“ವಿದ್ಯಾರ್ಥಿ ನಿಧಿ”- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ಮೂರ್ಖನ ಸಹವಾಸ
ಅಕ್ಬರ್ ಬಾದಶಹನ ಮನಸ್ಸಿನಲ್ಲಿ ‘ಮೂರ್ಖರ ಜೊತೆಗೆ ಕೆಲಸ ಮಾಡುವ ಸಂದರ್ಭ ಬಂದರೆ ಏನು ಮಾಡಬಹುದು?’ ಎಂಬ ಚಿಂತೆಯು ಸದಾ ಕೊರೆಯುತ್ತಿತ್ತು. ಈ ವಿಚಾರವನ್ನು ಅಕ್ಬರನು ಮರೆಯಲು ಸತತವಾಗಿ ಪ್ರಯತ್ನಿಸುತ್ತಿದ್ದರೂ ಬಿಡದೇ ಪ್ರಶ್ನೆಯು ಈತನನ್ನು ಕಾಡುತ್ತಿತ್ತು. ಒಂದು ದಿನ ಅಕ್ಬರ್ ದರ್ಬಾರನ್ನು ಕರೆದಿದ್ದ, ಆಗ ಅಕ್ಬರನಿಗೆ ಆತನ ಚಿಂತೆಯೂ ನೆನಪಾಯಿತು. ಆಗ ತನ್ನ ಸಭೆಯಲ್ಲಿ ‘ಮೂರ್ಖರ ಜೊತೆಯಲ್ಲಿ ಕೆಲಸ ಮಾಡುವ ಸಂದರ್ಭ ಬಂದರೆ ಏನು ಮಾಡಬೇಕು’ ಎಂದು ಎಲ್ಲರನ್ನು ಕೇಳಿದ. ಅಕ್ಬರನ ಪ್ರಶ್ನೆಗೆ ಬೀರಬಲ್ಲನು ಮುಗುಳ್ನಕ್ಕು ಮೌನವಾಗಿ ಕುಳಿತುಕೊಂಡು ಬಿಟ್ಟ.
ಈ ಪ್ರಶ್ನೆಯನ್ನು ಅಕ್ಬರ್ ಒಬ್ಬ ಪಂಡಿತನ ಬಳಿ ಕೇಳುತ್ತಾನೆ, ಆಗ ಆ ಪಂಡಿತನು ಅಂತಹ ಮೂರ್ಖರಿದ್ದರೆ ಅವರ ತಲೆ ಬೋಳಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡಬೇಕು ಎಂದು ಉತ್ತರಿಸುತ್ತಾನೆ. ಇನ್ನೊಬ್ಬ ಪಂಡಿತ ಮಹಾರಾಜಾ, ಅಂತಹ ಮೂರ್ಖನ ಸಹವಾಸವಾದರೆ ಆತನ ಮುಖಕ್ಕೆ ಕಪ್ಪು ಬಣ್ಣ ಬಳಿದು ಕಣ್ಣು ಕಟ್ಟಿ ಬಿಡಬೇಕು ಎಂದು ಸೂಚಿಸಿದ. ಮೂರ್ಖರನ್ನು ಕಂಡರೆ ಅವರನ್ನು ನಗರದಿಂದ ಹೊರ ಹಾಕಿ ಗಡಿಪಾರು ಮಾಡಬೇಕು ಎಂದು ಮತ್ತೊಬ್ಬ ಪಂಡಿತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ.
