ಅದೊಂದು ಕಾಲವಿತ್ತು. ಮಾನವನ ಬದುಕಿನ ಆರಂಭದ ದಿನಗಳು.ಗಂಡು, ಬಿಸಿಲೋ ಮಳೆಯೋ.. ಯಾವುದನ್ನೂ ಲೆಕ್ಕಿಸದೆ, ತನ್ನ ಮತ್ತು ತನ್ನ ಸಂಗಾತಿಯ ತುತ್ತಿನ ಚೀಲ ತುಂಬಿಸಲು ಹೋರಾಟ ನಡೆಸುತ್ತಿದ್ದ ದಿನಗಳು. ಹೆಣ್ಣು ಅವನ ಸಂತತಿ ಮುನ್ನೆಡೆಸುವ ಜವಾಬ್ದಾರಿ ಹೊತ್ತ ದಿನಗಳು.
ಹಾಗೆ ಕಾಲಚಕ್ರ ಉರುಳ ತೊಡಗಿತು ದಿನದಿಂದ ದಿನಕ್ಕೆ ಮಾನವನ ಜೀವನ ಮಟ್ಟ ಮೇಲೇರ ತೊಡಗಿತು. ಅವನ ರೀತಿ ನೀತಿ, ಬದುಕಿನ ಶೈಲಿ.. ಎಲ್ಲೆಲ್ಲೂ ಬದಲಾವಣೆಯ ಗಾಳಿ.ಆ ಕಾಲಘಟ್ಟದಲ್ಲಿ.. ದೈಹಿಕವಾಗಿ ಹೆಣ್ಣಿಗಿಂತ ಸದೃಢವಾಗಿದ್ದು, ಬಿಸಿಲು ಬೆಂಕಿಯಲ್ಲಿ ದುಡಿಯುವ ತಾನು ಹೆಣ್ಣಿಗಿಂತ ಶ್ರೇಷ್ಠ ಎಂಬ ಭಾವ ಗಂಡಿನಲ್ಲಿ ಬಲವಾಗಿ ಬೇರೂರಿತು.ತನ್ನ ಮತ್ತು ತನ್ನ ಮಕ್ಕಳನ್ನು ಜೋಪಾನ ಮಾಡುವ ಗಂಡು ತನಗಿಂತಲೂ ಉಚ್ಚನಿರಬಹುದು ಎಂಬ ಅನಿಸಿಕೆ ಹೆಣ್ಣಿನಲ್ಲೂ.
ಶ್ರೇಷ್ಠವಾದುದನ್ನೇ ಬಯಸೋದು ಮನುಜ ಸಹಜ ಗುಣ ತಾನೇ. ಹಾಗೆ ತಮಗೆ ಹುಟ್ಟುವ ಸಂತತಿಯಲ್ಲೂ ಶ್ರೇಷ್ಠವಾದ ಗಂಡು ಸಂತಾನವೇ ತಮ್ಮ ಮನೆ ತುಂಬಲೆಂದು ಬಯಸ ತೊಡಗಿದರು. ಬಯಕೆಯೇನೋ ಸಹಜ. ಆದರೆ ಲಿಂಗಪತ್ತೆ ಭ್ರೂಣ ಹತ್ಯೆ.. ಯಾವುದರ ಜ್ಞಾನವೂ ಇಲ್ಲದ ಕಾಲದಲ್ಲಿ ಒಡಲಲ್ಲಿ ಚಿಗುರಿದ್ದನ್ನು ಭೂಮಿಗಿಳಿಸಲೇ ಬೇಕಿತ್ತು. ಗಂಡು ಹುಟ್ಟಿತೋ ಸಂಭ್ರಮ. ತಮ್ಮ ಬಾಳ ಸಂಜೆಗೆ ಆಸರೆ ತಮ್ಮ ಕ್ರಿಯಾ ಕರ್ಮ ನಡೆಸಿ ಮುಕ್ತಿ ಕೊಡುವವನು. ಏನೋ ಒಂದು ಧನ್ಯತಾ ಭಾವ. ಹೆಣ್ಣು ಹುಟ್ಟಿತೋ.. ಇದರಿಂದ ತಮಗೇನೂ ಪ್ರಯೋಜವಿಲ್ಲ. ಇಂದಲ್ಲ ನಾಳೆ ಇನ್ನೊಂದು ಮನೆಗೆ ಕಳುಹಿಸಲೇ ಬೇಕು. ಇದು ತಮ್ಮದಲ್ಲ ಎಂಬ ಭಾವ.
