಗೂಡಿನ ಎಲ್ಲಾ ಅವಶ್ಯಕವಾದ ಕೆಲಸಕಾರ್ಯಗಳನ್ನು ಕ್ಲುಪ್ತವಾಗಿ ಮಾಡಿ ತನ್ನ ಕೆಲಸವನ್ನು ಮುಗಿಸುತ್ತವೆ. ಈ ಸಲುವಾಗಿ ಅವುಗಳಲ್ಲಿರುವ ಅಂಗಾಂಗಗಳು ಚೆನ್ನಾಗಿ ಬೆಳವಣಿಗೆಯಾಗಿದ್ದರೂ ಅವುಗಳ ಪ್ರಜನನಾಂಗವು ಮಾತ್ರ ಅಪೂರ್ಣ ಬೆಳವಣಿಗೆಯಾಗಿದ್ದು ಸಹಜ ಕೆಲಸವನ್ನು ನಿರ್ವಹಿಸಲಾರದು. ಆದುದರಿಂದ ಇವು ಅಪೂರ್ಣವಾಗಿ ಬೆಳೆದ ಹೆಣ್ಣುನೊಣಗಳು ಎನಿಸಿಕೊಳ್ಳುತ್ತವೆ. ಅವು ಹೀಗೆ ಮಾಡುವ ಎಲ್ಲಾ ಕೆಲಸಕಾರ್ಯಗಳಿಗೆ ಅವುಗಳು ಹುಟ್ಟುವಾಗಲೇ ಪಡೆದು ಬಂದಿರುವ ವಿಶೇಷ ಅಂಗಾಂಗಗಳು ಮತ್ತು ವಿಶಿಷ್ಟ ರಸದೂತಗಳು ಮುಖ್ಯ ಕಾರಣವೆನ್ನಬಹುದು.

ಜೇನುಕುಟುಂಬದ ಜೀವ ವೈವಿಧ್ಯಗಳು
ಭಾರತೀಯ ತುಡಿವೆ ಮತ್ತು ಪಾಶ್ಚಾತ್ಯ ತುಡಿವೆ ಜೇನುಗಳನ್ನು ಪ್ರಪಂಚದ ನಿಜವಾದ ಜೇನುಗಳೆಂದು ಬಣ್ಣಿಸಿದ್ದಾರೆ. ಭಾರತೀಯ ತುಡಿವೆ ಜೇನುಗಳಲ್ಲಿ ೩ ಪ್ರಭೇದಗಳನ್ನು ಕಾಣಬಹುದು. ಈ ಪೈಕಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ಭೂಪ್ರದೇಶಗಳಲ್ಲಿ ಭಾರತೀಯ ತುಡಿವೆ ನೊಣಗಳ ಪ್ರಭೇದವು ಕಂಡುಬರುವುದು. ಈ ಜೇನುಕುಟುಂಬಗಳಲ್ಲಿ ಸಮಾನಾಂತರದಲ್ಲಿ ರಚಿಸಲ್ಪಡುವ ೬-೮ ಏರಿಗಳನ್ನು ಕಾಣಬಹುದು. ಆದರೆ ಒಂದೇ ಸ್ಥಾನದಲ್ಲಿ ಕುಟುಂಬವು ಸಂಸಾರ ನಿರ್ವಹಿಸಿ ನೆಲೆಸಿರುವ ಅವಧಿಯು ಅದೇ ಸ್ಥಾನಕ್ಕೆ ಭಿನ್ನವಾಗಿರಬಹುದು. ಇದು ಸಾಮಾನ್ಯವಾಗಿ ಗೂಡು ಇರುವ ಪ್ರದೇಶ, ಗೂಡಿನೊಳಗೆ ದೊರಕುವ ವಿಶಾಲವಾದ ಸ್ಥಳಾವಕಾಶವನ್ನು ಹಾಗೂ ಅದರ ಆಕಾರವನ್ನೂ ಅವಲಂಬಿಸಿರುವುದು. ಉತ್ತಮವಾದ ಎಲ್ಲಾ ಸೌಲಭ್ಯಗಳು ಮತ್ತು ಸಾಕಷ್ಟು ಆಹಾರವು ಸದಾ ದೊರೆಯುತ್ತಿದ್ದಲ್ಲಿ ಒಂದು ನೈಸರ್ಗಿಕ ಕುಟುಂಬವು ಸುಮಾರು ೧೫-೧೬ ದೊಡ್ಡ ಏರಿಗಳನ್ನು ರಚಿಸುವುದು ಹಾಗೂ ಹೆಚ್ಚುನೊಣ ಸಂಖ್ಯೆಯಿಂದಲೂ ಕೂಡಿ ಬೆಳೆದಿರುತ್ತವೆ.
