ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ನಟ ಕೆ ಶಿವರಾಮ್ ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೆ ಶಿವರಾಮ್ ಅವರು ಮೊದಲ ಬಾರಿಗೆ ಕನ್ನಡದಲ್ಲಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಿದ್ದರು.
ನಟ ಕೆ ಶಿವರಾಮ್ ಅವರಿಗೆ ಬುಧವಾರ ಹೃದಯಾಘಾತವಾಗಿತ್ತು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ.
ರಾಮನಗರ ಜಿಲ್ಲೆಯ ಬಿಡದಿ ಬಳಿಯ ಹಳ್ಳಿಯಲ್ಲಿ 1953ರಲ್ಲಿ ಜನಿಸಿದ್ದ ಶಿವರಾಮು, 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯೂ ಆಗಿದ್ದರು. ಆ ಮೂಲಕ ಕನ್ನಡದಲ್ಲಿ ಐಎಎಸ್ ಬರೆದು, ಅಧಿಕಾರಿಯಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಕೆ.ಶಿವರಾಮ್ ಅವರು ರಾಜ್ಯದ ಹಲವು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಸಿನಿಮಾ ರಂಗದಲ್ಲೂ ತೊಡಗಿಸಿಕೊಂಡಿದ್ದ ಕೆ.ಶಿವರಾಮ್ 1993ರಲ್ಲಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಾಗತಿಹಳ್ಳಿ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು. ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು.
2013ರಲ್ಲಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಸ್ವಯಂ ನಿವೃತ್ತಿ ಪಡೆದ ಅವರು ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಶಿವರಾಮ್ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂತಾಪವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಭಾರತೀಯ ಆಡಳಿತ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀ ಕೆ.ಶಿವರಾಮ್ ಅವರು ಇಂದು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಟರಾಗಿಯೂ ಹಲವು ಚಿತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

