ಚಿಮ್ಮಡದಲ್ಲಿ ಕಸ ಸಂಗ್ರಹ, ವಿಲೇವಾರಿ ವಾಹನಕ್ಕೆ ಮಹಿಳೆಯೇ ಸಾರಥಿ
*– ಇಲಾಹಿ ಇ. ಜಮಖಂಡಿ*
ಚಿಮ್ಮಡ: ಗ್ರಾಮ ಪಂಚಾಯತಿಯ ಕಸದ ವಾಹನಕ್ಕೆ ಚಾಲಕಿಯಾಗಿ ಗ್ರಾಮದ ಮಹಿಳೆ ಸರೋಜಾ ಮ್ಯಾದಾರ ಸುಮಾರು ಏಳು ತಿಂಗಳಿಂದ ಗ್ರಾಮದಲ್ಲಿ ಸ್ವಚ್ಚ ವಾಹಿನಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಿಮ್ಮಡ ಗ್ರಾಮದಲ್ಲಿ ವಾರದಲ್ಲಿ ಎರಡು ದಿನ ಶನಿವಾರ ಮತ್ತು ಬುಧವಾರ ಸ್ವಚ್ಚ ವಾಹಿನಿ ಜೊತೆ ಪ್ರತಿ ಮನೆ ಮನೆಗೆ ಕಸ ಸಂಗ್ರಹಣೆ ಮಾಡುವ ಮೂಲಕ ಸ್ವಚ್ಚ ಭಾರತಕ್ಕೆ ಕೈ ಜೋಡಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತಿ ಮಹತ್ವದ ಹೆಜ್ಜೆ: ಮಹಿಳೆಯ ಆರ್ಥಿಕ ಭದ್ರತೆ. ಸ್ವಾವಲಂಬಿ ಬದುಕು. ಸಬಲೀಕರಣಕ್ಕಾಗಿ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಗ್ರಾಮಿಣ ಭಾಗದ ಹಲವು ಮಹಿಳೆಯರಿಗೆ ಚಾಲನಾ ತರಬೇತಿ ನೀಡಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತಿದೆ.
ಗ್ರಾಮದ ಸ್ವಚ್ಚ ವಾಹಿನಿಗಳಲ್ಲಿ ಕಸ ಸಂಗ್ರಹಣೆಯ ತರಬೇತಿ ಪಡೆದ ಮಹಿಳಾ ವಾಹನ ಚಾಲಕಿಯರನ್ನು ನೇಮಕ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.
ಮನೆ ಬಾಗಿಲಗಳಿಗೆ ವಾಹನ: ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಹಲವು ಗ್ರಾ.ಪಂ.ಗಳಿಗೆ ಎರಡು ವಾಹನ ಒದಗಿಸಿದ್ದು, ಈ ವಾಹನದೊಟ್ಟಿಗೆ ಪ್ರತಿ ಮನೆ ಬಾಗಿಲಿಗೆ ಬರುವ ಸಿಬ್ಬಂದಿ ಹಸಿ ಮತ್ತು ಒಣ ಕಸ ಸಂಗ್ರಹಿಸಲಿದ್ದಾರೆ.
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ೧೭ ಜನ ಮಹಿಳೆಯರು ವಾಹನ ಚಾಲನಾ ತರಬೇತಿ ಪಡೆಯುವ ಮೂಲಕ ಮಹಿಳಾ ಶಕ್ತಿಕಿರಣಕ್ಕೆ ನಾಂದಿ ಹಾಡಿದ್ದು ಇದರ ಭಾಗವಾಗಿ ಸ್ವಚ್ಚ ವಾಹನಕ್ಕೆ ಮಹಿಳೆಯರೆ ಸಾರಥಿಯಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆಯೇ ಗ್ರಾಮದ ಪ್ರತೀ ಮನೆಗಳಿಗೆ ಒಣ ಮತ್ತು ಹಸಿ ಕಸ ಸಂಗ್ರಹಕ್ಕೆ ಪ್ಯಾಸ್ಟಿಕ್ ಬಕೇಟಗಳನ್ನು ಒದಗಿಸಲಾಗಿದೆ. ಗ್ರಾ.ಪಂ.ನಿಂದ ಆಯ್ಕೆಯಾದ ಮಹಿಳೆಯರನ್ನು ತರಬೇತಿ ಕಳುಹಿಸಿಕೊಡಲಾಗುತ್ತದೆ. ತರಬೇತಿ ಪಡೆದು ಏಳು ತಿಂಗಳಿಂದ ಚಿಮ್ಮಡ ಗ್ರಾಮದಲ್ಲಿ ಸರೋಜಾ ಮ್ಯಾದಾರ ಅವರು ಉತ್ತಮವಾಗಿ ಕಾರ್ಯನಿರ್ವಸುತ್ತಿದ್ದಾರೆ. ವಾಹನ ಚಾಲನಾ ಪ್ರಮಾಣ ಪತ್ರ ಪಡೆದ ಮಹಿಳೆಯರಿಗೆ ಚಾಲಕಿಯಾಗಿ ಕಾರ್ಯನಿರ್ವಹಿಸಲು ಗ್ರಾ.ಪಂ. ಆಡಳಿತ ಮಂಡಳಿ ಗ್ರಾಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದಾರ ಹಾಗೂ ಗ್ರಾಮಸ್ಥರು ಸರೋಜಾ ಮ್ಯಾದಾರ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಒಟ್ಟಾರೆ ಕಠಿಣ ಕೆಲಸಕ್ಕೂ ಸೈ ಎಂದ ಸರೋಜಾ ಮ್ಯಾದಾರ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.


