ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡಲು ಒಪ್ಪದ ಪ್ರತಿಭಟನಾಕಾರರು
ಕಲಕೇರಿ: ವಿಜಯಪುರ ಜಿಲ್ಲಾ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ, ಅಂಬುಲನ್ಸ್ ಸೇರಿಂದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಸದರಿ ಈ ಆರೋಗ್ಯ ಕೇಂದ್ರದಕ್ಕೆ ಸುತ್ತಮುತ್ತಲಿನ ಸುಮಾರು ೩೫ ಹಳ್ಳಿಗಳ ಬಡ ಜನರು ತಮ್ಮ ಆರೋಗ್ಯ ತಪಾಸಣೆಗೆ ಬರುತ್ತಾರೆ. ಆದರೆ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿಗಳು ಇರದೇ ಇರುವುದರಿಂದ ರೋಗಿಗಳಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಮತ್ತು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾಗಿ ಉಪಚರಿಸಲು ಅವಶ್ಯಕ ಸಲಕರಣೆಗಳು ಕೂಡಾ ಇರುವುದಿಲ್ಲ. ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕೂಡಾ ಇದೆ. ಹೆಸರಿಗೆ ಮಾತ್ರ ೩೦ ಹಾಸಿಗೆಯ ಆಸ್ಪತ್ರೆ ಒಳಗಡೆ ಯಾವ ಸೌಲಭ್ಯವು ಇರುವುದಿಲ್ಲ. ಇನ್ನು ಆಸ್ಪತ್ರೆಯಲ್ಲಿ ಕೇವಲ ಇಬ್ಬರು ವೈದ್ಯರಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ನು ೪ ಸಿಬ್ಬಂಧಿಗಳು ಇಲ್ಲಿ ಕಾರ್ಯನಿರ್ವಹಿಸದೇ ಡೆಪ್ಟೇಷನ್ ಮೇಲೆ ಹೋಗಿ ಇಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದ್ದು, ಕೂಡಲೇ ಅವರನ್ನು ವಾಪಸ್ ಕರೆಸುವಂತೆ ಧರಣಿನಿರತರು ಆಗ್ರಹಪಡಿಸಿದರು.
ಅಂಬೇಡ್ಕರ್ ಸೇನೆ ತಾಲ್ಲೂಧ್ಯಕ್ಷರಾದ ಗೋಪಾಲ ಹಣಮಂತ ಕಟ್ಟಿಮನಿ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷರಾದ ಡಿ. ಕೆ. ದೊಡಮನಿ ಹಾಗೂ ಅಂಬೇಡ್ಕರ್ ಸೇನೆ ತಾಲೂಕು ಉಪಾಧ್ಯಕ್ಷರಾದ ಸಂಜೀವ ಎಸ್ ಉತಾಳೆ, ಮುಖಂಡರಾದ ಹಣಮಂತ ವಡ್ಡರ ಹಾಗೂ ವಿವಿಧ ಪದಾಧಿಕಾರಿಗಳು ಮಾತನಾಡಿದರು.
ಕಾಶಿನಾಥ್ ಕಟ್ಟಿಮನಿ, ಮಹಾದೇವ ಅಸ್ಕಿ, ಪರಶುರಾಮ ನಾಲತವಾಡ, ನಾಗರಾಜ್ ಗಜಕೋಶ, ಮಡು ಚಲವಾದಿ, ಮಲ್ಲಿಕಾರ್ಜುನ್ ಕಟ್ಟಿಮನಿ, ಸುನೀಲ್ ಕಲಕೇರಿ, ಅರ್ಜುನ ನಡುವಿಮನಿ, ಬಸವರಾಜ ಕಾಂಬಳೆ, ದೇವು ವಡ್ಡರ, ಉಮೇಶ್ ಕೆರುಟಗಿ ಸೇರಿದಂತೆ ಇತರರು ಇದ್ದರು.
ಈ ವೇಳೆ ಸ್ಥಳಕ್ಕಾಗಮಿಸಿದ ತಾಲೂಕ ಆರೋಗ್ಯ ಅಧಿಕಾರಿ ಡಾ. ಎ.ಎ.ಮಾಗಿ ಅವರು ಧರಣಿ ಸತ್ಯಾಗ್ರಹ ನಿರತರೊಂದಿಗೆ ಸಮಾಲೋಚಿಸಿ ಅವರ ಬೇಡಿಕೆಗಳನ್ನು ಸ್ವೀಕರಿಸಿ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾದಾಗ ಮೇಲಾಧಿಕಾರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುವುದಾಗಿ ಹೇಳಿ ಹೋದರು.

