ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಂದ ಸಿಎಂ ಸಿದ್ದರಾಮಯ್ಯಗೆ ಸಲ್ಲಿಕೆ
ಬೆಂಗಳೂರು: ಕರ್ನಾಟಕದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಜನ ಗಣತಿ) ವರದಿಯನ್ನು ಹಿಂದುಳಿದ ವರ್ಗಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಭೇಟಿಯಾದ ಜಯಪ್ರಕಾಶ್ ಹೆಗ್ಡೆ, 2015ರಲ್ಲಿ ನಡೆಸಿದ್ದ ಸಮೀಕ್ಷೆಯ ವರದಿ ಸಲ್ಲಿಕೆ ಮಾಡಿದ್ದಾರೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಯಾವುದೇ ದಾಖಲೆಗಳು ಕಳೆದು ಹೋಗಿಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ. ವರದಿಯ ಅಂಶಗಳನ್ನು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ. ಅದು ಸರ್ಕಾರದ ಕೆಲಸ” ಎಂದರು.
ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಹಾಗೂ ಶಿಫಾರಸುಗಳನ್ನು ಒಳಗೊಂಡ 200 ಪುಟಗಳ ಪ್ರಧಾನ ವರದಿ ಮತ್ತು 48 ಸಂಪುಟಗಳಷ್ಟಿರುವ ದತ್ತಾಂಶದ ವಿವರಗಳನ್ನು ಮುಖ್ಯಮಂತ್ರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಿದರು.
ವರದಿ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ರಾಜ್ಯ ವಿವಿಧ ಸಮುದಾಯಗಳ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಸರ್ಕಾರ 158.47 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಆದರೆ, ಕಾಂತರಾಜು ಆಯೋಗದ ಅವಧಿ ಮುಕ್ತಾಯಗೊಳ್ಳುವ ಮುನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರಲಿಲ್ಲ.
ನಂತರ ಬಿಜೆಪಿ ಸರ್ಕಾರ ಬಂದಿದ್ದರಿಂದ ಸಮೀಕ್ಷೆಯ ವರದಿಯ ಸಲ್ಲಿಸುವ ಕಾರ್ಯ ನಡೆದಿರಲಿಲ್ಲ. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದಿದ್ದು, ಅಂದಿನ ಸಮೀಕ್ಷೆಯ ವರದಿಯನ್ನು ಪಡೆದುಕೊಂಡಿದೆ.

