ಯಲಗೂರ: ವಿಶಾಲ ಪಾರ್ಕಿಂಗ್ ವ್ಯವಸ್ಥೆ, ದೇವಸ್ಥಾನ ಪ್ರವೇಶಕ್ಕೆ ಮತ್ತೊಂದು ಮಾರ್ಗ, ಹಳೆ ಕಟ್ಟಡಗಳ ತೆರವು, ಯಾತ್ರಿ ನಿವಾಸ ಪೂರ್ಣ, ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಹನುಮ ನೆಲೆಸಿದ ಸುಕ್ಷೇತ್ರ ಯಲಗೂರ ಗ್ರಾಮದಲ್ಲಿ ಕಾಣುತ್ತೇವೆ.
ಕಳೆದ ವರ್ಷ ದೇವಸ್ಥಾನದ ಪರಿಸರವನ್ನೇ ಬದಲಾಯಿಸಿದ್ದ ಭಕ್ತ ಸಮೂಹ ಈ ಬಾರಿ ಈ ಬಾರಿ ಮೂಲಸೌಕರ್ಯ ವಿಸ್ತರಣೆಗೆ ಹೆಚ್ಚು ಒತ್ತು ನೀಡಿ ಕಾರ್ಯನಿರ್ವಹಿಸಿದೆ. ಶೌಚಾಲಯಗಳು, ಶುದ್ಧ ಕುಡಿಯುವ ನೀರು, ನದಿ ಬಳಿ ಸ್ನಾನಘಟ್ಟಗಳು, ಸಮುದಾಯ ಭವನ, ಒಂದಾ ಎರಡಾ…ನಾನಾ ಕಾಮಗಾರಿಗಳು ಗ್ರಾಮದ ತುಂಬಾ ಕಾಣುತ್ತಿವೆ.
ಈ ಪ್ರಗತಿಗೆ ದೇವಸ್ಥಾನದ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ಮುಖಂಡತ್ವವೇ ಕಾರಣವಾದರೂ, ಇವರಿಗೆ ದೇವಾಲಯ ಸಮಿತಿಯ ಅಧ್ಯಕ್ಷ ಅನಂತ ಓಂಕಾರ ಹಾಗೂ ಗ್ರಾಮದ ಹಲವು ಮುಖಂಡರು ಒಕ್ಕೋರಲಿನಿಂದ ಇವರ ಅಭಿವೃದ್ಧಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಕಾಮಗಾರಿಗೆ ತಕ್ಕಂತೆ ಶಾಸಕ ಸಿ.ಎಸ್. ನಾಡಗೌಡ ಅವರು ಭಕ್ತಾದಿಗಳ ಬೇಡಿಕೆಗೆ ಅಸ್ತು ಎಂದು ಕೋಟ್ಯಂತರ ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ವಿಶಾಲ ಪಾರ್ಕಿಂಗ್ ವ್ಯವಸ್ಥೆ:
ಇಕ್ಕಟ್ಟಾದ ಪಾರ್ಕಿಂಗ್ ವ್ಯವಸ್ಥೆಗೆ ತಿಲಾಂಜಲಿ ಇಡಲು, ಮೊದಲಿದ್ದ ಗ್ರಾಮ ಪಂಚಾಯ್ತಿ ಕಟ್ಟಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸೇರಿದಂತೆ ನಾನಾ ಶಿಥಿಲಾವಸ್ಥೆಯ ಕಟ್ಟಡಗಳನ್ನು ತೆರವುಗೊಳಿಸಿ, ಅಲ್ಲಿ ಲಭ್ಯವಾದ ವಿಶಾಲ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ೮ ಲಕ್ಷ ರೂ ವೆಚ್ಚದಲ್ಲಿ ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಎರಡನೇ ಪ್ರವೇಶ ದ್ವಾರಬಾಗಿಲು:
