ವಿಜಯಪುರ: ಕಾಂಗ್ರೆಸ್ ನಾಯಕ, ಸಂಸದ ಸದಸ್ಯ ರಾಹುಲ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯಯಾತ್ರೆಯು ಆಸ್ಸಾಂನಲ್ಲಿ ಪ್ರವೇಶ ಮಾಡಿದಾಗ ಅಲ್ಲಿಯ ಬಿಜೆಪಿ ಸರಕಾರ ಕಾರ್ಯಕರ್ತರನ್ನು ಚೂಬಿಟ್ಟು ರ‍್ಯಾಲಿಯ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್, ಕೇಂದ್ರದ ಬಿಜೆಪಿ ಸರಕಾರ ಜನವಿರೋಧಿಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ ಎದುರಿಸುತ್ತಿದ್ದು, ಹತಾಶೆ ಮನೋಭಾವದಿಂದ ದ್ವೇಷ ರಾಜಕಾರಣ ಮಾಡಲು ಹೊರಟಿದೆ. ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಖಾಂತರ ಬಿಜೆಪಿಯ ಗೂಂಡಾ ಕಾರ್ಯಕರ್ತರನ್ನು ಬಿಟ್ಟು ಭಾರತ ಜೋಡೋ ನ್ಯಾಯಯಾತ್ರೆಯ ನೇತೃತ್ವ ವಹಿಸಿರುವ ನಮ್ಮ ನಾಯಕ ರಾಹುಲ ಗಾಂಧಿರವರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಜನ ನಿಮ್ಮ ಮುಖವಾಡವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ ಮನೆಗೆ ಕಳುಹಿಸುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.
ಬಿಜೆಪಿ ದ್ವೇಷದ ರಾಜಕಾರಣವೇ ಇವರ ಪ್ರವೃತ್ತಿಯಾಗಿದೆ. ಅವರು ಎಷ್ಟೇ ಪ್ರಯಾಸಪಟ್ಟರೂ ನಮ್ಮ ನಾಯಕರನ್ನು ತಡೆಯಲು ಹಾಗೂ ಈ ಅಲೆಯನ್ನು ತಡೆಯಲು ಸಾಧ್ಯವಿಲ್ಲ. ಇಷ್ಟು ದಿನ ಸರಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಹಾಗೂ ವಿರೋಧ ಪಕ್ಷಗಳನ್ನು ತುಳಿಯುತ್ತಾ ಹೊರಟಿದ್ದಾರೆ. ಇವರು ಅಧಿಕಾರಕ್ಕೆ ಬಂದು ೧೦ ವರ್ಷಗಳಾದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಇಡೀ ದೇಶದ ಸಂಪತ್ತನ್ನು ಖಾಸಗಿ ವ್ಯಕ್ತಿಗಳ ಪಾಲಾಗುವಂತೆ ಮಾಡಿದ್ದು ಇವರ ಕೀರ್ತಿ. ಕೇಂದ್ರದ ಬಿಜೆಪಿ ಸರಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದ್ದು, ಸ್ವತಃ ಬಿಜೆಪಿಯವರೇ ರಾಹುಲ ಗಾಂಧಿ ಜನಪ್ರಿಯತೆ ಹಾಗೂ ಜನಪರ ಕಾಳಜಿ ಕಂಡು ಭಯಭೀತರಾಗಿ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಆಸ್ಸಾಂ ಮುಖ್ಯಮಂತ್ರಿ ಹಾಗೂ ಅವರ ಪರಿವಾರ ಕಡುಭ್ರಷ್ಟರಿದ್ದು, ಇಂತಹ ಜನವಿರೋಧಿ ಮುಖ್ಯಮಂತ್ರಿಯನ್ನು ಅಲ್ಲಿನ ರಾಜ್ಯಪಾಲರು ತಕ್ಷಣ ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಡಾ.ಗಂಗಾಧರ ಸಂಬಣ್ಣಿ, ಆಜಾದ ಪಟೇಲ, ವಿದ್ಯಾವತಿ ಅಂಕಲಗಿ, ಬಲರಾಮ ನಾಯಕ, ಆರತಿ ಶಹಾಪೂರ, ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ರವಿ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಹೊನಮಲ್ಲ ಸಾರವಾಡ, ಅಶ್ಫಾಕ ಮನಗೂಳಿ, ಬಿ.ಸಿ. ಸಾವುಕಾರ, ಶರಣಪ್ಪ ಯಕ್ಕುಂಡಿ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಅಬುಬಕರ ಬಿಜಾಪುರ, ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪಾ ಸಂಗಾಪೂರ, ಲಾಲಸಾಬ ಕೊರಬು, ಬೀರಪ್ಪ ಜುಮನಾಳ, ಎಸ್.ವ್ಹಿ. ಹಜೇರಿ, ರಾಜೇಶ್ವರಿ ಚೋಳಕೆ, ಪಯಾಜ ಕಲಾದಗಿ, ಫಿರೋಜ ಶೇಖ, ಮಹಾನಗರಪಾಲಿಕೆ ಸದಸ್ಯ ಅಪ್ಪು ಪೂಜಾರಿ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

