‘ಆರೋಗ್ಯ ಅಂಗಳ’- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ
ಆ ಮನೆಯ ಯಜಮಾನ ದಿನದ ಮೂರು ಹೊತ್ತು ಅನ್ನವನ್ನು ಉಣ್ಣುತ್ತಾನೆ. ಆದರೆ ಆತನದು ಜೋರಾಗಿ ಗಾಳಿ ಬಿಟ್ಟರೆ ಹಾರಿ ಹೋಗುವಷ್ಟು ಸಣಕಲು ಮೈಕಟ್ಟು. ಹಾಗಾದರೆ ಅನ್ನ ತಿಂದರೆ/ಉಂಡರೆ ಮೈ ಬರುವುದಿಲ್ಲವೇ!??
ಇನ್ನೊಂದು ಮನೆಯಲ್ಲಿ ಒಂದು ಚೂರು ಸಿಹಿಯನ್ನು ಬಾಯಿಗೆ ಹಾಕದ, ಸಕ್ಕರೆಯನ್ನು ತಿನ್ನದ, ಕೇವಲ ಚಪಾತಿ, ರೊಟ್ಟಿ, ತರಕಾರಿ, ಹಣ್ಣುಗಳನ್ನು ಸೇವಿಸುವ ಆ ಮನೆಯ ಪ್ರತಿಯೊಬ್ಬ ಸದಸ್ಯರು ತುಸು ಸ್ಥೂಲಕಾಯರೇ???
ಮತ್ತೊಂದೆಡೆ ಇನ್ನೊಬ್ಬ ವ್ಯಕ್ತಿ ಏನೆಲ್ಲವನ್ನು ತಿಂದು ಉಂಡು ಅರಗಿಸಿಕೊಂಡರೂ ಆತನದ್ದು ಕೃಶ ಶರೀರ. ಹಾಗಾದರೆ ಆತನ ಬೊಜ್ಜು ಹೋಯಿತೆಲ್ಲಿಗೆ ??
ಮತ್ತೂ ಕೆಲವು ಜನ ಅದೆಷ್ಟೇ ವಿವಿಧ ಬಗೆಯ ಡಯಟ್ಗಳನ್ನು ಪಾಲಿಸಿದರೂ ಆ ಸಮಯಕ್ಕೆ ಇಳಿಯುವ ತೂಕ ಕೆಲವೇ ತಿಂಗಳುಗಳಲ್ಲಿ ‘ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲಿ’ ಎಂಬಂತೆ ಮತ್ತೆ ಮತ್ತೆ ಕಾಡುತ್ತದೆ. ಹಾಗಾದರೆ ಅವರ ಡಯೆಟ್ ಸುಳ್ಳೇ!?
ಪ್ರತಿ ಆರು ತಿಂಗಳು, ವರ್ಷಕ್ಕೊಮ್ಮೆ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಅವರು ಕೊಡುವ ಆಹಾರವನ್ನು ಸೇವಿಸುತ್ತ, ಅವರು ನೀಡುವ ಎಲ್ಲ ರೀತಿಯ ಚಿಕಿತ್ಸೆಗಳಿಗೆ ಸ್ಪಂದಿಸುವ ಜನರು ಕೂಡ ಆ ಕೇಂದ್ರದಿಂದ ಹೊರಗೆ ಬಂದ ನಂತರ ಕೆಲವೇ ತಿಂಗಳುಗಳಲ್ಲಿ ಮತ್ತೆ ತಮ್ಮ ಮೊದಲಿನ ಗಾತ್ರಕ್ಕೆ ಮರಳುತ್ತಾರೆ.. ಹೀಗೇಕೆ??
ಮೇಲಿನ ಎಲ್ಲ ಪ್ರಶ್ನೆಗಳು ಮೇಲ್ನೋಟಕ್ಕೆ ಸರಳವೆನಿಸಿದರೂ, ಆಳವಾಗಿ ಯೋಚಿಸಿದಾಗ ಉತ್ತರ ಸಿಗದ, ಗೊತ್ತಿದ್ದರೂ ಅರಿವಿಗೆ ನಿಲುಕದ ಮಿಲಿಯನ್ ಡಾಲರ್ ಪ್ರಶ್ನೆಗಳೇ!!