ಈಗ ದೇವಸ್ಥಾನದ ದಕ್ಷಿಣ ದಿಕ್ಕಿಗೆ ದ್ವಾರಬಾಗಿಲು, ಪ್ರವೇಶ ದ್ವಾರವಿದೆ. ಆದರೆ ದೇವಸ್ಥಾನದ ಪೂರ್ವಕ್ಕೆ ಇಲ್ಲಿಯ ಸರ್ಕಾರಿ ಕನ್ನಡ ಶಾಲೆಯ ಪಕ್ಕದಲ್ಲಿಯೇ ೨೫ ಲಕ್ಷ ರೂ ವೆಚ್ಚದಲ್ಲಿ ದ್ವಾರಬಾಗಿಲು ನಿರ್ಮಿಸಲಾಗುತ್ತದೆ. ಈಗ ಅಲ್ಲಿಂದ ನೇರವಾಗಿ ದೇವಸ್ಥಾನ ಪ್ರಾಂಗಣ ಸೇರುವಂತೆ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ಅದಕ್ಕೆ ಅಡ್ಡಲಾಗಿ ಎರಡು ಮನೆಗಳಿವೆ. ಅವರಿಗೆ ಪರಿಹಾರ ನೀಡಿ ಮನೆಗಳನ್ನು ಪಡೆದು ರಸ್ತೆಯನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ದಕ್ಷಿಣ ದಿಕ್ಕಿನ ಬದಲಾಗಿ, ಮುಖ್ಯ ರಸ್ತೆಯಿಂದ ಕೇವಲ ೧೦೦ ಮೀ ಅಂತರದೊಳಗೇ ನೇರವಾಗಿ ಮಂದಿರದ ಪ್ರಾಂಗಣವನ್ನು ಪ್ರವೇಶಿಸಬಹುದು ಎಂದು ಅಭಿವೃದ್ಧಿಯ ರೂವಾರಿ ಶ್ಯಾಮ ಪಾತರದ.
೮.೫ ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ:
ರಾಷ್ಟ್ರೀಯ ಹೆದ್ದಾರಿ ೫೦ ರ ಯಲಗೂರ ಕ್ರಾಸ್ ನಿಂದ ಯಲಗೂರ ಸರ್ಕಲ್ ವರೆಗೆ ೭.೫ ಮೀ ಅಗಲದ ಸಿಸಿ ರಸ್ತೆ, ಅಲ್ಲಿಂದ ೨೦ ಅಡಿ ಅಗಲದ ಸಿಸಿ ರಸ್ತೆ ನಿರ್ಮಿಸಲು ೮.೫ ಕೋಟಿ ರೂ ವೆಚ್ಚದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಕೈಗೊಳ್ಳಲು ಸರ್ಕಾರ ಅನುಮತಿ ನೀಡಿದೆ. ಶೀಘ್ರವೇ ಟೆಂಡರ್ ಆಗಿ ಕಾಮಗಾರಿ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಅವರು ತಿಳಿಸಿದರು.
ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯಗಳನ್ನು ೨೦ ಲಕ್ಷ ರೂ ವೆಚ್ಚದಲ್ಲಿ ಕನ್ನಡ ಶಾಲೆಯ ಬಳಿ ನಿರ್ಮಿಸಲಾಗಿದೆ.
ಸ್ನಾನಘಟ್ಟ ನಿರ್ಮಾಣ:
ಭಕ್ತಾದಿಗಳು ಕೃಷ್ಣಾ ನದಿಯಲ್ಲಿ ಸ್ನಾನ ಹಾಗೂ ಮತ್ತೀತರ ದೈವಿ ಕಾರ್ಯ ಕೈಗೊಳ್ಳಲು ಕೃಷ್ಣಾ ನದಿಗೆ ಬರುವುದು ವಾಡಿಕೆ. ಅವರ ಅನುಕೂಲಕ್ಕಾಗಿ ಸ್ನಾನ ಘಟ್ಟ ನಿರ್ಮಾಣ, ಮಹಿಳೆ, ಪುರುಷರಿಗೆ ಪ್ರತ್ಯೇಕ ಬಟ್ಟೆ ಬದಲಾವಣೆ ಕೋಣೆ ನಿರ್ಮಿಸಲು ಅಂದಾಜು ೩ ಕೋಟಿ ರೂ ವೆಚ್ಚದಲ್ಲಿ ಟೆಂಡರ್ ಆಗಿದ್ದು ಕಾಮಗಾರಿಯೂ ಆರಂಭಗೊಂಡಿದೆ, ಈಗಾಗಲೇ ನದಿಯಿಂದ ಯಲಗೂರ ಗ್ರಾಮದವರೆಗೆ ೧.೩೦ ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. ಈಗ ಗ್ರಾಮ ಪಂಚಾಯ್ತಿ ಕಟ್ಟಡದ ಹಿಂಭಾಗ ಮಹಿಳೆಯರಿಗೆ ಪ್ರತ್ಯೇಕ ಸ್ನಾನಗೃಹ ನಿರ್ಮಿಸಲಾಗಿದೆ.
