ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ
ಕೊಲ್ಕತ್ತಾ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ ಕೊಲ್ಕತ್ತಾ ಕೋರ್ಟ್ ಶುಕ್ರವಾರ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್‌ಐಎಗೆ ಅನುಮತಿ ನೀಡಿದೆ.
ಬಂಧಿತ ಆರೋಪಿಗಳಾದ ಮುಸಾವಿರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ತಾಹಾನನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿ ಮೇರೆಗೆ ಸಿಟಿ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ಗೆ ಅನುಮತಿ ನೀಡಿದ್ದಾರೆ. ಕೋರ್ಟ್ ನಿಂದ ವಶಕ್ಕೆ ಪಡೆದು ಆರೋಪಿಗಳನ್ನು ಎನ್ಐಎ ತಂಡ ಬೆಂಗಳೂರಿಗೆ ಕರೆತರಲಿದೆ ಎನ್ನಲಾಗಿದೆ.