ಬನ್ನಿ ಕೆಲವು ಉತ್ತರಗಳನ್ನು ನಾವೇ ಹುಡುಕೋಣ.. ಮೊಟ್ಟ ಮೊದಲನೆಯದಾಗಿ ಮನುಷ್ಯನ ದೈಹಿಕ ಅಂಗ ರಚನೆಯು ಆತನ ಪಾಲಕ ಡಿ ಎನ್ ಎ ಗಳಿಂದ ಅಭಿವೃದ್ಧಿಪಡಿಸಲ್ಪಟ್ಟಿದ್ದು ವಂಶ ಪಾರಂಪರ್ಯವಾಗಿ ಬಂದಿರುತ್ತದೆ. ಆದ್ದರಿಂದ ಮನುಷ್ಯನ ಎತ್ತರ, ಬಣ್ಣ, ಗಾತ್ರ, ಯೋಚನಾ ಶಕ್ತಿ ಬುದ್ಧಿ ಮುಂತಾದ ಎಲ್ಲಾ ವಿಷಯಗಳು ಆತನ ವಂಶವಾಹಿಯಿಂದ ಆತನಿಗೆ ಬಂದಿರುತ್ತದೆ. ಮೇಲಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿಯೇ ಸಿಗುತ್ತದೆ.
ಎರಡನೆಯದಾಗಿ ವ್ಯಕ್ತಿಯ ಜೀವನ ಶೈಲಿ ಆತನ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಮನುಷ್ಯನ ಅತಿಯಾದ ಆಲಸಿ ಜೀವನ, ದೈಹಿಕ ಶ್ರಮವಿಲ್ಲದ, ವ್ಯಾಯಾಮರಹಿತ ಮತ್ತು ಆರಾಮ ಕುರ್ಚಿಗೆ ಕಟ್ಟಿ ಹಾಕಿದಂತಹ ಜೀವನಶೈಲಿ ವ್ಯಕ್ತಿಯ ಬೊಜ್ಜಿಗೆ ಕಾರಣವಾಗುತ್ತದೆ.
ಅತಿಯಾದ ಸಿಹಿ, ಬೇಕರಿ ಉತ್ಪನ್ನಗಳ ಸೇವನೆ, ಮಾದಕ ಪದಾರ್ಥಗಳ ಸೇವನೆ, ಹೆಚ್ಚು ಮಸಾಲೆ ಭರಿತ ಆಹಾರ ಮತ್ತು ಹೊರಗಿನ ಸಿದ್ಧಪಡಿಸಲ್ವಟ್ಟ ಆಹಾರಗಳ ಸೇವನೆ ವ್ಯಕ್ತಿಯ ಬೊಜ್ಜಿಗೆ ಕಾರಣವಾಗುತ್ತದೆ. ಚೂರೇ ಚೂರು ಎಂದು ಪ್ರತಿದಿನವೂ ತುಸುವೇ ತಿನ್ನುತ್ತಾ ಹೋದರೂ ಅಲ್ಲಿ ಬಳಸುವ ರುಚಿ ಕಾರಕಗಳು ರಾಸಾಯನಿಕಗಳಿಂದ ಕೂಡಿದ್ದು ಅವು ವ್ಯಕ್ತಿಯ ಜೀರ್ಣಾಂಗ ಮತ್ತು ಪಿತ್ತಕೋಶಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಪ್ಯಾಕೆಟ್ಟುಗಳಲ್ಲಿ ಶೇಖ ರಿಸಲ್ಪಡುವ ಆಹಾರ ಪದಾರ್ಥಗಳು ಸೋಡಿಯಂ ಕ್ಲೋರೈಡ್ ಅಂಶವನ್ನು ಹೊಂದಿದ್ದು ಇದರಿಂದ ವ್ಯಕ್ತಿಯು ಅತಿಯಾದ ರಕ್ತದೊತ್ತಡ, ಬೊಜ್ಜು, ಅಜೀರ್ಣ, ಗ್ಯಾಸ್, ಅಸಿಡಿಟಿಗಳಂತಹ ಸಮಸ್ಯೆಗಳಿಗೆ ಈಡಾಗುತ್ತಾನೆ.
