ಮಾಜಿ ಶಾಸಕ ರಮೇಶ ಭೂಸನೂರ ಗೆ ಶಾಸಕ ಅಶೋಕ ಮನಗೂಳಿ ಸವಾಲು
ಸಿಂದಗಿ: ಜನತೆ ನನ್ನನ್ನು ಆರಿಸಿದ್ದು ಶಾಸಕರಾಗಿ ಮೆರೆಯಲು ಅಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ. ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬುದು ಸುಳ್ಳು. ಇದರಿಂದ ಸಾಕಷ್ಟು ಬಡ ಕುಟುಂಬಗಳು ನೆಮ್ಮದಿಯ ನಿಟ್ಟುಸಿರಿನ ಜೀವನ ನಡೆಸುತ್ತಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೨೫ಕೋಟಿ ಅನುದಾನ ತಂದಿರುವುದು ಸುಳ್ಳು ಎಂದು ಹೇಳಿ ದಾಖಲೆಗಳನ್ನು ಸಾಬೀತುಪಡಿಸಲಿ ಎಂದು ಮಾಜಿ ಶಾಸಕರು ಸವಾಲು ಹಾಕಿದ್ದನ್ನು ಪಕ್ಷದ ಮುಖಂಡರು ಸವಾಲಾಗಿ ಸ್ವೀಕರಿಸಿ, ಸಿಂದಗಿ ಮತಕ್ಷೇತ್ರಕ್ಕೆ ತಂದಿರುವ ೧೨೫ ಕೋಟಿ ಅನುದಾನದ ದಾಖಲೆಗಳನ್ನು ಮಾಧ್ಯಮದ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಅವರು ೨೦೦೮-೨೦೧೩, ೨೦೧೩-೨೦೧೮, ೨೦೨೧-೨೩ ೧೭೬ ತಿಂಗಳ ಅಧಿಕಾರ ಮಾಡಿದ್ದಾರೆ. ಆದರೆ ನಾನು ಇನ್ನೂ ೯ ತಿಂಗಳ ಅಧಿಕಾರ ಹಿಡಿದ ಕೂಸು. ರಾಜಕೀಯ ಅನುಭವವಿರುವ ಭೂಸನೂರ ಇಂತಹ ಹೇಳಿಕೆ ಕೊಡುವುದು ಸೂಕ್ತವಲ್ಲ ಎಂದು ಹರಿಹಾಯ್ದರು.
ಸಿಂದಗಿ ಮತಕ್ಷೇತ್ರಕ್ಕೆ ರೂ. ೨೩೬ಕೋಟಿ ಅನುದಾನವನ್ನು ಮಂಜೂರು ಮಾಡಿಸಿರುವೆ. ಅದರಲ್ಲಿ ಮತಕ್ಷೇತ್ರದ ಹಳ್ಳಿಗಳಲ್ಲಿ ಸಿಸಿ ರಸ್ತೆಗೆ ೧೪ಕೋಟಿ, ದೇವಸ್ಥಾನಗಳ ಸಮುದಾಯ ಭವನ ನಿರ್ಮಾಕ್ಕಾಗಿ ೮.೬೫ ಕೋಟಿ, ಅಲ್ಪ ಸಂಖ್ಯಾತರ ಸಮುದಾಯ ಭವನ, ಈದಗಾ ಅಭಿವೃದ್ಧಿಗಾಗಿ ೨.೩೫ಕೋಟಿ, ಕೋರವಾರ ಬ್ರ್ಯಾಂಚ್ ಕ್ಯಾನಲಗೆ ರೂ. ೯೬.೬೬ ಕೋಟಿ, ನಗರದ ಮುಖ್ಯ ರಸ್ತೆಗಳ ಬೀದಿ ದೀಪಗಳಿಗೆ ೫ ಕೋಟಿ, ಮುಖ್ಯ ರಸ್ತೆಗಳ ಡಿವೈಡರ್ ನಿರ್ಮಾಣಕ್ಕೆ ೧.೨೫ ಕೋಟಿ, ಆಲಮೇಲ ಕೆರೆ ಅಭಿವೃದ್ಧಿಗೆ ೩.೫೦ ಕೋಟಿ, ಆಲಮೇಲ ತಾಲೂಕು ಪಂಚಾಯತ್ ಅನುದಾನ ೨.೧೦ಕೋಟಿ, ಸಿಂದಗಿ ಸರಕಾರಿ ಆಸ್ಪತ್ರೆಗೆ ಅಭಿವೃದ್ದಿಗೆ ೧.೮೪ಕೋಟಿ ಸೇರಿ ವಿವಿಧ ಕಾಮಗಾರಿಗಳಿಗೆ ಒಟ್ಟು ಮತಕ್ಷೇತ್ರಕ್ಕೆ ಮೇ೫, ೨೦೨೩ರಿಂದ ಪ್ರಸ್ತುತದವರೆಗೆ ರೂ. ೨೩೬ಕೋಟಿ ಅನುದಾನ ಮಂಜೂರು ಮಾಡಿಸಿರುವ ದಾಖಲೆ ಇದೆ ಎಂದು ಗುಡುಗಿದರು.