ಅಕ್ಬರನ ಆಸ್ಥಾನದಲ್ಲಿ ಪ್ರತಿಯೊಬ್ಬ ಪಂಡಿತರು ತಮಗೆ ತಿಳಿದಂತೆ ಒಂದೊಂದು ರೀತಿಯ ಅಭಿಪ್ರಾಯಗಳನ್ನು ತಿಳಿಸಿದರು. ಆದರೆ ಈ ಉತ್ತರದಿಂದ ಸಂತುಷ್ಟನಾಗದ ಅಕ್ಬರನು, ಬೀರಬಲ್ಲನ ಕಡೆ ತನ್ನ ನೋಟವನ್ನು ಬೀರಿದ. ಆಗ ಬೀರಬಲ್ಲನು ಮಹಾರಾಜ ನನಗೆ ನಾಲ್ಕು ದಿನಗಳ ಕಾಲಾವಕಾಶವನ್ನು ನೀಡಿರಿ ನಾನು ಸರಿಯಾದ ಉತ್ತರವನ್ನು ತಮಗೆ ನೀಡುತ್ತೇನೆ ಎಂದನು. ಮರುದಿನವೇ ಬೀರಬಲ್ಲನು ತನ್ನ ಪಕ್ಕದ ಗ್ರಾಮಕ್ಕೆ ಹೋಗಿ ಅಲ್ಲಿ ಕಟುಮಸ್ತಾದ ದೇಹವನ್ನು ಹೊಂದಿದ ಫೈಲ್ವಾನ್ ಒಬ್ಬನನ್ನು ಭೇಟಿ ಮಾಡಿದ. ಆ ಪೈಲ್ವಾನನನ್ನು ಬೀರಬಲ್ಲನು ತನ್ನ ಜೊತೆಯಲ್ಲಿ ಕರೆದುಕೊಂಡು ಬಂದು, ನೀನು ನನ್ನ ಜೊತೆ ಮೂರು ದಿನ ಬಿಟ್ಟು ಅಕ್ಬರನ ದರ್ಬಾರಿಗೆ ಬರಬೇಕು. ಅದಕ್ಕಾಗಿ ನೀನು ಮೂರು ದಿನಗಳ ಕಾಲ ನನ್ನ ಜೊತೆಯಲ್ಲಿರಬೇಕು ಎಂದನು. ಅಕ್ಬರನು ನಿನ್ನ ಬಳಿ ಏನೇ ಪ್ರಶ್ನೆಯನ್ನು ಕೇಳಿದರೂ ನೀನು ಮೂಕನಾಗಿ ನಿಲ್ಲಬೇಕು, ಯಾವುದೇ ಕಾರಣಕ್ಕೂ ನೀನು ಯಾವುದೇ ರೀತಿಯ ಉತ್ತರವನ್ನು ನೀಡಬಾರದು ಎಂದು ಆತನಿಗೆ ವಿವರಿಸಿ ಹೇಳಿದ.
ಅದರಂತೆಯೇ ನಿರ್ದಿಷ್ಟ ದಿನದಂದು ಬೀರಬಲ್ಲನು ಪೈಲ್ವಾನನಿಗೆ ಐಷಾರಾಮಿ ಪೋಷಾಕನ್ನು ತೊಡಿಸಿ ದರ್ಬಾರಿಗೆ ಕರೆದುಕೊಂಡು ಬಂದ. ಈತನನ್ನು ನೋಡಿದ ಆಸ್ಥಾನದ ಎಲ್ಲರಿಗೂ ಆಶ್ಚರ್ಯವಾಗಿತ್ತು. ಅಕ್ಬರನ ಸಭೆಗೆ ರಾಜಗಾಂಭೀರ್ಯದಿಂದ ಬಂದಾಗ ಆಸ್ಥಾನದಲ್ಲಿದ್ದ ಎಲ್ಲರೂ ಎದ್ದು ನಿಂತು ಆತನಿಗೆ ಗೌರವವನ್ನು ಸಲ್ಲಿಸಿ ತಮ್ಮ ತಮ್ಮ ಸ್ಥಾನದಲ್ಲಿ ಕುಳಿತರು. ಪೈಲ್ವಾನನು ಬೀರಬಲ್‌ನ ಪಕ್ಕದಲ್ಲೇ ನಿಂತುಕೊಂಡಿದ್ದನ್ನು ನೋಡಿದ ಅಕ್ಬರನು ಆ ವ್ಯಕ್ತಿಯನ್ನು ಕಂಡು ಅಚ್ಚರಿಯಿಂದ ಈ ವ್ಯಕ್ತಿ ಯಾರೆಂದು ಬೀರಬಲ್ಲನನ್ನು ಕೇಳುತ್ತಾನೆ.