ಹಾಗಾದರೆ ಡಯಟ್ ಮಾಡುವುದು ತಪ್ಪೇ?? ಖಂಡಿತ ತಪ್ಪಲ್ಲ. ಈ ಜಗತ್ತಿನಲ್ಲಿ ಅತಿ ಹೆಚ್ಚು ದುರ್ಬಳಕೆಯಾಗುವ ಪದವೆಂದರೆ ಅದು ಡಯಟ್. ಡಯಟ್ ಎಂದರೆ ಪಥ್ಯ, ಹಿತಮಿತವಾದ ಆಹಾರ ಎ0ದರ್ಥ. ಈ ಪಥ್ಯವನ್ನು ನಾವು ಸಮತೋಲಿತ ಆಹಾರವನ್ನಾಗಿಸಿ ನಮ್ಮ ದೇಹದ ದೈನಂದಿನ ಅವಶ್ಯಕತೆಯ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ , ಕಾರ್ಬೋಹೈಡ್ರೇಟುಗಳನ್ನು ಸರಿಯಾದ ಪ್ರಮಾಣದಲ್ಲಿ ವಿಂಗಡಿಸಿ ಸೇವಿಸಬೇಕು. ಇದನ್ನೇ ನುರಿತ ಡಯಟೀಶಿಯನ್ ಗಳು ಮಾಡುವುದು. ನಮ್ಮ ಹಿರಿಯರು ಹಿಂದಿನ ಕಾಲದಿಂದಲೂ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ಈ ಪದ್ಧತಿಯನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿದ್ದಾರೆ.
ನಮ್ಮ ಪೂರ್ವಜರು ಹೇಳುತ್ತಿದ್ದ ರಾತ್ರಿ ಊಟವಾದ ನಂತರದಿಂದ ಮರುದಿನ ಮುಂಜಾನೆಯ ಅಲ್ಪೋಪಹಾರ ಸೇವನೆಯವರೆಗಿನ 12 ರಿಂದ 16 ಗಂಟೆಗಳ ಮಧ್ಯಂತರ ಅವಧಿಯನ್ನು ವಿದೇಶಿಯರು ಇಂಟರ್ಮಿಟೆಂಟ್ ಫಾಸ್ಟಿಂಗ್ ಎಂಬ ಹೆಸರಿನಲ್ಲಿ ಮಾಡುತ್ತಿದ್ದಾರೆ. ವಿದೇಶಿಯರನ್ನು ಅನುಕರಿಸುತ್ತಿರುವ ನಮಗೆ ಇದು ನಮ್ಮದೇ ಪದ್ಧತಿ ಎಂದು ಅರಿವಾಗಲು ಇನ್ನೆಷ್ಟು ಕಾಲ ಬೇಕು?
ನಮ್ಮ ಆಯುರ್ವೇದದಲ್ಲಿ ಷಡ್ರಸಗಳ ಸೇವನೆ ಅತ್ಯಂತ ಅವಶ್ಯಕ ಎಂದು ಹೇಳಿದ್ದಾರೆ. ಆದರೆ ಡಯಟ್ ನ ಹೆಸರಿನಲ್ಲಿ ಒಮ್ಮಿಂದೊಮ್ಮೆಲೆ ಎಲ್ಲವನ್ನು ತ್ಯಜಿಸುವ ಕೇವಲ ಹಣ್ಣಿನ ರಸ ಸೇವನೆ ಇಲ್ಲವೇ ಮೊಳಕೆ ಕಾಳುಗಳ ಸೇವನೆ ಉಪ್ಪಿಲ್ಲದ ಊಟ ಮಾಡುವುದು ಖಂಡಿತವಾಗಿಯೂ ತಪ್ಪು. ಪ್ರತಿದಿನವೂ ಕೇವಲ ಹೊಟ್ಟೆ ಹಸಿದಾಗ ಮಾತ್ರ ಹಿತಮಿತವಾಗಿ ಆಹಾರ ಸೇವನೆ ಮಾಡುವುದು, ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳ ಸೇವನೆ ಮಾಡುವುದು ಅಪೇಕ್ಷಣೀಯ.
