ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಸಂಭ್ರಮಾಚರಣೆ | ದೀಪೋತ್ಸವ | ವಿಶೇಷ ಪೂಜೆ
*– ದೇವೇಂದ್ರ ಹೆಳವರ*
ವಿಜಯಪುರ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ, ಹಾಗೂ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ
ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ಪ್ರಭು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ನಮಿಸುವ ಮೂಲಕ ಭಕ್ತಿ ಭಾವ ಮೆರೆಯಲಾಯಿತು.
ನಗರದ ಗಲ್ಲಿ-ಗಲ್ಲಿಗಳಲ್ಲಿ, ವಿವಿಧ ದೇವಸ್ಥಾನಗಳಲ್ಲಿ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬಣ್ಣದ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ ಶ್ರೀರಾಮನ ಭಾವಚಿತ್ರವಿಟ್ಟು ಜನರು ಪೂಜೆ ಸಲ್ಲಿಸಿ ಶ್ರದ್ಧಾ ಭಕ್ತಿಯಿಂದ ನಮನ ಸಲ್ಲಿಸಿದರು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನ, ಎಂ .ಜಿ. ರಸ್ತೆಯ ಶ್ರೀ ಮಧಲಾ ಮಾರುತಿ ದೇವಸ್ಥಾನ, ವಜ್ರ ಹನುಮಾನ ನಗರ, ರೇಣುಕಾ ನಗರದ ಹನುಮಾನ ದೇವಸ್ಥಾನ, ಇಬ್ರಾಹಿಂಪುರದ ಹಿರೇಮಠ, ಹನುಮಾನ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಮರಗಮ್ಮ ದೇವಿ ದೇವಸ್ಥಾನ, ಎಂ.ಜಿ ರಸ್ತೆಯ ಶ್ರೀ ಮಧಲಾ ಮಾರುತಿ ದೇವಸ್ಥಾನ, ಮನಗೂಳಿ ಅಗಸಿಯ ಹನುಮಾನ ದೇವಸ್ಥಾನ ಸೇರಿದಂತೆ ನಗರದ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಶ್ರೀರಾಮನ ಪೂಜಾ ಕಾರ್ಯಕ್ರಮಗಳು ಜರುಗಿದವು. ಅನೇಕ ಕಡೆ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು.
ನಗರ ಹೊರವಲಯದ ಗಣೇಶ ನಗರದ ಶ್ರೀ ಸಾಕ್ಷಿ ಹನುಮಾನ ದೇವಸ್ಥಾನದಲ್ಲಿ ಒಂದು ಲಕ್ಷ ಸ್ವಾಹಾಕಾರ ಸಹಿತ ಶ್ರೀ ರಾಮ ತಾರಕ ಯಜ್ಞ, ಪಲ್ಲಕ್ಕಿ ಉತ್ಸವ, ಸಾರವಾಡದ ಶ್ರೀ ಹನುಮಾನ ದೇವಸ್ಥಾನದಲ್ಲಿ ಶ್ರೀರಾಮ- ಸೀತೆ, ಲಕ್ಷ್ಮಣ ಹಾಗೂ ಹನುಮಂತನ ವಿಗ್ರಹಕ್ಕೆ ಅಭಿಷೇಕ ಹಾಗೂ ಪಲ್ಲಕ್ಕಿಯ ಭವ್ಯ ಮೆರವಣಿಗೆ ನಡೆಯಿತು.
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾ(ಬಾಲ ರಾಮನ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಮೂಲಕ ಶತಮಾನಗಳ ಕನಸು ಈಗ ನನಸಾದಂತಾಗಿದೆ.
ಅಯೋಧ್ಯೆಯ ರಾಮಮಂದಿರ ಲೋಕಾರ್ಪಣೆ ಹಾಗೂ ರಾಮಲಲ್ಲಾ (ಬಾಲರಾಮನ) ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಪವಿತ್ರ ದಿನದಂದು ದೇಶದ ಎಲ್ಲೆಡೆ ಜೈ ಶ್ರೀ ರಾಮ…ಜಯ ಜಯ ಶ್ರೀ ರಾಮ….ಇವೇ ಮುಂತಾದ ಘೋಷಣೆಗಳು ಮೊಳಗಿ ಅದು ದಿನವಿಡೀ ಅನುರಣಿಸಿತು. ದೇವಸ್ಥಾನಗಳಲ್ಲಿ ಪೂಜೆ, ಅಭಿಷೇಕ, ಹೋಮ-ಹವನ, ರಾಮನಾಮ ಜಪ, ಹಾಡು, ಭಜನೆ, ದೀಪೋತ್ಸವಗಳು ನಡೆದು ಮನೆ-ಮನಗಳಲ್ಲಿ ಸಂಭ್ರಮ ಮೂಡಿಸಿತು.
ಪ್ರತಿ ಗ್ರಾಮ-ನಗರಗಳ ದೇವಸ್ಥಾನ ಹಾಗೂ ಮನೆ-ಮನೆಗಳ ಮುಂದೆ ಸಾಲು ಸಾಲು ದೀಪ ಹಚ್ಚಿ ರಾಮಜ್ಯೋತಿ ಬೆಳಗಿಸಿದ್ದು ದೀಪಾವಳಿ ಹಬ್ಬವನ್ನು ನೆನಪಿಸಿತು.

