ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಯಶವಂತ್ರಾಯಗೌಡ
ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ :ಯಶವಂತ್ರಾಯಗೌಡ
ಕೊಲ್ಹಾರ: ಪಟ್ಟಣಕ್ಕೆ ಸಮೀಪದ ಕೃಷ್ಣಾ ನದಿ ದಂಡೆಯಲ್ಲಿ ನಿರ್ಮಾಣವಾಗುತ್ತಿರುವ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಜಾಕ್‌ವೆಲ್ ಕಾಮಗಾರಿಯನ್ನು ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಸ್ಥಳಕ್ಕೆ ಆಗಮಿಸಿ ಬುಧವಾರ ವೀಕ್ಷಣೆ ಮಾಡಿದರು.
ಸರಕಾರಿ ಸ್ವಾಮಿತ್ವದ ಕೃಷ್ಣಾ ಭಾಗ್ಯ ಜಲನಿಗಮದ ಅಡಿಯಲ್ಲಿ ಸುಮಾರು ಎಪ್ಪತ್ತು ಸಾವಿರ ಎಕರೆ ಭೂಮಿಗಳಿಗೆ ನೀರಾವರಿ ಸೌಲಭ್ಯವನ್ನು ದೊರಕಿಸಿಕೊಡಲು ಕೈಗೊಂಡಿರುವ ಮಹತ್ವಾಕಾಂಕ್ಷಿಯ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯು ಇದಾಗಿದ್ದು ಈಗಾಗಲೇ ಪ್ರಾರಂಭಿಸಿರುವ ಜಾಕ್‌ವೆಲ್ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ಕೊಟ್ಟರು.
ಅಖಂಡ ಇಂಡಿ ತಾಲೂಕಿನ ರೈತರ ಬಹುದಿನದ ಕನಸಾಗಿರುವ ಈ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಗುತ್ತಿಗೆದಾರರು ಗುಣಮಟ್ಟದ ರೀತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ಮಾಡಿ ಬಯಲುಸೀಮೆ ಪ್ರದೇಶವಾಗಿರುವ ಇಂಡಿ, ಚಡಚಣ, ನಾಗಠಾಣ, ಭಾಗದ ರೈತರ ಜಮೀನುಗಳಿಗೆ ನೀರು ಹರಿದು ನೀರಾವರಿ ಕ್ಷೇತ್ರವಾಗಿ ಮಾರ್ಪಡಬೇಕು ಎನ್ನುವುದೇ ನನ್ನ ಕನಸಾಗಿದೆ ಎಂದ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡರು.
ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಎಚ್.ಎನ್.ಶ್ರೀನಿವಾಸ, ಸುಪರಿಟೆಂಡೆಂಟ್ ಇಂಜಿನಿಯರ ಗೋವಿಂದ ರಾಠೋಡ, ಸೇರಿದಂತೆ ವಿವಿಧ ಇಲಾಖೆಯ ಎಲ್ಲ ಅಧಿಕಾರಿ ವರ್ಗದವರು ಶಾಸಕರೊಂದಿಗೆ ಜಾಕ್‌ವೆಲ್ ಕಾಮಗಾರಿ ಪರಿಶೀಲಿಸಿ ವಿವರಣೆ ನೀಡಿದರು.