ನಮ್ಮ ಪೂರ್ವಜರು ಪ್ರತಿದಿನ ಮುಂಜಾನೆ ನಿತ್ಯ ಕರ್ಮಗಳನ್ನು ಪೂರೈಸಿ ಮನೆಗೆಲಸಗಳನ್ನು ಸ್ನಾನ ಪೂಜೆಗಳ ನಂತರ ಆಹಾರ ಸೇವನೆ ಮಾಡುತ್ತಿದ್ದರು. ಈ ಎಲ್ಲಾ ದೈಹಿಕ ಶ್ರಮದ ಕೆಲಸಗಳ ನಂತರ ಖಂಡಿತವಾಗಿಯೂ ಹೊಟ್ಟೆ ಹಸಿದು ಆಹಾರ ಸೇವಿಸುತ್ತಿದ್ದರು. ನಿರಂತರವಾದ ಚಟುವಟಿಕೆಯಿಂದ ಕೂಡಿದ ಜೀವನ ಶೈಲಿಯು ಅಜೀರ್ಣ, ಹೊಟ್ಟೆ ಉಬ್ಬರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ.
ಹಿಂದೆಲ್ಲ ಅಮಾವಾಸ್ಯೆ ಹುಣ್ಣಿಮೆ ಹಬ್ಬ ಹರಿದಿನಗಳಲ್ಲಿ ಮಾತ್ರ ಸಿಹಿ ತಿಂಡಿಗಳನ್ನು ಮಾಡುವ ಮತ್ತು ತಿನ್ನುವ ಪರಿಪಾಠವಿದ್ದು ಯಾವುದೇ ರೀತಿಯ ಶರ್ಕರ ಪಿಷ್ಟ ಪದಾರ್ಥಗಳು ದೇಹವನ್ನು ಸೇರುತ್ತಿರಲಿಲ್ಲ. ಒಂದು ದಿನ ಹೊಟ್ಟೆ ಬಿರಿಯ ಸಿಹಿ ತಿಂದರೂ ಮುಂದಿನ ಹದಿನೈದು ದಿನಗಟ್ಟಲೆ ಮತ್ತೆ ಸಿಹಿ ಪದಾರ್ಥಗಳನ್ನು ತಿನ್ನಲು ಅವಕಾಶವಿರಲಿಲ್ಲ. ಇನ್ನು ಸ್ಥಳೀಯವಾಗಿ ಬೆಳೆಯುವ ದವಸ ಧಾನ್ಯಗಳನ್ನು ಸ್ವಚ್ಛಗೊಳಿಸಿ ಬೀಸಿ ಇಲ್ಲವೇ ಗಿರಣಿಗೆ ಹಾಕಿಸಿ ತಯಾರಿಸುವ ರೊಟ್ಟಿ, ಚಪಾತಿ ದೋಸೆಗಳು, ಗದ್ದೆಗಳಲ್ಲಿ ಬೆಳೆಯುತ್ತಿದ್ದ ಬತ್ತದಿಂದ ತಯಾರಿಸಿದ ಅಕ್ಕಿ, ಮನೆಯ ಹಿತ್ತಲಿನಲ್ಲಿ ಬೆಳೆಯುತ್ತಿದ್ದ ಸೊಪ್ಪುತರಕಾರಿಗಳು, ಅವಶ್ಯಕತೆಗಳಿಗನುಗುಣವಾಗಿ ಬೆಳೆಯುವ ಕಾಳು ಕಡಿಗಳ ಸೇವನೆ ನಮ್ಮ ಆರೋಗ್ಯವನ್ನು ಕಾಯುತ್ತಿದ್ದವು.
