ಜೆಎಸ್ಸೆಸ್ ಆಸ್ಪತ್ರೆಯಲ್ಲಿ ೬೧ ಉಚಿತ ಹೆರಿಗೆ | ತಾಯಿ-ಮಕ್ಕಳು ಕ್ಷೇಮ | ರಾಮ – ಸೀತೆ ನಾಮಕರಣ
ವಿಜಯಪುರ: ರಾಮ ಮಂದಿರ ನಿರ್ಮಾಣ ಎನ್ನುವುದು ಸಮಸ್ತ ಹಿಂದೂ ಬಾಂಧವರ ಕನಸಾಗಿತ್ತು. ಇಂದು ಆ ಕನಸು ನನಸಾಗುವ ಮೂಲಕ ಮಾರ್ಯದಾ ಪುರುಷೋತ್ತಮ ಪ್ರಭು ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. ನಮ್ಮ ಪರಂಪರೆಯ ಹೆಗ್ಗಳಿಕೆಯಾಗಿರುವ ಶ್ರೀರಾಮ ಇಂದು ಅಯೋಧ್ಯೆಯ ಮಂದಿರದಲ್ಲಿ ವಿರಾಜಮಾನವಾಗಿರುವುದು ಹಿಂದೂ ಹೃದಯಗಳಲ್ಲಿ ಐನೂರು ವರ್ಷಗಳಿಂದ ಉಳಿದಿದ್ದ ಕತ್ತಲೆಯ ಮೇಲೆ ಬೆಳಕು ಚಲ್ಲಿದಂತಾಗಿದೆ ಎಂದು ರಾಮನಗೌಡ ಬ ಪಾಟೀಲ್ ಯತ್ನಾಳ ಹೇಳಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆ ಹಾಗೂ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಆಯೋಜಿಸಲಾಗಿದ್ದ ಅಯೋಧ್ಯಾ ಸಂಭ್ರಮೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಮಮಂದಿರ ಲೋಕಾರ್ಪಣೆಯನ್ನು ನೆನಪುಳಿಯುವಂತೆ ಮಾಡುವುದಕ್ಕೆಂದು ನಿರ್ಧಾರ ಮಾಡಿ ನಮ್ಮ ಆಸ್ಪತ್ರೆಯಲ್ಲಿ ಕಳೆದ ೫ ದಿನಗಳಿಂದ ಉಚಿತ ಹೆರಿಗೆ ಮಾಡಿಸುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಭಾರತದ ಇತಿಹಾಸದಲ್ಲಿಯೇ ರಾಮನ ಹೆಸರಿನಲ್ಲಿ ಇಂಥ ಸೇವೆಯನ್ನು ಒದಗಿಸಿದ್ದು ಜೆಎಸ್‌ಎಸ್ ಆಸ್ಪತ್ರೆ ಮಾತ್ರ ಎನ್ನುವುದು ನಮ್ಮ ಹೆಗ್ಗಳಿಕೆಯಾಗಿದೆ. ಅದರಲ್ಲೂ ಬಹಳಷ್ಟು ಜನ ತಾಯಂದಿರಿಗೆ ರಾಮನ ಹೆಸರಿನಲ್ಲಿ ಉಚಿತ ಹೆರಿಗೆಯಾಗಿದ್ದು ಇದಕ್ಕೆ ಶ್ರೀರಾಮನ ಕೃಪೆಯೇ ಕಾರಣ ಎನ್ನುವ ಧನ್ಯತಾ ಭಾವ ಮೂಡಿದ್ದು ಅವರಿಗೆ ರಾಮ ಸೀತೆ ಎಂದೇ ಹೆಸರಿಡುತ್ತೇವೆ ಎಂದು ಹೇಳುತ್ತಿದ್ದರು. ಇವರ ಮನದ ಇಂಗಿತವನ್ನು ಅರಿತುಕೊಂಡು ಈ ದಿನ ಆಸ್ಪತ್ರೆಯಲ್ಲಿಯೇ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿ ಗಂಡು ಮಗುವಿಗೆ ರಾಮ ಹಾಗೂ ಹೆಣ್ಣು ಮಗುವಿಗೆ ಸೀತೆ ಎಂದು ನಾಮಕರಣ ಮಾಡಿದ್ದು, ಹಾಗೂ ಅದರಲ್ಲಿ ನಾನು ಪಾಲ್ಗೊಂಡಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆರಿಗೆ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ಭಾಗ್ಯಶ್ರೀ ಮತ್ತು ತಂಡದವರು ಸೇರಿದಂತೆ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