ಅದಕ್ಕೆ ಬೀರಬಲ್ಲನು ಮಹಾರಾಜ ನಾಲ್ಕು ದಿನಗಳ ಹಿಂದೆ ತಾವೊಂದು ಪ್ರಶ್ನೆಯನ್ನು ಕೇಳಿದ್ದಿರಿ, ನಿಮ್ಮ ಪ್ರಶ್ನೆಗೆ ಉತ್ತರವೇ ಈತ ಎಂದು ಹೇಳುತ್ತಾನೆ. ಅಕ್ಬರನು ಆಶ್ಚರ್ಯದಿಂದ ನನ್ನ ಪ್ರಶ್ನೆಗೂ ಈತನಿಗೂ ಏನು ಸಂಬಂಧ ಎಂದು ಕೇಳುತ್ತಾನೆ. ಆಗ ಬೀರಬಲ್ಲನು ಸಂಬಂಧವಿದೆ ಮಹಾರಾಜ, ಅಂದಿನ ಪ್ರಶ್ನೆಯನ್ನೇ ಈತನಿಗೆ ಮತ್ತೊಮ್ಮೆ ಕೇಳಿರಿ ನಿಮ್ಮ ಸಮಸ್ಯೆಗೆ ಸರಿಯಾದ ಉತ್ತರ ದೊರೆಯುತ್ತದೆ ಎಂದ. ಆಗ ಅಕ್ಬರನು ಈ ಪೈಲ್ವಾನನಿಗೆ ‘ಮೂರ್ಖರ ಜೊತೆಯಲ್ಲಿ ಕೆಲಸ ಮಾಡುವ ಸಂದರ್ಭ ಬಂದರೆ ಏನು ಮಾಡಬೇಕು?’ ಎಂದು ಪ್ರಶ್ನಿಸಿದ. ಆಗ ಆ ಪೈಲ್ವಾನನು ಕಿವಿ ಕೇಳಿಸದಂತೆ ಮೂಕನಾಗಿ ನಿಂತಿದ್ದ. ಮತ್ತೆ ಅದೇ ಪ್ರಶ್ನೆಯನ್ನು ಅಕ್ಬರನು ಸ್ವಲ್ಪ ಜೋರಾಗಿ ಕೇಳಿದ. ಆಗಲೂ ಆತ ಉತ್ತರಿಸದೆ ಕಿವುಡನಂತೆ ನಿಂತಿದ್ದ. ಮತ್ತೆ ಮತ್ತೆ ಆ ಪ್ರಶ್ನೆಯನ್ನು ಕೇಳಿದರೂ ಪೈಲ್ವಾನ ಯಾವುದೇ ಉತ್ತರವನ್ನು ನೀಡಲಿಲ್ಲ.
ಆಗ ಅಕ್ಬರನು ಬೀರಬಲ್‌ನಿಗೆ ಈತ ಏನದರೂ ಕಿವುಡನೇ? ನಾನು ಎಷ್ಟೇ ಪ್ರಶ್ನೆಯನ್ನು ಕೇಳಿದರೂ ಆತ ಉತ್ತರವನ್ನೇ ನೀಡುತ್ತಿಲ್ಲವಲ್ಲ ಎಂದು ಸಿಟ್ಟಿನಿಂದ ಕೇಳಿದ. ಆಗ ಬೀರಬಲ್ಲನು ಆ ಪೈಲ್ವಾನನು ತಮ್ಮ ಪ್ರಶ್ನೆಗೆ ಉತ್ತರವನ್ನು ನೀಡುತ್ತಿದ್ದಾನೆ. ಆದರೆ ತಾವೇ ಆತನ ಉತ್ತರವನ್ನು ಅರ್ಥ ಮಾಡಿಕೊಂಡಿಲ್ಲ, ಆತನ ಉತ್ತರ ಇಷ್ಟೇ ಮೂರ್ಖರ ಜೊತೆಯಲ್ಲಿ ಕೆಲಸ ಮಾಡುವ ಸಂದರ್ಭ ಬಂದರೆ ವಿನಾ ಚರ್ಚೆ ಮಾಡುವ ಬದಲು ಸುಮ್ಮನಿದ್ದು ಬಿಡುವುದು ಸೂಕ್ತ ಎಂದು ಬೀರಬಲ್ಲ ವಿವರಿಸಿದ. ಬೀರಬಲ್ಲನ ಉತ್ತರದಿಂದ ಅಕ್ಬರನು ಸಂತುಷ್ಟನಾಗಿ ಹತ್ತು ಬಂಗಾರದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ.
ಲೇಖನ:
ಸಂತೋಷ್ ರಾವ್ ಪೆರ್ಮುಡ,
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ

