ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಸವನಬಾಗೇವಾಡಿಯಲ್ಲಿ ಬಿಜೆಪಿ ಪ್ರತಿಭಟನೆ
ಬಸವನಬಾಗೇವಾಡಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಪಾರಸ್ಸು ಮಾಡಬೇಕೆಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಮಂಡಳವು ವಿದ್ಯಾರ್ಥಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ವಿಸರ್ಜನೆ ಮಾಡಬೇಕು. ರಾಜ್ಯದಲ್ಲಿ ತಮ್ಮ ಅಧಿಕಾರ ಹಾಗೂ ಮತದ ಆಸೆಗಾಗಿ ಸರ್ಕಾರ ಸುಮ್ಮನೆ ಕುಳಿತುಕೊಂಡಿದೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಹಿಂದುಗಳು ಜೀವನ ಸಾಗಿಸುವದು ಕಷ್ಟವಾಗಬಹುದು. ಹಾಡುಹಗಲೇ ಇಂತಹ ಘಟನೆ ನಡೆದಿರುವುದು ಖಂಡನೀಯ. ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗೆ ಮೇಲೆ ಸರ್ಕಾರ ಗಂಭೀರ ಕಾನೂನು ಕ್ರಮ ತೆಗೆದುಕೊಂಡು ಕಠಿಣ ಶಿಕ್ಷೆ ವಿಧಿಸಬೇಕು.
ಮುಖಂಡ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪಾಕಿಸ್ತಾನ ಆಡಳಿತ ಹುಟ್ಟುಕೊಂಡಿದೆ ಅನ್ನುವ ರೀತಿಯಲ್ಲಿ ಘಟನೆಗಳು ಘಟಿಸುತ್ತಿವೆ. ನಿನ್ನೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿಗೆ ಪ್ರೀತಿಸುವಂತೆ ಒತ್ತಾಯಿಸಿ ಫಯಾಜ್ ಅನ್ನುವ ವ್ಯಕ್ತಿ ಚಾಕುವಿನಿಂದ ೯ ಸಲ ಇರಿದು ಕೊಲೆ ಮಾಡಿದ್ದಾನೆ. ಇಂತಹ ಘಟನೆ ನಡೆದಿರುವದು ಖಂಡನೀಯ. ಸಾರ್ವಜನಿಕವಾಗಿ ಕೊಲೆ ಮಾಡಿರುವ ವ್ಯಕ್ತಿಯನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಬೇಕು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾಂದ್ ಎಂಬ ಘೋಷಣೆ, ಬೆಂಗಳೂರಿನ ಒಂದು ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಘಟನೆ, ಶ್ರೀರಾಮನವಮಿಯಂದು ಜೈ ಶ್ರೀರಾಮ ಘೋಷಣೆ ಕೂಗಿದವರ ಮೇಲೆ ಹಲ್ಲೆ ಘಟನೆಯಂತಹ ಘಟನೆಗಳು ನಡೆಯುತ್ತಿರುವುದು ತಾಲಿಬಾನ ಸಂಸ್ಕ್ರತಿ ಕಂಡು ಬರುತ್ತಿದೆ. ಸಿಎಂ ಸಿದ್ದರಾಮಯ್ಯನವರು ಕಠೋರ ಕಾನೂನು ಜಾರಿಗೆ ತರುವ ಮೂಲಕ ಈ ತಾಲಿಬಾನ ಸಂಸ್ಕ್ರತಿಯನ್ನು ಮಟ್ಟ ಹಾಕುವ ಕೆಲಸ ಮಾಡಬೇಕು. ಉತ್ತರಪ್ರದೇಶದಲ್ಲಿ ಸಿಎಂ ಯೋಗೀಜಿ ಜಾರಿಗೆ ತಂದಿರುವ ರೀತಿಯಲ್ಲಿ ಕಠೋರ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಸಿದ್ರಾಮ ಕಾಖಂಡಕಿ, ಮುಖಂಡರಾದ ಬಸವರಾಜ ಬಿಜಾಪುರ, ಪ್ರವೀಣ ಪವಾರ, ಶಿವಪುತ್ರ ಕೆಂಭಾವಿ, ಬಾಬು ನಿಕ್ಕಂ, ಕಲ್ಲು ಸೊನ್ನದ, ಮಲ್ಲಿಕಾರ್ಜುನ ದೇವರಮನಿ, ಶಿವಶಂಕ್ರೆಯ್ಯ ಹಿರೇಮಠ, ಸಂತೋಷ ನಾಯಕ, ರಾಜು ಮುಳವಾಡ, ಮುತ್ತುರಾಜ ಹಾಲಿಹಾಳ, ನಾಗರಾಜ ದೇವಕರ,ದಯಾನಂದ ಸಾರವಾಡ, ಅಶೋಕ ಮಿಣಜಗಿ, ಯಮನೂರಿ ವಡ್ಡರ, ಶ್ರೀಶೈಲ ಬಂಚೋಡಿ, ಪದ್ಮರಾಜ ಒಡೆಯರ, ಸುರೇಶ ಹೂಗಾರ, ಗುಂಡು ಗಾಯಕವಾಡ, ಮಹೇಶ ಹಿರೇಕುರಬರ ಇತರರು ಭಾಗವಹಿಸಿದ್ದರು.