ಪಟ್ಟಣದ ಸರಕಾರಿ ಪಪೂ ಕಾಲೇಜಿನ ನಾಲ್ಕು ಕೋಣೆಗಳು ನಿರ್ಮಾಣ ಟೆಂಡೆರ್ ಪ್ರಗತಿಯಲ್ಲಿದೆ. ಸೋಮಜಾಳ, ಸುರಗಿಹಳ್ಳಿ, ಗಣಿಹಾರ, ಕೋಕಟನೂರ ಆರ್‌ಎಮ್‌ಎಸ್‌ಎ ಶಾಲಾ ಕಟ್ಟಡ ನಿರ್ಮಾಣ ಟೆಂಡರ್ ಪ್ರಗತಿಯಲ್ಲಿದೆ. ಬಿಜೆಪಿ ಅವಧಿಯಲ್ಲಿನ ರಸ್ತೆಗಳ ಪರಿಸ್ಥಿತಿ ಹೇಳತೀರದು. ಗುತ್ತಿಗೆದಾರರು ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಕಾರ್ಯ ಮಾಡಿದ್ದೇವೆ ಇನ್ನೂ ಬಿಲ್ ಆಗಿಲ್ಲವೆಂದು ಗೋಳು ತೋಡಿಕೊಳ್ಳುತಿದ್ದಾರೆ.
ತಮ್ಮ ಅಧಿಕಾರದ ಅವಧಿಯಲ್ಲಿ ೨ಲಕ್ಷದ ೨೦ಸಾವಿರದ ಕೋಟಿ ಅನುದಾನ ರಹಿತ ಕಾಮಗಾರಿ ಮಾಡಿದೆ. ಆಲಮೇಲ ಪಟ್ಟಣಕ್ಕೆ ೨ಸಾವಿರ ಮನೆ ಮತ್ತು ಸಿಂದಗಿ ನಗರಕ್ಕೆ ೫ಸಾವಿರ ಮನೆ ಮನೆಗಳನ್ನು ತಂದಿರುವುದಾಗಿ ಹೇಳಿದ ಅವರು ಅದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಕೆರೂರ, ಗುತ್ತರಗಿ, ಹಂಚಿನಾಳ ಇಂದು ಸಿಂದಗಿ ತಾಲೂಕಿಗೆ ಸೇರಿಸಲು ನಾವೇ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಿದ್ದೇವೆಂದು ಬಿಜೆಪಿ ಜಂಬ ಕೊಚ್ಚಿಕೊಳ್ಳುತ್ತಿದೆ. ಆದರೆ ಬಿಜೆಪಿ ಇಲ್ಲಿ ಕೇವಲ ಲೈನವೌಟ್ ಹಾಕಿದೆ. ಬರೀ ಪತ್ರಕೊಟ್ಟರೇ ಸಾಲದು. ಅದನ್ನು ಅನುಸರಿಸಬೇಕು. ಕಳೆದ ಚುನಾವಣಾ ಪ್ರಚಾರಕ್ಕೆ ಹಳ್ಳಿಗಳಿಗೆ ಭೇಟಿದ ಸಂದರ್ಭದಲ್ಲಿ ಮಾತು ಕೊಟ್ಟಿದ್ದೆ. ಆ ಮಾತನ್ನು ಇದೀಗ ಈಡೇರಿಸಿದ್ದೇನೆ ಎಂದರು.
ದ್ವೇಷ ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳುವವರು ಉದಾಹರಣೆಗೆ ಒಂದಾದರೂ ತೋರಿಸಲಿ. ಇನ್ನು ಸಾಸಾಬಾಳ ಮತ್ತು ಹಂದಿಗನೂರ ಗ್ರಾಮಗಳ ರೇಷನ್ ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲವೆಂದು ಅಧಿಕಾರಿಗಳ ಪತ್ರದ ಆದೇಶದಂತೆ ರದ್ದಾಗಿದೆ ವಿನಃ ಅದರಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿರಬಹುದು. ಟೀಕೆ ಮಾಡುವ ಮೊದಲು ಅದರಲ್ಲಿ ಸತ್ಯತೆ ಇದೆ ಇಲ್ಲವೋ ಎಂಬುದನ್ನು ಪರೀಕ್ಷಿಸಿ. ಟೀಕೆ ಯಾವಾಗಲೂ ಆರೋಗ್ಯಕರವಾಗಿರಲಿ ಎಂದು ಸಲಹೆ ನೀಡಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ, ಪುರಸಭೆ ಸದಸ್ಯ ಸಂದೀಪ ಚೌರ, ವಾಯ್.ಸಿ.ಮಯೂರ, ಸುರೇಶ ಮಳಲಿ, ರಾಜಶೇಖರ ಕೂಚಬಾಳ, ಎಂ.ಎ.ಖತೀಬ, ಮಹ್ಮದಪಟೇಲ್ ಬಿರಾದಾರ, ಜಯಶ್ರೀ ಹದನೂರ, ಮಲ್ಲಣ್ಣ ಸಾಲಿ ಸೇರಿದಂತೆ ಅನೇಕರು ಇದ್ದರು.

