ಬಸವನಬಾಗೇವಾಡಿ: ಮಕ್ಕಳ ಮೇಲೆ ನಮ್ಮ ಕನಸುಗಳನ್ನು ಹೇರದೇ ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪಾಲಕರು, ಶಿಕ್ಷಕರು ಅವಕಾಶ ನೀಡಬೇಕೆಂದು ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಂಗಮೇಶ ಪೂಜಾರಿ ಹೇಳಿದರು.
ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ವಿಶ್ವಗುರು ಶಿಕ್ಷಣ ಸಂಸ್ಥೆಯ ಬಸವ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ ವಾರ್ಷಿಕೋತ್ಸವದಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಬಸವ ರಂಗೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಮಕ್ಕಳು ವ್ಯವಸ್ಥೆಗೆ ಹೊಂದಿಕೊಳ್ಳುವ ಗುಣ ಕಲಿಸದೇ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಹ ಶಿಕ್ಷಣ ಕಲಿಸಬೇಕು. ಮಕ್ಕಳಿಗೆ ಸಮಾಜದಲ್ಲಿ ಬದುಕು ಸಾಗಿಸಲು ಬೇಕಾದ ಕೌಶಲ್ಯಗಳನ್ನು ಕಲಿಸಬೇಕು. ಮಕ್ಕಳ ಮನೋವಿಜ್ಞಾನ ಅರಿತು ಅವರಿಗೆ ಅದರಂತೆ ಶಿಕ್ಷಣ ಕೊಡಿಸಬೇಕೆಂದರು.
ಮಕ್ಕಳಿಗೆ ಉತ್ತಮ ಶಾಲೆ, ಉತ್ತಮ ಪರಿಸರ ಅಗತ್ಯವಿದೆ. ಇದು ಮಕ್ಕಳ ಕಲಿಕೆಗೆ ಪೂರಕವಾಗಲಿದೆ. ೧೯೭೨ ರ ಅವಧಿಯಲ್ಲಿ ಜನಿಸಿದವರು ಜೀವನದಲ್ಲಿ ಆಸಕ್ತಿ, ಪ್ರೀತಿಗೆ ೩೦ ವರ್ಷ ಕಾಲ, ೧೯೭೨-೯೨ ರ ಅವಧಿಯಲ್ಲಿ ಜನಿಸಿದವರು ೭ ವರ್ಷ ಕಾಲ, ೧೯೯೨-೨೦೧೨ ಅವಧಿಯಲ್ಲಿ ಜನಿಸಿದವರು ೧ ತಿಂಗಳ ಕಾಲ, ೨೦೧೨ ಈಚೆಗೆ ಜನಿಸಿದವರಿಗೆ ಜೀವನದಲ್ಲಿ ವ್ಯಾಮೋಹ, ಪ್ರೀತಿ, ಆಲೋಚನೆ ಪ್ರತಿ ಕ್ಷಣದಲ್ಲಿ ಬದಲಾವಣೆಯಾಗುತ್ತದೆ ಎಂದು ಅಧ್ಯಯನವೊಂದು ಸಮೀಕ್ಷೆ ಮಾಡಿದೆ. ಇಂತಹ ಸನ್ನಿವೇಶದಲ್ಲಿ ನಾವು ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸದೇ ಅವರ ಎಲ್ಲ ಶಾಲಾ ಚಟುವಟಿಕೆಗಳಲ್ಲಿ ಪೋಷಕರು ಭಾಗವಹಿಸುವದು ಮುಖ್ಯವಾಗಿದೆ. ಈ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಪೂರಕವಾದ ಶಿಕ್ಷಣ ಕಲಿಸುವ ಜೊತೆಗೆ ಸಂಸ್ಥೆಯು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ಎಫ್.ಡಿ.ಮೇಟಿ ಮಾತನಾಡಿದರು. ಸಾನಿಧ್ಯವನ್ನು ಶೇಖರಯ್ಯ ಹಿರೇಮಠ ವಹಿಸಿದ್ದರು. ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವೈ.ಬೀರಲದಿನ್ನಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಎ.ಎಸ್.ಗುಬ್ಬಾ, ಸಿಆರ್‌ಪಿ ಬಿ.ಎಸ್.ಚನ್ನಗೊಂಡ, ನಿವೃತ್ತ ಉಪಪ್ರಾಂಶುಪಾಲ ಎಸ್.ಎಸ್.ಝಳಕಿ, ನಿವೃತ್ತ ಉಪನ್ಯಾಸಕ ಎಚ್.ಎಸ್.ಬಿರಾದಾರ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ.ಸಿಂದಗಿ, ರಾಘವೇಂದ್ರ ಚಿಕ್ಕೊಂಡ, ಸಂಗಯ್ಯ ಹಿರೇಮಠ, ಪಿ.ಎಸ್. ಮಸಬಿನಾಳ ಇತರರು ಇದ್ದರು. ಸೀತರಾಮ ಲಮಾಣಿ ಸ್ವಾಗತಿಸಿದರು. ಶಿಕ್ಷಕಿ ನದಾಫ, ಸಾಗರ ಪವಾರ ನಿರೂಪಿಸಿದರು. ಜ್ಯೋತಿ ಕೊಟ್ಲಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