ಒಂದು ಜೇನು ಕುಟುಂಬದಲ್ಲಿ ಕೆಲಸಗಾರ್ತಿನೊಣಗಳ ಪ್ರಜಾ ಸಂಖ್ಯೆಯು ಗರಿಷ್ಠ ೩೫,೦೦೦ ದಿಂದ ಹಿಡಿದು ಕಾಶ್ಮೀರಿನೊಣಗಳಲ್ಲಿ ೭೦,೦೦೦ ನೊಣಸಂಖ್ಯೆಯವರೆಗೆ ಕಂಡುಬರುವುದು. ಅದೇರೀತಿ ಕೆಲವು ಸನ್ನಿವೇಶಗಳಲ್ಲಿ ಕನಿಷ್ಠತಮವಾಗಿ ಅಂದರೆ ೧೮,೦೦೦ ನೊಣಸಂಖ್ಯೆಯಿಂದ ೨೨,೦೦೦ ನೊಣಸಂಖ್ಯೆಯವರೆಗೆ ಕೂಡಿರಲೂಬಹುದು. ಅಪರೂಪದಲ್ಲಿ ಅಸಾಮಾನ್ಯವಾಗಿ ಹಿಗ್ಗಿಬೆಳೆದ ಜೇನುಕುಟುಂಬಗಳು ೮೦,೦೦೦ ನೊಣಸಂಖ್ಯೆಯವರೆಗೂ ಕೂಡಿರುವುದುಂಟು. ಇದು ಸ್ಥಳೀಯ ಆಹಾರ ಲಭ್ಯತೆ, ಹವಾಮಾನ, ಜೇನುಕುಟುಂಬದ ತಳಿ ಹಾಗೂ ನಿರ್ವಹಣೆಯನ್ನು ರಚಿಸಲಾಗುತ್ತದೆ. ಕೆಲಸಗಾರ್ತಿ ಹಾಗೂ ಗಂಡುನೊಣಗಳನ್ನು ಬೆಳಸುವ ಏರಿಗಳೆಲ್ಲವೂ ಒಂದೇ ತೆರನಾಗಿ ಬಹು ಉಪಯೋಗಿಯಾಗಿ ಬಳಸಲ್ಪಡುವುದಾದರೂ ಸಾಮಾನ್ಯವಾಗಿ ಸಂಸಾರದ ಮಧ್ಯದ ಏರಿಗಳು ಯಾವಾಗಲೂ ಹೆಚ್ಚಾಗಿ ಮೊಟೆಮರಿ ಬೆಳೆಸುವಿಕೆಯಿಂದ ಕೂಡಿರುತ್ತವೆ. ಅದೇ ಸಂದರ್ಭಗಳಲ್ಲಿ ಏರಿಗಳ ಹೊರ ಅಂಚಿನಲ್ಲಿ ಅಲ್ಪಸ್ವಲ್ಪ ಮೊಟ್ಟೆಮರಿಗಳಿಂದ ಕೂಡಿರಲೂಬಹುದು, ಅಲ್ಲವೇ ಸ್ವಲ್ಪವೂ ಮೊಟೆಮರಿಗಳು ಇಲ್ಲದಿರಲೂಬಹುದು. ಕೆಲವೊಮ್ಮೆ ಏರಿಗಳೆಲ್ಲವೂ ಜೇನುತುಪ್ಪವನ್ನು ತುಂಬಿಸಲೋ ಅಥವಾ ಪರಾಗವನ್ನು ತುಂಬಿಸಲೋ ಬಳಕೆಯಾಗುವುದೂ ಉಂಟು. ಚಿಕ್ಕಗಾತ್ರದ ಬಯಲು ಪ್ರದೇಶದ ನೊಣಗಳು ಬಂಗಾರದ ಆಕರ್ಷಕ ಬಣ್ಣವನ್ನು ಹಾಗು ಬೆಟ್ಟಸೀಮೆಯ ನೊಣಗಳು ದೊಡ್ಡದಾದ ಗಾತ್ರ ಹಾಗೂ ಕಪ್ಪುಮಿಶ್ರಿತಬೂದು ಬಣ್ಣದಲ್ಲಿ ಕಾಣಿಸುತ್ತವೆ.

ಮೆಲ್ಲಿಫೆರಾ ಜೇನುಗಳು
ಇದು ಉಪಕಾರಿ ಕೀಟವಾಗಿದ್ದು, ಜೋಳದ ಕಾಳಿನ ಗಾತ್ರದಲ್ಲಿ ಗಾತ್ರದಲ್ಲಿರುವುದು. ಇದು ನೈಸರ್ಗಿಕವಾಗಿ ಮೇಣದ ಚಿಟ್ಟೆಯ ಹುಳಗಳನ್ನು ತಿನ್ನುವ, ಪ್ರಾಕೃತಿಕ ಹುಳವಾಗಿದೆ. ಚಿಕ್ಕಹುಳಗಳು ಮೇಣದ ಮೊಟ್ಟೆಗಳನ್ನು ತಿಂದು ಮೇಣದ ಚಿಟ್ಟೆಯನ್ನು ನೈಸರ್ಗಿಕವಾಗಿ ಹತೋಟಿ ಮಾಡುವುದು. ಇದು ಪರಾವಲಂಬಿಯಾಗಿದ್ದು ಮೇಣದ ಚಿಟ್ಟೆಯ ಚರ್ಮದ ಭಾಗದಲ್ಲಿ ತನ್ನ ಜೀವನ ಪ್ರಾರಂಭಿಸುವುದು. ಆದುದರಿಂದ ಮೇಣದಚಿಟ್ಟೆಯ ಹುಳಗಳು ನಾಶವಾಗುವುದು. ಜೇನು ಕೃಷಿಕರು ಅಡಿಮಣೆಯನ್ನು ಶುಚಿಗೊಳಿಸುವಾಗ ಇಂತಹ ಕೀಟಗಳು ಕಾಣಿಸಿದರೆ ಅವುಗಳನ್ನು ತೆಗೆಯಬಾರದು.
ಜೇನುಹುಳಗಳು ನಮಗೆ ಜೀವನದ ಪಾಠವನ್ನು ಕಲಿಸುತ್ತದೆ. ಕೂಡಿ ಬಾಳುವ ಇವುಗಳ ಪರಿ ಅದೆಂತ ಅಚ್ಚರಿ. ಜೇನು ಪ್ರಕೃತಿ ಮಾನವನಿಗೆ ನೀಡಿದ ಅಪೂರ್ವ ಉಡುಗರೆಯೆಂದರೂ ತಪ್ಪಾಗದು.
– ಮ.ನಾ.ಉಡುಪ ಮಂಡ್ಯ

