ಫೆ.12ರಂದು ನೀರು ಹರಿಸುವ ಭರವಸೆ | ನೀರು ಹರಿಸದಿದ್ದರೆ ಫೆ.13 ರಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಆಲಮಟ್ಟಿ: ಜಲಾಶಯದ ವ್ಯಾಪ್ತಿಗೆ ಬರುವ ಜಿಲ್ಲೆಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಅಖಂಡ ಕರ್ನಾಟಕ ರೈತ ಸಂಘ ಜಂಟಿಯಾಗಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ಎಂಜಿನಿಯರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಮುಖ್ಯ ಎಂಜಿನಿಯರ್ ಅವರಿಗೆ ಎರಡೂ ಸಂಘಟನೆಗಳು ಮನವಿ ಅರ್ಪಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗರಾಜ ಆಲೂರ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಬೇಕು, ಈ ಮೊದಲು ಹರಿಸಿದ ನೀರಿನಿಂದ ಕೆರೆಗಳ ಸಾಮರ್ಥ್ಯದ ಶೇ 30 ರಷ್ಟು ಮಾತ್ರ ಕೆರೆಗಳು ಭರ್ತಿಯಾಗಿವೆ. ಫೆಬ್ರುವರಿಯಲ್ಲಿಯೇ ಬಿಸಿಲಿನ ಪ್ರಖರತೆ ಹೆಚ್ಚಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಯಾವುದೇ ನೆಪ ಹೇಳದೆ ಕಾಲುವೆಗೆ ನೀರು ಹರಿಸಬೇಕು ಎಂದರು. ಇಲ್ಲದಿದ್ದರೇ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು. ಪ್ರತಿಭಟನೆ ವೇಳೆ ಕೆಬಿಜೆಎನ್ ಎಲ್ ಅಧಿಕಾರಿ ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು. ಪ್ರತಿಭಟನೆ ಮುಂದುವರೆದಾಗ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಪ್ರಾದೇಶಿಕ ಆಯುಕ್ತರೊಂದಿಗೆ ಮಾತನಾಡಿ, ಫೆ.12 ರಂದು ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನೀರು ಹರಿಸದಿದ್ದರೆ ಫೆ.13 ರಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸದಾಶಿವ ಬರಟಗಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ, ರಾಚಪ್ಪ ಉಕ್ಕಲಿ, ವೆಂಕಟೇಶ ವಡ್ಡರ, ಹೊನಕೇರಪ್ಪ ತೆಲಗಿ, ಲಕ್ಷ್ಮಣಗೌಡ ಬಿರಾದಾರ, ಮಾಧುರಾಯಗೌಡ ಬಿರಾದಾರ, ಸಂತೋಷ ಪಾಟೀಲ, ಈರಣ್ಣ ದೇವರಗುಡಿ, ವಿಠ್ಠಲ ಬಿರಾದಾರ, ರಮೇಶ ಗೌಡರ, ಸಂತೋಷ ಪಾಟೀಲ, ಸುಭಾಷ ಚೋಪಡೆ, ರಾಜು ನದಾಫ್, ಲಕ್ಷ್ಮಣ, ರ್ಯಾವಪ್ಪಗೌಡ ಪೊಲೇಶಿ, ರಾಮಣ್ಣ, ಪಾರ್ವತಿ ಲಮಾಣಿ, ಶಾಂತಾಬಾಯಿ ಮಡಿವಾಳರ, ತಾಯವ್ವ ಸೇರಿದಂತೆ ಹಲವರು ಇದ್ದರು.