ನಮ್ಮದಲ್ಲದ ವಸ್ತುವನ್ನು ನಾವು ನೋಡುವ ದ್ರಷ್ಠಿ ಕೋನ ಹೇಗಿರತ್ತೆ.. ಎಲ್ಲರಿಗೂ ಗೊತ್ತಿರುವ ವಿಷಯ. ಅದು ಯಾವ ಮಟ್ಟದಲ್ಲಿ ಇರುತ್ತಿತ್ತೆಂದರೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗಲೂ ಗಟ್ಟಿ ಮೊಸರು ತುಪ್ಪ. ಹೀಗೆ ಉತ್ತಮವಾದದ್ದು ಅನ್ನುವುದು ಏನೇನಿದೆಯೋ ಅದೆಲ್ಲ ವಂಶ ಬೆಳಗುವ ಗಂಡು ಮಗುವಿಗೆ. ವಿದ್ಯೆ ಕೂಡ ಗಂಡಿಗೆ ಮಾತ್ರ ಸೀಮಿತವಾಗಿತ್ತು. ಮೆಟ್ಟಿದ ಮನೆಯ ಅಡಿಗೆ ಮನೆಯಲ್ಲಿ ಕಸ ಮುಸುರೆ ಮಾಡ್ತಾ ಮಕ್ಕಳ ಸಿಂಬಳ ತೆಗೆಯುತ್ತಾ ಕುಂಡೆ ತೊಳೆಸುವ ಕಾಯಕ ಮಾಡ್ಕೊಂಡಿರಬೇಕಾದ ಹೆಣ್ಣಿಗೇಕೆ ವಿದ್ಯೆ ಅನ್ನೋ ವಿತಂಡವಾದ.
ಇಂಥ ದಿನದಲ್ಲಿ ಹುಟ್ಟಿದ್ದೇ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ನುಡಿ. ತನ್ನ ಸ್ವಾರ್ಥ, ತನ್ನ ಅನುಕೂಲಕ್ಕೆ ತಕ್ಕಂತೆ ನುಡಿ ಮುತ್ತುಗಳನ್ನು ಪೋಣಿಸುವುದರಲ್ಲಿ ಗಂಡು ನಿಸ್ಸಿಮ. ಮನು ಚರಿತ್ರೆ ನಮಗಿದನ್ನು ಅರ್ಥ ಮಾಡಿಸಿದೆ. ಕುತ್ತಿಗೆಗೆ ಕಟ್ಟಿದ ಕುಂಟೆ.. ಎಂಬಂತೆ.. ಹೆಣ್ಣು ಮಗುವಿನ ಜವಾಬ್ದಾರಿಯಿಂದ ಮುಕ್ತರಾಗುವ ತವಕ ಹೆತ್ತವರಿಗೆ. ದಾಂಪತ್ಯದ ಸರಿಯಾದ ಕಲ್ಪನೆಯೂ ಮೂಡಿರದ ಎಳೆ ಜೀವವನ್ನು ಮದುವೆಎಂಬ ಸೂತ್ರದಲ್ಲಿ ಬಿಗಿದು ತಾವು ನಿರಾಳರಾಗುತ್ತಿದ್ದರು. ಒಮ್ಮೆ ಕೈತೊಳೆದು ಕೊಂಡ ಮೇಲೆ ಮತ್ತೆ ಕೈಗಂಟೀತು ಎಂಬ ಭಯಕ್ಕೆ ಬಿದ್ದು ಮುನ್ನೆಚ್ಚರಿಕೆಯಾಗಿ… ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿನ ಈಟಿಯಿಂದ ಹೆಣ್ಣಿನೆದೆಯನ್ನು ತಿವಿದೆ ಹೊಸಿಲು ದಾಟಿಸುತಿದ್ದರು. ಈ ಮನೆಗೆ ನೀನಿನ್ನು ಅತಿಥಿ ಇನ್ನು ಮೆಟ್ಟಿದ ಮನೆಯೇ ನಿನ್ನ ಪಾಲಿಗೆ ಸರ್ವಸ್ವ. ಕಷ್ಟವೋ ಸುಖವೊ ಅಲ್ಲಿಯೇ ಬದುಕು. ಇದು ಹೆಣ್ಣಿನ ಕಿವಿ ತುಂಬುತಿದ್ದ ನಿತ್ಯದ ಗೀತೋಪದೇಶ.
ಪುಣ್ಯ ವಿಶೇಷವಿದ್ದರೆ ಮೆಟ್ಟಿದ ಮನೆಯಲ್ಲಿ ಆಕೆಗೊಂದು ಸ್ಥಾನ ಸಿಗುತಿತ್ತು.ಉಳಿದವರ ಪಾಡು ನಾಯಿ ಪಾಡು. ಹುಟ್ಟಿದ ಮನೆಯಲ್ಲೂ ಸ್ಥಾನವಿರದೆ ಮೆಟ್ಟಿದ ಮನೆಯಲ್ಲಿ ಈಗಾಗಲೇ ಸರ್ವಾಧಿಕಾರಿಯಾಗಿ ಪ್ರತಿಷ್ಠಾಪಿಸಲ್ಪಟ್ಟ ಅತ್ತೆಯ ಅಟ್ಟಹಾಸ.. ಅಲ್ಲೂ ಇಲ್ಲ ಇಲ್ಲೂ ಸಲ್ಲ ತ್ರಿಶಂಕು ಸ್ವರ್ಗ.ಪರಿಸ್ಥಿತಿ ವಿಕೋಪಕ್ಕೆ ಹೋದಾಗ.. ಹೆಣ್ಣಿಗಿದ್ದಿದ್ದು ಒಂದೇ ದಾರಿ ಆತ್ಮಹತ್ಯೆ. ಸ್ವತಂತ್ರವಾಗಿ ಬದುಕುವ ಶಕ್ತಿಯೂ ಇಲ್ಲದೆ ತವರಿನ ಬೆಂಬಲವೂ ಸಿಗದಾಗ ಅಸಹಾಯಕರಾಗಿ ಬದುಕ ಪಯಣ ಮುಗಿಸಿದವರೆಷ್ಟೋ ಮಂದಿ. ಹಾಗೆ ಗಂಡ ಮಡಿದರಂತೂ ಆಕೆ ಸ್ಥಿತಿ ಇನ್ನೂ ಶೋಚನೀಯ. ನಮ್ಮ ವಸ್ತುವೇ ಹೋದ ಮೇಲೆ ನೀನ್ಯಾಕೆ ಇಲ್ಲಿ.. ಅನ್ನೋ ಮೆಟ್ಟಿದ ಮನೆ, ಅನ್ಯ ಮಾರ್ಗವಿಲ್ಲದೆ ತವರಿನವರು ಕರೆದುತಂದರೂ ಆಕೆಯ ಸ್ಥಾನ ತೊತ್ತಿಗಿಂತ ಮೇಲೇನಲ್ಲ. ಅಣ್ಣ ತಮ್ಮಂದಿರ ಹೆಂಡಂದಿರ ಕೆಂಗಣ್ಣಿಗೆ ಗುರಿಯಾಗುತ್ತ ಅವರ, ಅವರ ಮಕ್ಕಳ ಚಾಕರಿ ಮಾಡುವ ಸಂಬಳವಿಲ್ಲದ ಬಿಟ್ಟಿಯಾಳು ಅಷ್ಟೇ. ತಿರುಗುವ ಕಾಲಚಕ್ರ ಹೆಣ್ಣಿನ ಬದುಕಿನಲ್ಲೂ ಬದಲಾವಣೆ ತಂದಿತು. ಅಲ್ಪ ಸ್ವಲ್ಪ ವಿದ್ಯಾಭ್ಯಾಸ ಹೆಣ್ಣಿಗೂ ಇರಲಿ ಎಂಬಲ್ಲಿಂದ ಹೆಣ್ಣಿನ ಬದುಕಿನ ಭಾಗ್ಯದ ಬಾಗಿಲು ನಿಧಾನವಾಗಿ ತೆರೆಯಲಾರಂಭಿಸಿತು. ಇಂದು ಯಾವ ಮಟ್ಟಕ್ಕೆ ಬಂದು ಮುಟ್ಟಿದ್ದೇವೆ ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬ ಮಾತಿದೆ. ಅದನ್ನ ಹೆಣ್ಣು ಕೈಯಾಡಿಸದ ಕ್ಷೇತ್ರವಿಲ್ಲ ಅಂತ ಬದಲಾಯಿಸಿಕೊಳ್ಳಬಹುದು. ಹೌದು, ಇಂದಿನ ಸಾಧನೆ ಗಗನ ಚುಂಬಿ. ಅಂದು ಹುಟ್ಟಿದ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ… ಈ ಮಾತು ಇಂದು ಅರ್ಥ ಕಳೆದುಕೊಂಡಿದೆ.