ನೂತನ ತೇರು:
ಕಾರ್ತಿಕೋತ್ಸವದ ಎರಡನೇ ದಿನ ನಡೆಯುವ ರಥೋತ್ಸವಕ್ಕೆ ಸಹಸ್ರಾರು ಜನರು ಸಾಕ್ಷಿಯಾಗುತ್ತಾರೆ. ಹೀಗಾಗಿ ೪೦ ಲಕ್ಷ ರೂ ವೆಚ್ಚದಲ್ಲಿ ನೂತನ ಕಟ್ಟಿಗೆಯ ರಥ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ದೇವಸ್ಥಾನದ ಸಮಿತಿ ವತಿಯಿಂದ ಬೆಳ್ಳಿಯ ಚಿಕ್ಕ ರಥ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದು ಸಮಿತಿಯ ಮುಖಂಡರು ತಿಳಿಸಿದರು.
ಸಮುದಾಯ ಭವನ:
ಈಗಾಗಲೇ ಪ್ರವಾಸೋದ್ಯಮ ಸೇರಿದಂತೆ ನಾನಾ ಇಲಾಖೆಯಿಂದ ನಿರ್ಮಿಸಲಾದ ಧರ್ಮ ಶಾಲೆ (ಯಾತ್ರಿನಿವಾಸ) ಸದ್ಭಳಕೆಗಾಗಿ ಕೆಳಭಾಗವನ್ನು “ಪವನ ಪುತ್ರ ಮಂಗಲ ಕಾರ್ಯಾಲಯ’ವಾಗಿ ಪರಿವರ್ತಿಸಲಾಗಿದೆ. ಮೇಲ್ಭಾಗದಲ್ಲಿ ೧೯ ಕೋಣೆಗಳು, ಅದಕ್ಕೆ ತಕ್ಕಂತೆ ಅಗತ್ಯ ಶೌಚಾಲಯಗಳಿವೆ. ಭಕ್ತಾದಿಗಳ ವಾಸಕ್ಕೆ, ಶೈಕ್ಷಣಿಕ ಪ್ರವಾಸಕ್ಕೆ ಬಂದ ಮಕ್ಕಳ ವಸತಿಗೂ ಒದಗಿಸಲಾಗುವುದು ಎಂದು ಗ್ರಾಮದ ಭೀಮಣ್ಣ ಅವಟಗೇರ ತಿಳಿಸಿದರು.
೨೦ ಕೋಟಿ ರೂ ಹೆಚ್ಚಿನ ಅನುದಾನ:
ಶಾಸಕರ ಅನುದಾನದಲ್ಲಿ ೧೦೦*೧೦೦ ಅಡಿ ಅಳತೆಯ ೨ ಕೋಟಿ ರೂ ವೆಚ್ಚದಲ್ಲಿ ಮತ್ತೊಂದು ಸಮುದಾಯ ಭವನವನ್ನು ಗ್ರಾಮ ಪಂಚಾಯ್ತಿ ನೂತನ ಕಟ್ಟಡದ ಹಿಂಭಾಗದಲ್ಲಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ.
ಒಟ್ಟಾರೇ ೨೦ ಕೋಟಿ ರೂ ಗೂ ಹೆಚ್ಚಿನ ಹಣದ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಸಿ.ಎಸ್.ನಾಡಗೌಡ ಅನುದಾನ ಒದಗಿಸುತ್ತಿದ್ದು, ನಮ್ಮ ಬೇಡಿಕೆಗೆ ತಕ್ಕಂತೆ ಸ್ಪಂದಿಸುತ್ತಿದ್ದಾರೆ ಎಂದು ಶ್ಯಾಮ ಪತರದ ತಿಳಿಸಿದರು. ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಪಿಎಲ್ ಡಿ ಬ್ಯಾಂಕ್ ನ ಹೊಸ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

