ತಕ್ಷಣವೇ ನಿಯೋಜನೆಗೊಂಡ ಸಿಬ್ಬಂದಿ ಮತ್ತು ಅಂಬುಲನ್ಸ್ ವಾಪಸ್ ಆದೇಶ
ಕಲಕೇರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ, ಅಂಬುಲನ್ಸ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಿ. ೫ರ ರಾತ್ರಿಯಿಂದ ಅಂಬೇಡ್ಕರ್ ಸೇನೆ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಬುಧವಾರ ಸಾಯಂಕಾಲ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ (ಡಿಹೆಚ್‌ಓ) ಡಾ. ಬಸವರಾಜ ಹುಬ್ಬಳ್ಳಿ ಅವರು ಧರಣಿನಿರತರ ಸಮಸ್ಯೆಗಳನ್ನು ಆಲಿಸಿ ೧೦ ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆದರೆ ಸುಮಾರು ವರ್ಷಗಳಿಂದ ಇರುವ ಸಮಸ್ಯೆಗಳು ಹೋರಾಟ ಮಾಡಿದಾಗ ಮಾತ್ರ ಮೇಲಾಧಿಕಾರಿಗಳು ಬಂದು ಆಶ್ವಾಸನೆ ನೀಡಿ ಹೋಗುತ್ತಾರೆ ಮತ್ತೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಜನಸಾಮಾನ್ಯರ ಗೋಳು ಕೇಳುವವರಾರು ಎಂದು ವಸ್ತುಸ್ಥಿತಿಯನ್ನು ಬಿಚ್ಚಿಟ್ಟ ಪ್ರತಿಭಟನಾಕಾರರು ಕೂಡಲೇ ಡೆಪ್ಯುಟೇಶನ್ ಮೇಲೆ ತೆರಳಿದ ಸಿಬ್ಬಂದಿಗಳನ್ನು ವಾಪಸ್ ಕರೆಸುವ ಆದೇಶ ಕೊಡುವುದು ಮತ್ತು ಕಾಲಮಿತಿಯೊಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸುವ ವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಹೇಳಿದರು.
ಗುರುವಾರ ಡಿಹೆಚ್‌ಓ ಡಾ. ಬಸವರಾಜ ಹುಬ್ಬಳ್ಳಿ ಅವರು ಮೂರು ಜನ ಶುಶ್ರೂಷಾಧಿಕಾರಿಗಳ ನಿಯೋಜನೆ ರದ್ದುಪಡಿಸಿದ ಆದೇಶವನ್ನು ಟಿಹೆಚ್‌ಓ ಡಾ.ಎ.ಎ.ಮಾಗಿ ಅವರು ಸ್ಥಳಕ್ಕಾಗಮಿಸಿ ಧರಣಿ ನಿರತರ ಗಮನಕ್ಕೆ ತರುವ ಮೂಲಕ ಅದೇರೀತಿ ಅಂಬುಲನ್ಸ್ನ್ನು ತಕ್ಷಣವೇ ಕಲಕೇರಿ ಆಸ್ಪತ್ರೆಗೆ ನಿಯೋಜನಿಸಲಾಗಿದ್ದು, ಇನ್ನುಳಿದ ಬೇಡಿಕೆಗಳನ್ನು ೧೫ ದಿನಗಳ ಒಳಗಾಗಿ ಈಡೇರಿಸುವ ಡಿಹೆಚ್‌ಓ ಅವರ ಲಿಖಿತ ರೂಪದ ಹೇಳಿಕೆಯನ್ನು ಧರಣಿ ನಿರತ ಅಂಬೇಡ್ಕರ್ ಸೇನೆ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಇನ್ನು ೧೫ ದಿನಗಳಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವೈದ್ಯಾಧಿಕಾರಿಗಳಾದ ಡಾ.ಶಶಿಕಾಂತ ಬಾಗೇವಾಡಿ, ಅಂಬೇಡ್ಕರ್ ಸೇನೆ ತಾಲ್ಲೂಧ್ಯಕ್ಷರಾದ ಗೋಪಾಲ ಹ. ಕಟ್ಟಿಮನಿ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷರಾದ ಡಿ. ಕೆ. ದೊಡಮನಿ ಹಾಗೂ ಅಂಬೇಡ್ಕರ್ ಸೇನೆ ತಾಲೂಕು ಉಪಾಧ್ಯಕ್ಷರಾದ ಸಂಜೀವ ಎಸ್ ಉತಾಳೆ, ಮುಖಂಡರಾದ ಹಣಮಂತ ವಡ್ಡರ, ಡಾ. ಈರಣ್ಣ ಗುಮಶೆಟ್ಟಿ, ಅಶೋಕ ಭೋವಿ, ಮಲ್ಲು ನಾವಿ, ರಾಜು ಮಾದರ, ಮೈನು ನಾಯ್ಕೋಡಿ, ಲಾಳೇಮಶ್ಯಾಕ ನಾಯ್ಕೋಡಿ, ಅಜೀಜ ಮುಲ್ಲಾ, ಮುತ್ತು ಬೆಂಡೆಗುಂಬಳ, ಕಾಶಿನಾಥ್ ಕಟ್ಟಿಮನಿ, ಮಲ್ಲಿಕಾರ್ಜುನ್ ಕಟ್ಟಿಮನಿ, ಅರ್ಜುನ ನಡುವಿಮನಿ, ಬಸವರಾಜ ಕಾಂಬಳೆ, ಸಿದ್ದು ಆಲಗೂರ, ಬಾಗಪ್ಪ ದೊರೆಗೂಳ, ಈರಘಂಟಿ ಬಡಿಗೇರ ಸೇರಿದಂತೆ ಇತರರು ಇದ್ದರು.