ಹೆಣ್ಣು ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ.. ಬೆಳಕಾಗಿದ್ದಾಳೆ.ಯಾವ ತಂದೆ ತಾಯಂದಿರೂ ಹೆಣ್ಣು ಗಂಡು ಎಂಬ ಬೇಧ ಭಾವ ಮಾಡುತ್ತಿಲ್ಲ. ಗಂಡಿಗೆ ಸರಿ ಸಮಾನವಾಗಿ ವಿದ್ಯಾಭ್ಯಾಸ, ಆಸ್ತಿಯಲ್ಲೂ ಸರಿ ಪಾಲು ಕೊಟ್ಟು,ಮದುವೆಯ ನಂತರದ ದಿನಗಳಲ್ಲೂ ಅವಳ ಪ್ರತಿ ಕಷ್ಟ ಸುಖಕ್ಕೆ ಜೊತೆಯಾಗಿ ನಾವಿದ್ದೇವೆ. ನೀನೆಂದೂ ಕುಸಿಯದಿರು, ಬಳ್ಳಿಗೆ ಕಾಯಿ ಎಂದಿಗೂ ಭಾರವಲ್ಲ ಎಂಬ ಭಾವವನ್ನು ಮೂಡಿಸುತ್ತ ಬೆನ್ನೆಲುಬಾಗಿ ನಿಲ್ಲುತಿದ್ದಾರೆ. ಇದು ಹೆಣ್ಣಿಗೆ ನೂರಾನೆಯ ಬಲ ತಂದು ಕೊಟ್ಟಿದೆ. ಗಂಡಿಗೆ ಸರಿ ಸಮನಾಗಿ ಹೊರಗೂ ದುಡಿಯುತ್ತ ಮನೆಯನ್ನೂ ಸಂಭಾಳಿಸುತ್ತ.. ಹಾಗೆ ಹೆತ್ತವರನ್ನು ಯಾವ ಕಾಲಕ್ಕೂ ಬಿಟ್ಟು ಕೊಡದೆ ಎರಡೂ ಮನೆಗೂ ನ್ಯಾಯ ಕೊಡುತಿದ್ದಾಳೆ.
ಹೆಣ್ಣು ಹುಣ್ಣಲ್ಲ ಬಾಳಿನ ಕಣ್ಣುಎನ್ನುವುದನ್ನ ನಾವು ಒಪ್ಪಿಕೊಂಡಿದ್ದೇವೆ. ಹೆಣ್ಣಾ? ಹೇಗೂ ಪರರ ಮನೆಗೆ ಕಳಿಸೋದು ಎಂದು ಮೂಗು ಮುರಿಯುತಿದ್ದ ಕಾಲ ಹೋಗಿ ಗಂಡು ಮಗು ಇರದಿದ್ದರೂ ಪರವಾಗಿಲ್ಲ ಅಳಿಯ ಮಗನಾದಾನು.. ಆದರೆ ಕೊನೆ ತನಕ ಹೆತ್ತವರ ಕಷ್ಟ ಸುಖಕ್ಕೆ ಸ್ಪಂದಿಸುವ ಹೆಣ್ಣು ಮಗು ಬೇಕೆ ಬೇಕು ಎಂಬ ಹಂತಕ್ಕೆ ಬಂದಿದ್ದೇವೆ. ಇದು ಹೆಣ್ಣು ಜನ್ಮಕ್ಕೆ ದೊರೆತ ಸರ್ವೋಚ್ಚ ಸನ್ಮಾನ.
ಇದು ರಾತ್ರಿ ಬೆಳಗಾಗುವುದರಲ್ಲಿ ಸಿಂಡ್ರೆಲ್ಲಾ ಮಾಯಾ ದಂಡದಿಂದ ಆದ ಚಮತ್ಕಾರ ಅಲ್ಲ. ಕಲ್ಲು ಮುಳ್ಳಿನ ಹಾದಿಯಲ್ಲಿ ಬಿದ್ದು ಬಿದ್ದು ಛಲ ಬಿಡದೆ ಮಾಡಿದ ಸಾಧನೆಯ ಫಲ. ಪಡೆದ ವಿದ್ಯೆ ಹೆಣ್ಣಿನ ಪಾಲಿಗೆ ಬಾಳಿನ ಯುದ್ಧ ಗೆಲ್ಲುವ ಬ್ರಹ್ಮಾಸ್ತ್ರವಾಯಿತು. ತವರಿನವರು ಹುಣ್ಣಿನಂತೆ ನೋಡದೆ.. ಬೆನ್ನೆಲುಬಾಗಿ ನಿಂತರೆ ಮಂಗಳನಂಗಳದಲ್ಲೂ ಹೆಜ್ಜೆಯೂರಿ ಬಂದಾಳು.. ತೊಟ್ಟಿಲು ತೂಗುವ ಅದೇ ಕೈಗಳಿಂದ ಕೋವಿ ಹಿಡಿದು ದೇಶದ ಗಡಿಯನ್ನೂ ಕಾದಾಳು ಎನ್ನುವುದು ಸಾಬೀತಾಗಿದೆ.
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುತ್ತ ನಮ್ಮ ಕಣ್ಣನ್ನು ನಾವೇ ಚುಚ್ಚಿ ಕೊಳ್ಳುವ ಮೂರ್ಖರಾಗದೆ ತವರಿನ ಬಾಗಿಲು ಎಂದೆಂದೂ ನಿನ್ನ ಪಾಲಿಗೆ ತೆರೆದೇ ಇರುವಂತದ್ದು ಮಗಳೇ ಎಂಬ ಭದ್ರತೆಯ ಭಾವನೆ ಮೂಡಿಸಿ ಅವಳ ಬದುಕನ್ನು ಬಂಗಾರವಾಗಿಸೋಣ.