ಎಷ್ಟೇ ಶ್ರೀಮಂತರಾದರೂ ಎಲ್ಲರ ಮನೆಯಲ್ಲಿಯೂ ಏಕರೂಪ ಆಹಾರ ಪದ್ಧತಿ ಇತ್ತು. ಹೊರಗಿನ ಊಟ ತಿಂಡಿಗೆ ಅವಕಾಶವಿಲ್ಲದೆ ಹೋಗುತ್ತಿತ್ತು.
ಬದಲಾದ ಕಾಲಘಟ್ಟದಲ್ಲಿ ಬೀದಿಗೆ 20 ತಿಂಡಿ ಅಂಗಡಿಗಳು, ಪಾನಿಪುರಿ ಸ್ಟಾಲ್ಗಳು, ಬೇಕರಿಗಳು ಮನುಷ್ಯನ ಜಿಹ್ವಾ ಚಾಪಲ್ಯವನ್ನು ತಣಿಸುತ್ತವೆಯೇನೋ ನಿಜ …ಆದರೆ ಆರೋಗ್ಯ??
ಮತ್ತೇನು ಮಾಡುವುದು ಬೇಕಾಗಿಲ್ಲ. ನಮಗೆ ನಾವೇ ಕೆಲವು ಪರಿಮಿತಿಗಳನ್ನು ಹಾಕಿಕೊಂಡು ಊಟದಲ್ಲಿ ಹಿತವಾದ ಮತ್ತು ಮಿತವಾದ ಆಹಾರವನ್ನು ಸೇವಿಸುತ್ತಾ ಬಾಯಿ ಚಪಲಕ್ಕೆ ಕಡಿವಾಣ ಹಾಕಿ ಶರ್ಕರ ಪಿಷ್ಟ ಪದಾರ್ಥಗಳಿಗೆ ಬೇಡ ಎಂದು ಹೇಳುತ್ತಾ ಆರೋಗ್ಯವನ್ನು ಕಾಯ್ದುಕೊಳ್ಳಬೇಕು. ಕಷ್ಟ ಆಗಬಹುದು, ನಿಜ. ಆದರೆ ಇಂದಿಗೂ ಕೆಲವು ಪಂಗಡಗಳ ಜನರು ಕಡ್ಡಾಯವಾಗಿ ಹೊರಗಿನ ಆಹಾರವನ್ನು ಬಹಿಷ್ಕರಿಸಿ ಮನೆಯಲ್ಲಿಯೇ ತಯಾರಿಸಿದ ಶುದ್ಧವಾದ ಮತ್ತು ತಾಜಾ ಆಹಾರವನ್ನು ಸೇವಿಸುತ್ತಿದ್ದಾರೆ ಪ್ರತಿ ವಾರ,15 ದಿನಗಳಿಗೊಮ್ಮೆ ಸಂಪೂರ್ಣ ಉಪವಾಸ ಮಾಡುತ್ತಾ ದೇಹದ ಜೀರ್ಣಾಂಗಕ್ಕೆ ವಿಶ್ರಾಂತಿಯನ್ನು ನೀಡುತ್ತಾ, ‘ಲಂಘನಂ ಪರಮೌಶಧಂ’ ಎಂಬ ತಜ್ಞರ ವಾಣಿಯಂತೆ ಜೀವಿಸುತ್ತಿದ್ದಾರೆ . ಅಪವಾದಗಳನ್ನು ಹೊರತುಪಡಿಸಿ ಅಂತಹವರ ಹತ್ತಿರ ಯಾವ ಕಾಯಿಲೆಗಳು ಸುಳಿಯುತ್ತಿಲ್ಲ. ಹಾಗಾದರೆ ನಾವು ಕೂಡ ಡಯಟ್ ಎಂಬ ಪದದ ಸರಿಯಾದ ಅರ್ಥವನ್ನು ಅರಿತು ಅದರಂತೆ ಆಹಾರ ಸೇವನೆಯ ಪದ್ಧತಿಯನ್ನು ಅನುಸರಿಸೋಣ. ಏನಂತೀರಾ?
– ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